ADVERTISEMENT

ಹೊಸ ವರ್ಷ ಸಂಭ್ರಮ: ಐವರ ಬಲಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 20:08 IST
Last Updated 1 ಜನವರಿ 2014, 20:08 IST

ಬೆಂಗಳೂರು: ನಗರವೂ ಸೇರಿದಂತೆ ರಾಜ್ಯದ ವಿವಿಧೆಡೆ ಮಂಗಳ ವಾರ ರಾತ್ರಿ ಹೊಸ ವರ್ಷದ ಸಂಭ್ರಮಾಚರಣೆ ನಂತರ ನಡೆದ ಅಹಿತಕರ ಘಟನೆಗಳಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದಾರೆ.

ಹೊಸ ವರ್ಷದ ಆಚರಣೆ ನಂತರ ಸ್ನೇಹಿತನೊಂದಿಗೆ ಬೈಕ್‌ ನಲ್ಲಿ ಮೋಜಿನ ಸುತ್ತಾಟಕ್ಕೆ ಹೊರಟ ಸಲೀಂ ಪಾಷಾ (26) ಎಂಬುವರು ಪುರಭವನದ ಬಳಿ ವ್ಹೀಲಿಂಗ್‌ ಮಾಡುವಾಗ ಎದುರಿನಿಂದ ಬಂದ ಮತ್ತೆರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಘಟನೆಯಲ್ಲಿ ಸಲೀಂ ಮೃತಪಟ್ಟಿದ್ದು, ಮೂರು ಮಂದಿ ಗಾಯಗೊಂಡಿದ್ದಾರೆ.

ಕೈಲಾಶ್‌, ಚೇತನ್ ಮತ್ತು ಸಂದೀಪ್‌ ಗಾಯಗೊಂಡವರು. ಕೆಂಗೇರಿಯ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿರುವ ಕೈಲಾಶ್ ಸ್ಥಿತಿ ಗಂಭೀರವಾಗಿದೆ. ಚೇತನ್‌ ಅವ ರನ್ನು ಬನಶಂಕರಿಯ ಸೇವಾ ಕ್ಷೇತ್ರ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಸಂದೀಪ್‌ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಚಾಮರಾಜಪೇಟೆ ಬಳಿಯ ವಾಲ್ಮೀಕಿ ನಗರದ ಸಲೀಂ, ಬೈಕ್‌ ಮೆಕ್ಯಾನಿಕ್‌ ಆಗಿದ್ದಾರೆ. ಸ್ನೇಹಿತ ಸಾದಿಕ್‌ ಜತೆ ಹೊಸ ವರ್ಷದ ಸಂಭ್ರಮಾಚರಣೆಗೆ ಎಂ.ಜಿ. ರಸ್ತೆಗೆ ಬಂದಿದ್ದ ಅವರು, ಕಬ್ಬನ್‌ ಉದ್ಯಾನದ ಬಳಿ ಬೈಕ್‌ ನಿಲ್ಲಿಸಿ ಬ್ರಿಗೇಡ್‌ ಜಂಕ್ಷನ್‌ಗೆ ಬಂದಿದ್ದರು. 12 ಗಂಟೆ ನಂತರ ಬೈಕ್‌ ತೆಗೆದುಕೊಂಡು ಸಾದಿಕ್‌ ಜತೆ ಮೋಜಿನ ಸುತ್ತಾಟಕ್ಕೆ ಹೊರಟಿ ದ್ದರು. 12.15ರ ಸುಮಾರಿಗೆ ಜೆ.ಸಿ.ರಸ್ತೆ ಮಾರ್ಗವಾಗಿ ವ್ಹೀಲಿಂಗ್ ಮಾಡಿ­ಕೊಂಡು ಬಂದ ಸಲೀಂ, ಕಾರ್ಪೊ­ರೇಷನ್‌ ವೃತ್ತದಿಂದ ಸಿಟಿ ಮಾರುಕಟ್ಟೆ ಕಡೆಗೆ ಹೋಗುತ್ತಿದ್ದ ಕೈಲಾಶ್‌, ಸಂದೀಪ್‌ ಮತ್ತು ಚೇತನ್‌ ಅವರ ಬೈಕ್‌ ಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಅವರು ಸಹ ವೇಗವಾಗಿ ಬೈಕ್‌ ಚಾಲನೆ ಮಾಡಿ ಕೊಂಡು ಬರುತ್ತಿದ್ದ ಕಾರಣ, ಗಂಭೀರ ಪ್ರಮಾಣದ ಅಪಘಾತ ಸಂಭವಿಸಿದೆ. ಅಪಘಾತಕ್ಕೂ ಮುನ್ನವೇ ಬೈಕ್‌ ನಿಂದ ಪಾದಚಾರಿ ಮಾರ್ಗದ ಮೇಲೆ ಜಿಗಿದ ಸಾದಿಕ್‌, ಸಣ್ಣಪುಟ್ಟ ಗಾಯಗ ಳೊಂದಿಗೆ ಪಾರಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳು ಗಳನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸ­ಲಾ ಯಿತು ಎಂದು ಪೊಲೀಸರು ಹೇಳಿದ್ದಾರೆ.

ಪಾನಮತ್ತ ವಾಹನ ಚಾಲನೆ: 230 ಪ್ರಕರಣ
‘ಡ್ರಾಗ್‌ ರೇಸ್‌ ಮಾಡುವವ ವಿರುದ್ಧ ಕ್ರಮ ಕೈಗೊಳ್ಳಲು ಮಂಗಳವಾರ ರಾತ್ರಿ ಹೆಚ್ಚುವರಿ 500 ಮಂದಿ ಸಿಬ್ಬಂದಿಯ ನೇಮಕ ಮಾಡಲಾಗಿತ್ತು. ಪಾನಮತ್ತ­ರಾಗಿ ವಾಹನ ಚಾಲನೆ ಮಾಡುವವರ ವಿರುದ್ಧ ಸಿಬ್ಬಂದಿ, 230 ಪ್ರಕರಣ ಗಳನ್ನು ದಾಖಲಿಸಿದ್ದಾರೆ. ಜತೆಗೆ 10 ವಾಹನ­ಗಳನ್ನು ವಶಕ್ಕೆ ಪಡೆಯ ಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಆದರೆ, ಚಿಕಿತ್ಸೆಗೆ ಸ್ಪಂದಿಸದ ಸಲೀಂ ರಾತ್ರಿ 1.55ಕ್ಕೆ ಸಾವನ್ನಪ್ಪಿದರು. ಇತರೆ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ವಿವಿಧ ಆಸ್ಪತ್ರೆಗಳಿಗೆ ವರ್ಗಾಯಿಸ ಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ವೇಳೆ ಸಲೀಂ ಪಾನಮತ್ತರಾಗಿ­ದ್ದರು ಎಂಬುದು ಮೇಲ್ನೋಟಕ್ಕೆ ಗೊತ್ತಾ­ಗಿದೆ. ಉಳಿದ ಎರಡು ಬೈಕ್‌ಗಳ ಸವಾರರು ಮದ್ಯಪಾನ ಮಾಡಿದ್ದರೇ ಎಂಬ ಬಗ್ಗೆ ಇನ್ನೂ ಗೊತ್ತಾಗಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಹಲಸೂರು ಗೇಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಭ್ರಮದ ಮರು ಘಳಿಗೆಯೇ ಸಾವು
ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮುಗಿ­ಸಿ­ಕೊಂಡು ಮನೆಗೆ ಹಿಂದಿರುಗುವಾಗ ‘ವಾಹನ ಹಿಂದಿ­ಕ್ಕುವ ವಿಚಾರ’­ದಲ್ಲಿ ಎರಡು ಗುಂಪು­ಗಳ ನಡುವೆ ನಡೆದ ಜಗಳ ಯುವ­ಕನ ಕೊಲೆ­ಯಲ್ಲಿ ಅಂತ್ಯ ಕಂಡಿರುವ ಘಟನೆ ಕೋರಮಂಗಲದ ಫೋರಂ ಮಾಲ್‌ ಬಳಿ ಮಂಗಳವಾರ ರಾತ್ರಿ ನಡೆದಿದೆ.

ಬೊಮ್ಮನಹಳ್ಳಿ ಸಮೀಪದ ಮಂಗಮ್ಮನ­ಪಾಳ್ಯ ನಿವಾಸಿ ಫೈಜಲ್‌ (22) ಕೊಲೆಯಾದವರು. ಮೆಕ್ಯಾನಿಕ್‌ ಆಗಿದ್ದ ಅವರು, ತನ್ನ ಐದು ಮಂದಿ ಸ್ನೇಹಿತರೊಂದಿಗೆ ರಾತ್ರಿ ಆಟೊದಲ್ಲಿ ಎಂ.ಜಿ.ರಸ್ತೆಗೆ ಬಂದಿ­ದ್ದರು. ಸಂಭ್ರಮ ಮುಗಿದ ಬಳಿಕ ಮೋಜಿನ ಕೂಟ ನಡೆಸಿದ ಯುವ­ಕರು ಆಟೊದಲ್ಲಿ ಮನೆಗೆ ವಾಪಸ್‌ ಹೊರಟಿದ್ದಾರೆ.

ಕೇಕೆ ಹಾಕಿಕೊಂಡು ಆಟೊದಲ್ಲಿ ಮನೆಗೆ ಹೋಗುತ್ತಿದ್ದ ಅವರನ್ನು, ಆಡುಗೋಡಿ ಜಂಕ್ಷನ್‌ ಬಳಿ ಆರು ಮಂದಿ ಯುವಕರಿದ್ದ ಮತ್ತೊಂದು ಆಟೊ ಹಿಂಬಾಲಿಸಿದೆ. ಈ ವೇಳೆ ವಾಹನ ಹಿಂದಿಕ್ಕುವ ವಿಚಾರದಲ್ಲಿ ಪರಸ್ಪರರ ನಡುವೆ ಸನ್ನೆ, ಅವಾಚ್ಯ ಶಬ್ದಗಳ ಮೂಲಕ ಮೌಖಿಕ ಜಗಳ ಆರಂಭವಾಗಿದೆ. ವಾಹನ ನಿಲ್ಲಿಸದೆ ಮುಂದೆ ಸಾಗಿದ ಫೈಜಲ್‌, ಕೋರಮಂಗಲ ಫೋರಂ ಮಾಲ್‌ ಬಳಿ ಹೋಗುವಾಗ ಹಿಂದಿ­ನಿಂದ ವೇಗವಾಗಿ ವಾಹನ ಚಾಲನೆ ಮಾಡಿಕೊಂಡು ಬಂದ ಅವರು ಆಟೊಗೆ ವಾಹನ ಗುದ್ದಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇದರಿಂದ ಕೋಪಗೊಂಡ ಫೈಜಲ್‌ ಹಾಗೂ ಸ್ನೇಹಿತರು, ಎದುರಾಳಿ ಗುಂಪಿ­ನೊಂದಿಗೆ ಜಗಳಕ್ಕೆ ಮುಂದಾಗಿದ್ದಾರೆ. ಅಲ್ಲಿ ಕಿತ್ತಾಡಿಕೊಂಡ ಬಳಿಕ ಎರಡು ಗುಂಪುಗಳು ಸಮೀಪದ ಪರ್ಯಾಯ ರಸ್ತೆಗೆ ಹೋಗಿದ್ದಾರೆ. ಈ ವೇಳೆಗಾಗಲೇ ಪೈಜಲ್‌ನ ಎದುರಾಳಿ ಗುಂಪು, ಮತ್ತೆ ಮೂವರು ಸದಸ್ಯರನ್ನು ಮಾರಕಾಸ್ತ್ರ­ಗಳೊಂದಿಗೆ ಸ್ಥಳಕ್ಕೆ ಕರೆಸಿಕೊಂಡಿದೆ.

ಗಲಾಟೆ ಅತಿರೇಕಕ್ಕೆ ತಿರುಗಿದಾಗ ಫೈಜಲ್‌ ತಂಡ ಸ್ಥಳದಿಂದ ಪರಾರಿ­ಯಾಗಲು ಯತ್ನಿಸಿದೆ. ಆಗ ಫೈಜಲ್‌­ನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪು ಹೊಟ್ಟೆ ಮತ್ತು ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದಿದೆ. ತೀವ್ರ ರಕ್ತಸ್ರಾವ­ವಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿ­ದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿ­ಸಿಕೊಂಡು, ಸಮೀಪದ ಜಂಕ್ಷನ್‌ನಲ್ಲಿರುವು ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಲಾಗುತ್ತಿದೆ. ಆರೋಪಿಗಳ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ತುಮಕೂರು ವರದಿ: ಹೊಸ ವರ್ಷಾ­ಚರಣೆ ಮೋಜಿನ ಕೂಟಕ್ಕೆಂದು ಬಂದ­ವರು ಮಸಣ ಸೇರಿದ ಘಟನೆ ನಗರದ ಹೊರವಲಯದ ಹಿರೇಹಳ್ಳಿ ಸಮೀಪ ಬುಧವಾರ ಬೆಳಿಗ್ಗೆ ನಡೆದಿದೆ.

ಸ್ವಿಫ್ಟ್‌ ಕಾರು ರಸ್ತೆ ವಿಭಜಕದ ಮೇಲೇರಿ ಮತ್ತೊಂದು ಬದಿಯಲ್ಲಿ ಎದು­ರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆ­ದಿದೆ. ಕಾರಿನಲ್ಲಿದ್ದ ಇಬ್ಬರು ಮೃತ­ಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ.

ಬೆಂಗಳೂರಿನ ರಾಜೇಶ್‌ (26), ಯುಗಂಧರ್‌ (30) ಮೃತಪಟ್ಟವರು. ಶ್ರೀಕಾಂತ್‌ (32), ಧರಣಿ (33) ಗಾಯಗೊಂಡವರು.
ತಿಪಟೂರು ತಾಲ್ಲೂಕಿನ ಮಲ್ಲೇನ­ಹಳ್ಳಿ­ಯಲ್ಲಿ ಮೋಜಿನ ಕೂಟಕ್ಕೆಂದು ನಾಲ್ವರು ಸ್ನೇಹಿತರು ಒಟ್ಟಾಗಿ ಹೊರಟಿ­ದ್ದಾರೆ. ರಾತ್ರಿ 2 ಗಂಟೆಗೆ ಬೆಂಗಳೂರು ಬಿಟ್ಟು ತುಮಕೂರಿನತ್ತ ಆಗಮಿಸಿದ್ದಾರೆ. ಬರುವ ಮಾರ್ಗಮಧ್ಯೆ ಅಲ್ಲಲ್ಲಿ ಮದ್ಯ ಸೇವಿಸಿದ್ದಾರೆ. ಕ್ಯಾತ್ಸಂದ್ರದ ಟೋಲ್‌ಗೆ ಬರುವಷ್ಟರಲ್ಲಿ ಮುಂಜಾನೆ 6 ಗಂಟೆ­ಯಾಗಿತ್ತು. ತಿಪಟೂರಿಗೆ ಇನ್ನೂ 70 ಕಿ.ಮೀ. ಕ್ರಮಿಸಬೇಕಿರುವುದನ್ನು ಅರಿತ ಸ್ನೇಹಿತರು ವಾಪಸ್‌ ಬೆಂಗಳೂರಿಗೆ ತೆರಳಲು ನಿರ್ಧರಿಸಿ ಕಾರು ಹಿಂದಕ್ಕೆ ತಿರುಗಿಸಿಕೊಂಡಿದ್ದಾರೆ. ಹಿರೇಹಳ್ಳಿ ಬಳಿ ರಸ್ತೆ ವಿಭಜಕದ ಮೇಲೇರಿದ ಕಾರು ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾತ್ಸಂದ್ರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಡಿಸಿ 10 ಬಾರಿ ಇರಿದರು
ಬೆಂಗಳೂರು: ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಯುವಕನೊಬ್ಬನ ಹೊಟ್ಟೆಗೆ 10 ಬಾರಿ ಇರಿದು ಬರ್ಬರ­ವಾಗಿ ಕೊಲೆ ಮಾಡಿರುವ ಘಟನೆ ಪೀಣ್ಯ ಸಮೀಪದ ಮುನೇಶ್ವರ ಬ್ಲಾಕ್‌ನಲ್ಲಿ ಮಂಗಳವಾರ ನಡೆದಿದೆ.

ಮುನೇಶ್ವರಬ್ಲಾಕ್‌ನ ನಾಲ್ಕನೇ ಅಡ್ಡ­ರಸ್ತೆ ನಿವಾಸಿ ಉಮೇಶ್‌ ಖನ್ನಾ (22) ಕೊಲೆಯಾದವರು. ಘಟನೆ ಸಂಬಂಧ ಪೊಲೀಸರು ಮೃತರ ಸ್ನೇಹಿತರಾದ ಅರ್ಜುನ್‌ ಮತ್ತು ಜೀವನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಹೊಸ ವರ್ಷದ ಪ್ರಯುಕ್ತ ಉಮೇಶ್‌ ಹಾಗೂ ಜೀವನ್‌ ಸೇರಿದಂತೆ ಎಂಟು ಮಂದಿ ಮುನೇಶ್ವರ ಬ್ಲಾಕ್‌ನ ಎರಡನೇ ಅಡ್ಡರಸ್ತೆಯಲ್ಲಿ ಮಂಗಳವಾರ ರಾತ್ರಿ ಮೋಜಿನ ಕೂಟ ಏರ್ಪಡಿಸಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಹಳೆಯ ಗಲಾಟೆಯ ವಿಷಯ ಪ್ರಸ್ತಾಪವಾಗಿದೆ. ಈ ವೇಳೆ ಯುವಕರ ನಡುವೆ ಜಗಳ­ವಾಗಿದ್ದು, ದುಷ್ಕರ್ಮಿಗಳು ಉಮೇಶ್‌ ಅವರ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವ­ವಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿ­ದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬಿ.ಕಾಂ ಪದವೀಧರರಾಗಿದ್ದ ಉಮೇಶ್‌ ವಿರುದ್ಧ ಹಲ್ಲೆ, ಕೊಲೆ ಯತ್ನ ಸೇರಿದಂತೆ ಪೀಣ್ಯ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಎರಡು ತಿಂಗಳ ಹಿಂದೆ ಉಮೇಶ್‌, ಜೀವನ್‌ ಮೇಲೆ ಹಲ್ಲೆ ನಡೆಸಿದ್ದ. ಇದಕ್ಕೆ ಪ್ರತೀಕಾರ­ವಾಗಿ ಕೊಲೆ ನಡೆದಿರುವ ಸಾಧ್ಯತೆ ಇದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ­ಲಾಗುತ್ತಿದೆ ಎಂದು ಪೀಣ್ಯ ಪೊಲೀಸರು ಹೇಳಿದ್ದಾರೆ.

ಸಂಭ್ರಮಾಚರಣೆಗೆ ಹೋದ, ಶವವಾಗಿ ಸಿಕ್ಕ..
ಹೊಸ ವರ್ಷಾಚರಣೆಗಾಗಿ ಸ್ನೇಹಿತರೊಂದಿಗೆ ತೆರಳಿದ್ದ ಅಶ್ರಫ್‌ ಆಲಿ (18) ಎಂಬ ಯುವಕ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಆತನ ಶವ ಕಮ್ಮಗೊಂಡನಹಳ್ಳಿ ಸಮೀಪದ ರೈಲು ಹಳಿ ಮೇಲೆ ಬುಧವಾರ ಪತ್ತೆಯಾಗಿದೆ.

‘ಹೊಸ ವರ್ಷದ ಸಂಭ್ರಮಾಚರಣೆಗೆ ಹೋಗುವುದಾಗಿ ಮಗ ರಾತ್ರಿ 9 ಗಂಟೆಗೆ ಮನೆಯಿಂದ ಹೋದ. ಬೆಳಿಗ್ಗೆ 4 ಗಂಟೆಯಾದರೂ ಮನೆಗೆ ಹಿಂದಿರುಗದ ಕಾರಣ ಮೊಬೈಲ್‌ಗೆ ಕರೆ ಮಾಡಿದೆವು. ಆದರೆ, ಆತನ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಕರೆ ಮಾಡಿದ ಗಂಗಮ್ಮನಗುಡಿ ಪೊಲೀಸರು, ಮಗನ ಶವ ಹಳಿ ಮೇಲೆ ಬಿದ್ದಿರುವುದಾಗಿ ಹೇಳಿದರು’ ಎಂದು ಮೃತರ ಪೋಷಕರು ತಿಳಿಸಿದ್ದಾರೆ. ಗಂಗಮ್ಮನಗುಡಿ ಪೊಲೀಸರು ಪ್ರಕರಣವನ್ನು ಯಶವಂತಪುರ ರೈಲ್ವೆ ಪೊಲೀಸರಿಗೆ ವರ್ಗಾಯಿಸಿದ್ದಾರೆ. ‘ಅಶ್ರಫ್‌ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ಪೊಲೀಸರು ಶಂಕಿಸಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT