ADVERTISEMENT

‘ಪಕ್ಷದ ಸಂಬಂಧ ಮರೆತು ಹೋರಾಡಿ’

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 19:43 IST
Last Updated 14 ಡಿಸೆಂಬರ್ 2013, 19:43 IST

ಬೆಂಗಳೂರು: ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರವು ವಿಫಲವಾದರೆ ಪಕ್ಷದ ಸಂಬಂಧವನ್ನು ಬದಿಗಿಟ್ಟು ಹೋರಾಟ ನಡೆಸಬೇಕು ಎಂದು ಪ್ರದೇಶ ಮಹಿಳಾ ಕಾಂಗ್ರೆಸ್‌ ಸಮಿತಿಯ ಸದಸ್ಯರಿಗೆ ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಶೋಭಾ ಓಜಾ ಕರೆ ನೀಡಿದರು.

ಶುಕ್ರವಾರ ನಡೆದ ಪ್ರದೇಶ ಮಹಿಳಾ ಕಾಂಗ್ರೆಸ್‌ ಸಮಿತಿಯ ಕಾರ್ಯಕಾರಿಣಿ­ಯಲ್ಲಿ ಮಾತನಾಡಿದ ಅವರು, ‘ಮಹಿಳಾ ಕಾಂಗ್ರೆಸ್‌ ಸಮಿತಿಯ ಕಾರ್ಯ­­ಕರ್ತರು ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧದ ಹೋರಾಟಕ್ಕೆ ಸದಾ ಸಿದ್ಧವಾಗಿರಬೇಕು. ಈ ವಿಷಯ­ದಲ್ಲಿ ಮಹಿಳಾ ಕಾಂಗ್ರೆಸ್‌ ಸದಸ್ಯರು ಮುಂಚೂಣಿಯಲ್ಲಿ ನಿಲ್ಲಬೇಕು’ ಎಂದರು.

ಮಹಿಳೆಯರಿಗೆ ರಾಜಕೀಯ ಅವಕಾಶ­ಗಳನ್ನು ನೀಡುವುದಕ್ಕಾಗಿಯೇ ಸ್ಥಳೀಯ ಸಂಸ್ಥೆಗಳ ಸ್ಥಾನಗಳಲ್ಲಿ ಶೇಕಡ 50ರಷ್ಟು ಮೀಸಲಾತಿ ನೀಡಲಾಗಿದೆ. ಈ ಅವಕಾಶ­ವನ್ನು ಬಳಸಿಕೊಂಡು ಮಹಿಳೆಯರ ಸಬ­ಲೀಕರಣ ಕಾರ್ಯ­ದಲ್ಲಿ ತೊಡಗಬೇಕು ಎಂದು ಸಲಹೆ ಮಾಡಿದರು.
ಹೆಚ್ಚು ಪೊಲೀಸ್‌ ಠಾಣೆ: ‘ಮಹಿಳೆ­ಯರ ರಕ್ಷಣೆಯ ವಿಷಯ­ದಲ್ಲಿ ಸರ್ಕಾರ ಎಲ್ಲ ಕ್ರಮಗಳನ್ನೂ ಕೈಗೊಳ್ಳು­ತ್ತಿದೆ. ಶೀಘ್ರದಲ್ಲೇ 8,500 ಪೊಲೀಸ್‌ ಕಾನ್‌ಸ್ಟೆಬಲ್‌ಗಳನ್ನು ನೇಮಕ ಮಾಡಿ­ಕೊಳ್ಳಲಾಗುವುದು. ಅಗತ್ಯಕ್ಕೆ ತಕ್ಕಂತೆ ಮಹಿಳಾ ಪೊಲೀಸ್‌ ಠಾಣೆಗಳ ಸಂಖ್ಯೆ­ಯನ್ನು ಹೆಚ್ಚಿಸಲಾಗುವುದು’ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಭರವಸೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರ­ಮೇಶ್ವರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ, ಪ್ರದೇಶ ಮಹಿಳಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಮಂಜುಳಾ ನಾಯ್ಡು, ಮಾಜಿ ಸಚಿವೆ ರಾಣಿ ಸತೀಶ್‌, ಮಾಜಿ ಶಾಸಕಿ ಮಲ್ಲಾಜಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.