ಬೆಂಗಳೂರು: ‘ಗ್ರಾಮಾಂತರ ಭಾಗದ ಜನರ ವೈದ್ಯಕೀಯ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ತಂತ್ರಜ್ಞಾನದ ಶೋಧವೇ ವಿಶ್ವವಿದ್ಯಾಲಯಗಳ ಆದ್ಯತೆ ಆಗಬೇಕು’ ಎಂದು ತಂತ್ರಜ್ಞಾನ ಮಾಹಿತಿ, ಮುಂದಾಲೋಚನೆ ಹಾಗೂ ಮೌಲ್ಯಮಾಪನ ಪರಿಷತ್ತಿನ (ಟಿಐಎಫ್‌ಎಸಿ) ಅಧ್ಯಕ್ಷ ಡಾ. ಅನಿಲ್ ಕಾಕೋಡ್ಕರ್ ಆಶಯ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಎಂ.ಎಸ್. ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಅಗ್ಗದ ದರ, ಉತ್ಕೃಷ್ಟ ತಂತ್ರಜ್ಞಾನ ಇಂದಿನ ಸಂಶೋಧಕರ ಮಂತ್ರವಾಗಬೇಕು’ ಎಂದು ಕಿವಿಮಾತು ಹೇಳಿದರು. ‘ವೈದ್ಯಕೀಯ ವಿದ್ಯಾರ್ಥಿಗಳು ಹಳ್ಳಿಗಳಿಗೆ ಹೀಗೆ ಹೋಗಿ, ಹಾಗೆ ಬರದೆ ಕೆಲದಿನ ಅಲ್ಲಿಯೇ ನೆಲೆಸಬೇಕು. ಇದರಿಂದ ಹಳ್ಳಿಗರ ಸಮಸ್ಯೆ ಯುವವೈದ್ಯರಿಗೆ ಅರ್ಥವಾಗಿ ಪರಿಹಾರ ಕಂಡುಕೊಳ್ಳುವುದು ಮತ್ತಷ್ಟು ಸುಲಭವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ದೇಶದಲ್ಲಿ ಸಂಶೋಧನೆಗಳೇ ನಡೆಯುತ್ತಿಲ್ಲ. ಬೇರೆ ದೇಶಗಳ ಲಭ್ಯವಿರುವ ತಂತ್ರಜ್ಞಾನವನ್ನು ಖರೀದಿಸಿ ಬಳಸುವ ಅನಿವಾರ್ಯತೆ ಇದೆ. ಇಂತಹ ಸಂಪ್ರದಾಯ ತಪ್ಪಿ, ದೇಶೀ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಮೂಲಕ ನಾವೂ ತಾಂತ್ರಿಕ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳುವ ಅಗತ್ಯವಿದೆ’ ಎಂದು ಅವರು ತಿಳಿಸಿದರು.
‘ಉನ್ನತ ಶಿಕ್ಷಣವು ತರಗತಿ ಕೇಂದ್ರಿತವಾಗಿದ್ದು, ವಿದ್ಯಾರ್ಥಿಗಳ ಬಹುತೇಕ ಅವಧಿ ಪಾಠ ಕೇಳುವುದರಲ್ಲೇ ಹೋಗುತ್ತದೆ. ಅಧ್ಯಯನಕ್ಕೆ ದೊರೆತಷ್ಟೇ ಮಹತ್ವ ಸಂಶೋಧನೆಗೂ ಸಿಗಬೇಕಿದೆ’ ಎಂದು ಹೇಳಿದರು. ‘ಜೀವನದ ನೈಜ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ತಂತ್ರಜ್ಞಾನ ಇಂದಿನ ಅಗತ್ಯವಾಗಿದ್ದು, ಕೈಗಾರಿಕೆಗಳು ಅಂತಹ ಯತ್ನಗಳಿಗೆ ಸಹಾಯ ನೀಡಬೇಕು’ ಎಂದು ಸಲಹೆ ನೀಡಿದರು.
ಕೆಪಿಐಟಿ ಟೆಕ್ನಾಲಜೀಸ್ ಸಂಸ್ಥೆ ಅಧ್ಯಕ್ಷ ರವಿ ಪಂಡಿತ್, ‘ದೇಶದ ಅಗತ್ಯಗಳನ್ನು ಪೂರೈಸಲು ಶಿಕ್ಷಣ ಸಂಸ್ಥೆಗಳು ಹಾಗೂ ಕೈಗಾರಿಕೆಗಳು ಪರಸ್ಪರ ಸಹಕಾರದಿಂದ ಮುನ್ನಡೆಯಬೇಕು’ ಎಂದು ಆಶಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿ.ವಿ ಕುಲಾಧಿಪತಿ ಡಾ.ಎಂ.ಆರ್. ಜಯರಾಂ, ‘ಎಂ.ಎಸ್. ರಾಮಯ್ಯ ಸಂಸ್ಥೆಗೆ ಮಾನವೀಯ ಮೌಲ್ಯಗಳೇ ಮುಖ್ಯವಾಗಿದ್ದು, ಅದರ ತಳಹದಿ ಮೇಲೆಯೇ ಶಿಕ್ಷಣ ಹಾಗೂ ಆರೋಗ್ಯ ಸೇವೆಯನ್ನು ಮಾಡುತ್ತಿದೆ’ ಎಂದು ಹೆಮ್ಮೆಯಿಂದ ಹೇಳಿದರು.
‘ಐದು ದಶಕಗಳ ಹಿಂದೆ ಕೇವಲ 80 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಆ ಪುಟ್ಟ ಸಂಸ್ಥೆ, ಈಗ 35 ಸಾವಿರ ವಿದ್ಯಾರ್ಥಿಗಳಿಗೆ ಪದವಿ ನೀಡಿದ ಹೆಮ್ಮರವಾಗಿ ಬೆಳೆದಿದೆ’ ಎಂದರು. ಪುಣೆಯ ರಕ್ಷಣಾ ಉನ್ನತ ತಂತ್ರಜ್ಞಾನ ಸಂಸ್ಥೆಯ ಕುಲಪತಿ ಡಾ. ಪ್ರಹ್ಲಾದ ರಾಮರಾವ್, ಎಂ.ಎಸ್. ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ಆರ್. ಶಂಕಪಾಲ್ ವೇದಿಕೆ ಮೇಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.