ADVERTISEMENT

‘ಎರಡನೇ ಪತ್ನಿ ಮಗಳಿಗೆ ಅನುಕಂಪ ಆಧಾರಿತ ಉದ್ಯೋಗ ಇಲ್ಲ’

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2015, 20:03 IST
Last Updated 4 ಮಾರ್ಚ್ 2015, 20:03 IST

ಬೆಂಗಳೂರು: ‘ಅನುಕಂಪ ಆಧಾರಿತ ಸರ್ಕಾರಿ ಉದ್ಯೋಗ ಪಡೆಯಲು ಎರ­ಡನೇ ಪತ್ನಿ ಮಗಳು ಅರ್ಹಳಲ್ಲ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

‘ತಂದೆಯ ಉದ್ಯೋಗವನ್ನು ನನಗೆ ನೀಡ­ಬೇಕು’ ಎಂದು ಕೋರಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ವಿಠ್ಠಲ ನಗರದ ಬಿ.ಜಿ.ಕಲಾವತಿ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಪೀಠ ಬುಧವಾರ ವಜಾ ಮಾಡಿತು.

ಪ್ಲೀಡರ್‌ ಪ್ರತಿಮಾ ಹೊನ್ನಾಪುರ ಅವರು ಸರ್ಕಾರದ ಪರ ವಾದ ಮಂಡಿಸಿ, ಇಂತಹುದೇ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾಯ­ಮೂರ್ತಿ ಎನ್‌.ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠವು ನೀಡಿರುವ ಆದೇಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

‘ಇಂತಹ ಪ್ರಕರಣಗಳನ್ನು ಮನ್ನಿಸುತ್ತಾ ಹೋದರೆ ಎರಡನೇ ಮದುವೆಗೆ ಪ್ರೋತ್ಸಾಹ ಕೊಟ್ಟಂತೆ ಆಗುತ್ತದೆ ಎಂಬ ವಿಭಾಗೀಯ ಪೀಠದ ಆದೇಶವನ್ನು ಪುರಸ್ಕರಿಸಿ ಈ ಅರ್ಜಿಯನ್ನು ವಜಾಗೊಳಿಸಬೇಕು’ ಎಂದು ಪ್ರತಿಮಾ ವಾದಿಸಿದರು.

ಕೃಷಿ ಇಲಾಖೆಯಲ್ಲಿ ಮೇಲ್ವಿಚಾರಕರಾಗಿ ಸರ್ಕಾರಿ ಸೇವೆಯಲ್ಲಿದ್ದ ಬಿ.ಎಲ್‌.ಕುಮಾರ್‌ ಎಂಬುವವರು 2013ರಲ್ಲಿ ಮೃತರಾಗಿ­ದ್ದರು. ಇವರ ಎರಡನೇ ಪತ್ನಿಯ ಪುತ್ರಿ­ಯಾದ 21 ವರ್ಷದ ಬಿ.ಜಿ.ಕಲಾವತಿ ತಂದೆಯ ಉದ್ಯೋಗವನ್ನು ನೀಡುವಂತೆ ಕೋರಿ ಈ ರಿಟ್ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.