ADVERTISEMENT

‘ನಮ್ಮ ಮೆಟ್ರೊ: ಕಾನೂನು ಉಲ್ಲಂಘಿಸಿದರೆ ಕ್ರಮ‘

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 19:38 IST
Last Updated 13 ಡಿಸೆಂಬರ್ 2013, 19:38 IST

ಬೆಂಗಳೂರು: ‘ನಮ್ಮ ಮೆಟ್ರೊ ಯೋಜನೆಯ ಕಾಮಗಾರಿಗಳ ಗುತ್ತಿಗೆ ಪಡೆದವರು, ಕಾರ್ಮಿಕರನ್ನು ಕಾನೂನಿನ ಪ್ರಕಾರ ನಡೆಸಿಕೊಳ್ಳದಿದ್ದರೆ ನಾವೇ ಸೂಕ್ತ ಕ್ರಮ ಕೈಗೊಳ್ಳಬೇಕಾ­ಗುತ್ತದೆ’ ಎಂದು ಹೈಕೋರ್ಟ್‌ ಶುಕ್ರವಾರ ಎಚ್ಚರಿಕೆ ನೀಡಿದೆ.

‘ನಮ್ಮ ಮೆಟ್ರೊ’ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿ­ರುವ ಕಾರ್ಮಿಕರಿಗೆ ಸೂಕ್ತ ಸೌಲಭ್ಯ ನೀಡಿಲ್ಲ ಎಂದು ದೂರಿ ಸ್ಯಾಮ್ಯುಯೆಲ್‌ ಸತ್ಯಶೀಲನ್‌ ಎಂಬು­ವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ ಮತ್ತು ನ್ಯಾಯಮೂರ್ತಿ ಎಸ್‌.ಎನ್‌. ಸತ್ಯನಾರಾಯಣ ಅವರನ್ನೊಳಗೊಂಡ ವಿಭಾಗೀಯ ಪೀಠ, ‘ಕಾರ್ಮಿಕರ ಹಿತ ಕಾಯದ ಗುತ್ತಿಗೆದಾರರ ವಿವರ ನೀಡಿ. ನಾವೇ ಅವರಿಗೆ ಎಚ್ಚರಿಕೆ ನೀಡುತ್ತೇವೆ. ಆಗ ಅವರು ಕಾನೂನು ಪಾಲಿಸುತ್ತಾರೆ’ ಎಂದು ಮೌಖಿಕವಾಗಿ ಹೇಳಿತು.

ಗುತ್ತಿಗೆದಾರರು ಮತ್ತು ಉಪ–ಗುತ್ತಿಗೆದಾರರ ವಿವರ ನೀಡುವುದಾಗಿ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಪರ ವಕೀಲರು ಪೀಠಕ್ಕೆ ತಿಳಿಸಿದರು.

ನಿಯಮಗಳ ಉಲ್ಲಂಘನೆ: ಕಾರ್ಮಿಕರ ನೀಡಿರುವ ವಸತಿ ಸ್ಥಳವು ಸರಿಯಾಗಿಲ್ಲ. ನಾಲ್ಕು ಕ್ಯಾಂಪ್‌ಗಳಲ್ಲಿ ಕಾರ್ಮಿಕರು ತಗಡಿನ ಶೆಡ್‌ಗಳಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಗಾಳಿ–ಬೆಳಕು, ಶೌಚಾಲಯ ಮತ್ತು ಕುಡಿ­ಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲ ಎಂಬುದು ಉಪ ಮುಖ್ಯ ಕಾರ್ಮಿಕ ಆಯುಕ್ತರ ಭೇಟಿಯ ವೇಳೆ ಕಂಡುಬಂದಿದೆ. ಆರು ಕಡೆ ಸೂಕ್ತ ಕುಡಿ­ಯುವ ನೀರಿನ ವ್ಯವಸ್ಥೆ ಇಲ್ಲ, ಕೆಲಸ ಮಾಡುವ 15 ಕಡೆ­ಗಳಲ್ಲಿ ಶೌಚಾಲಯ ಇಲ್ಲ, 12 ಕಡೆಗಳಲ್ಲಿ ಕಾರ್ಮಿಕರಿಗೆ ಗುರುತಿನ ಚೀಟಿಯನ್ನೇ ನೀಡಿಲ್ಲ ಎಂದು ಅರ್ಜಿದಾರರು ಪೀಠಕ್ಕೆ ಶುಕ್ರವಾರ ವಿವರ ಸಲ್ಲಿಸಿದ್ದಾರೆ.

‘ನಮ್ಮ ಮೆಟ್ರೊ’ ಯೋಜನೆಗಾಗಿ ಕೆಲಸ ಮಾಡು­ತ್ತಿದ್ದ ಕಾರ್ಮಿಕರ ಪೈಕಿ ಎಂಟು ಮಂದಿ ಅವಘಡದಲ್ಲಿ ಮೃತಪಟ್ಟಿ­ದ್ದಾರೆ. ಆದರೆ ಇವರು ಗುರುತಿನ ಚೀಟಿ ಹೊಂದಿರಲಿಲ್ಲ ಎಂಬುದು ಆಯುಕ್ತರ ಭೇಟಿ ಸಂದರ್ಭ­ದಲ್ಲಿ ಗೊತ್ತಾಗಿದೆ ಎಂದು ಅರ್ಜಿದಾರರು ತಿಳಿಸಿದರು. ವಿಚಾರಣೆಯನ್ನು ಇದೇ 18ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.