ADVERTISEMENT

ಹೊಸ ತಂತ್ರಜ್ಞಾನ ಬಳಕೆ: ಫಾರ್ಮಾಸಿಸ್ಟ್‌ಗಳಿಗೆ ಕರೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 19:30 IST
Last Updated 17 ಫೆಬ್ರುವರಿ 2012, 19:30 IST

ಬೆಂಗಳೂರು: `ಫಾರ್ಮಾಸಿಸ್ಟ್‌ಗಳು ಆಧುನಿಕ ತಂತ್ರಜ್ಞಾನ ಹಾಗೂ ಹೊಸ ಅನ್ವೇಷಣೆಗಳನ್ನು ತಮ್ಮ ಕೆಲಸದಲ್ಲಿ ಅಳವಡಿಸಿಕೊಳ್ಳುವ ಮೂಲಕ ಹೊಸ ತಂತ್ರಜ್ಞಾನದ ಸಮರ್ಪಕ ಬಳಕೆಗೆ ಮುಂದಾಗಬೇಕು~ ಎಂದು ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಹೇಳಿದರು.

ನಗರದಲ್ಲಿ ಶುಕ್ರವಾರ ಕಾರ್ಮಿಕರ ರಾಜ್ಯ ವಿಮಾ ನಿಗಮದ ವಜ್ರ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ `ಫಾರ್ಮಕಾನ್-2012~ ಸಮಾರಂಭದಲ್ಲಿ ಮಾತನಾಡಿದ ಅವರು, `ಬೆಳೆಯುತ್ತಿರುವ ಆರೋಗ್ಯ ಕ್ಷೇತ್ರದಲ್ಲಿ ಫಾರ್ಮಾಸಿಸ್ಟ್‌ಗಳ ಕಾರ್ಯ ಮುಖ್ಯವಾದುದು. ವೈದ್ಯರು ರೋಗಿಗಳ ಮೇಲ್ವಿಚಾರಣೆಯ ಹಾಗೂ ಚಿಕಿತ್ಸೆಗಳ ಕಾರ್ಯಯನ್ನು ನಿರ್ವಹಿಸಿದರೆ ಫಾರ್ಮಾಸಿಸ್ಟ್‌ಗಳು ರೋಗಿಗಳು ಸಂಪೂರ್ಣ ಗುಣಮುಖರಾಗುವವರೆಗೂ ಅವರ ಆರೈಕೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಜಗತ್ತಿನಲ್ಲಿ ಫಾರ್ಮಾಸಿಸ್ಟ್‌ಗಳು ಇಲ್ಲದೇ ಇರುವ ಆಸ್ಪತ್ರೆಗಳೇ ಬಹುಶಃ ಇರಲಾರವು. ಕಾರ್ಮಿಕರ ರಾಜ್ಯದ ವಿಮಾ ನಿಗಮದ ಫಾರ್ಮಾಸಿಸ್ಟ್‌ಗಳ ಬಡ್ತಿ ಹಾಗೂ ವೇತನ ಶ್ರೇಣೀಕರಣವೂ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಪ್ರಯತ್ನಿಸಲಾಗುವುದು~ ಎಂದು ಅವರು ತಿಳಿಸಿದರು.

`ರಾಜ್ಯದ 16 ಸಾವಿರ ನೋಂದಾಯಿತ ಕೈಗಾರಿಕೆಗಳಲ್ಲಿನ ಕಾರ್ಮಿಕರ ಕುಟುಂಬಗಳೂ ಸೇರಿ ಒಟ್ಟು 90 ಲಕ್ಷ ಜನರು ವಿಮಾ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ರಾಜ್ಯದ ಜನಸಂಖ್ಯೆಯ ಶೇಕಡಾ 8 ರಷ್ಟು ಸಂಘಟಿತ ಕಾರ್ಮಿಕರು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಗುತ್ತಿಗೆಯಾಧಾರಿತ ನೌಕರರೂ ಸೇರಿದಂತೆ ಇನ್ನುಳಿದ ಶೇಕಡಾ 92 ರಷ್ಟು ಅಸಂಘಟಿತ ಕಾರ್ಮಿಕರನ್ನು ಯೋಜನೆಯಡಿ ತರಲು ಕೇಂದ್ರ ಸರ್ಕಾರ ಕಾರ್ಮಿಕ ವಿಮಾ ಕಾಯ್ದೆಗೆ ತಿದ್ದುಪಡಿ ತರಬೇಕು~ ಎಂದು ಅವರು ಒತ್ತಾಯಿಸಿದರು.

`ಕಾರ್ಮಿಕ ವಿಮಾ ಆಸ್ಪತ್ರೆಗಳ ವೈದ್ಯರ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರ ವೈದ್ಯರ ನೇಮಕಾತಿ ನಡೆಸಿದೆ. ಈಗಾಗಲೇ 90 ವೈದ್ಯರ ನೇಮಕಾತಿ ಆಗಿದ್ದು, ಉಳಿದ ವೈದ್ಯರನ್ನು ಗುತ್ತಿಗೆಯಾಧಾರದಲ್ಲಿ ನೇಮಿಸಿಕೊಳ್ಳುವ ಚಿಂತನೆಗಳು ನಡೆದಿವೆ.

ಕಾರ್ಮಿಕರ ವೈದ್ಯಕೀಯ ಅಗತ್ಯಗಳಿಗಾಗಿ ರಾಜ್ಯದಲ್ಲಿ ಹೊಸದಾಗಿ 15 ಡಿಸ್ಪೆನ್ಸರಿ ಕೇಂದ್ರಗಳನ್ನು ಹಾಗೂ ದೊಡ್ಡಬಳ್ಳಾಪುರ ಮತ್ತು ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಗಳಲ್ಲಿ ಹೊಸದಾಗಿ ಕಾರ್ಮಿಕ ವಿಮಾ ಆಸ್ಪತ್ರೆಗಳನ್ನು ಆರಂಭಿಸಲಾಗುವುದು~ ಎಂದು ಅವರು ತಿಳಿಸಿದರು.

`ಕಾರ್ಮಿಕ ವಿಮಾ ಸೌಲಭ್ಯಗಳನ್ನು ಪಡೆಯುವವರಲ್ಲಿ ಮಹಿಳೆಯರ ಸಂಖ್ಯೆ ತುಂಬಾ ಕಡಿಮೆ ಇದೆ. ದೇಶದಲ್ಲಿಯೇ ಒಟ್ಟು 24 ಲಕ್ಷ ಮಹಿಳೆಯರು ಕಾರ್ಮಿಕ ವಿಮಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇನ್ನೂ ಸುಮಾರು 20 ಲಕ್ಷ ಮಹಿಳೆಯರು ಯೋಜನೆಯಡಿ ಸೌಲಭ್ಯ ಪಡೆಯುವ ಅರ್ಹತೆಗಳಿದ್ದರೂ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಅಸಮಾನತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಕಾರ್ಯ ಪ್ರವೃತ್ತವಾಗಿದೆ~ ಎಂದರು.

ಕಾರ್ಯಕ್ರಮದಲ್ಲಿ `ಫಾರ್ಮಸಿಯ ಜಾಗತೀಕರಣ ಹಾಗೂ ಗಣಕೀಕರಣ~ ವಿಷಯದ ಬಗ್ಗೆ ಮಣಿಪಾಲ್ ಕೇರ್ ಅಂಡ್ ಕ್ಯೂರ್‌ನ ಹಿರಿಯ ಫಾರ್ಮಾಸಿಸ್ಟ್ ಇಂದೂಶಂಕರ್, `ಫಾರ್ಮಸಿಯಲ್ಲಿನ ಜಾಗತೀಕರಣದ ಸವಾಲುಗಳು~ ವಿಷಯದ ಬಗ್ಗೆ ಕರ್ನಾಟಕ ವಿಜ್ಞಾನ ಪರಿಷತ್‌ನ ಸದಸ್ಯ ಥಾಮ್ಸನ್ ಪಿ. ಜಾರ್ಜ್ ಮತ್ತು `ವಿಮಾದಾರ ಮತ್ತು ಫಾರ್ಮಸಿ~ ವಿಷಯದ ಬಗ್ಗೆ ಕರ್ನಾಟಕ ವಿಜ್ಞಾನ ಪರಿಷತ್‌ನ ಫಾರ್ಮಾಸಿಸ್ ಉಪ ಸಮಿತಿಯ ಅಧ್ಯಕ್ಷ ಎಂ.ಎಸ್.ನಾಗರಾಜ್ ಉಪನ್ಯಾಸ ನೀಡಿದರು.

ಕಾರ್ಮಿಕರ ರಾಜ್ಯ ವಿಮಾ ನಿಗಮದ ವೈದ್ಯಕೀಯ ಆಯುಕ್ತ ಡಾ.ಬಿ.ಆರ್. ಕವಿಶೆಟ್ಟಿ, ನಿರ್ದೇಶಕಿ ಡಾ.ರಹೀಮುನ್ನೀಸಾ, ಉಪನಿರ್ದೇಶಕರಾದ ಡಾ.ಶ್ರೀದೇವಿ, ಡಾ.ಡಿ.ಓ.ಗಂಗಾಧರಸ್ವಾಮಿ, ಕಾರ್ಮಿಕರ ರಾಜ್ಯ ವಿಮಾ ನಿಗಮದ ನೌಕರರ ಸಂಘದ ಅಧ್ಯಕ್ಷ ಕರೀಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.