ADVERTISEMENT

‘ಪೆರಿಯಾರ್‌ ವಿಚಾರ ಇಂದಿಗೂ ಪ್ರಸ್ತುತ’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 19:46 IST
Last Updated 17 ಸೆಪ್ಟೆಂಬರ್ 2013, 19:46 IST

ಬೆಂಗಳೂರು: ‘ದೇವಸ್ಥಾನಗಳನ್ನು ಕಟ್ಟುವುದರ ಬದಲು ಶಾಲೆಗಳನ್ನು ಕಟ್ಟಿ ಎಂದು ಹೇಳಿದ ಪೆರಿಯಾರ್‌ ಅವರ ಮಾತು ಇಂದಿಗೂ ಪ್ರಸ್ತುತ’ ಎಂದು ‘ಅಹಿಂದ’ ಸಂಘಟನೆಯ ಮುಖಂಡ ಮುಕುಡಪ್ಪ ಹೇಳಿದರು.

ಕರ್ನಾಟಕ ಜನಾಂದೋಲನ ಸಂಘಟನೆಯು ಕಬ್ಬನ್‌ ಉದ್ಯಾನದ ಎನ್‌ಜಿಒ ಸಭಾಂಗಣದಲ್ಲಿ ಮಂಗಳ ವಾರ ಆಯೋಜಿಸಿದ್ದ ಪೆರಿಯಾರ್‌ ರಾಮಸ್ವಾಮಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ಹಿಂದುಳಿದ ದಲಿತ ಮತ್ತು ಅಲ್ಪಸಂಖ್ಯಾತರ ಏಳಿಗೆಗೆ ಶಿಕ್ಷಣ ಅಗತ್ಯವಾಗಿದೆ.  ದಲಿತರು ಮತ್ತು ಅಲ್ಪ ಸಂಖ್ಯಾತರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ದೊರಕಿಸಿಕೊಡಲು ಶ್ರಮಿಸಬೇಕು’ ಎಂದರು.

‘ದೇವರು ಬಂದು ಶೋಷಿತರನ್ನು ರಕ್ಷಿಸುತ್ತಾನೆ ಎಂದು ತಿಳಿದು ದೇವಸ್ಥಾನ ವನ್ನು ನಿರ್ಮಿಸಿದರೆ ಪ್ರಯೋಜನವಿಲ್ಲ. ಡಾ.ಅಂಬೇಡ್ಕರ್‌, ಪೆರಿಯಾರ್‌, ಫುಲೆ ಇನ್ನಿತರರು ಶೋಷಿತರ ವಿಮೋಚನೆಗೆ ಶ್ರಮಿಸಿದವರು. ಅವರು ಶಿಕ್ಷಣ, ಮೀಸಲಾತಿ ಹಾಗೂ ಸ್ವಾಭಿಮಾನವನ್ನು ತಂದುಕೊಟ್ಟವರು ಅವರನ್ನು ದೇವ ರೆಂದು ಪೂಜಿಸಬೇಕು’ ಎಂದರು.

‘ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ಎಲ್ಲರಿಗೂ ಮತದಾನದ ಅವಕಾಶವನ್ನು ನೀಡಿ ರಾಜಕೀಯ ಸಮಾನತೆಯನ್ನು ನೀಡಿದ್ದಾರೆ. ಪ್ರತಿಯೊಂದು ಮತವು ಮಹತ್ವವಾಗಿದೆ. ಮತದ ಮಹತ್ವವನ್ನು ಅರಿತು ಪ್ರಜೆಗಳು ಚಲಾಯಿಸಬೇಕು. ಹಣ ನೀಡುವವರಿಗೆ ಮತ ನೀಡಬಾರದು’ ಎಂದು ಹೇಳಿದರು.

ಕರ್ನಾಟಕ ಜನಾಂದೋಲನ ಸಂಘಟನೆಯ ರಾಜ್ಯ ಸಮಿತಿ ಕಾರ್ಯ ದರ್ಶಿ ಎಚ್‌.ಎಸ್‌.ಮಲ್ಲೇಶ್‌ ಮಾತ ನಾಡಿ, ‘ ದೇವರ ಮೇಲಿನ ನಂಬಿಕೆಯನ್ನು ಬಂಡವಾಳ ಮಾಡಿ ಕೊಂಡು ದುರುಪಯೋಗಪಡಿಸಿಕೊಳ್ಳು ತ್ತಿದ್ದವರನ್ನು ಪೆರಿಯಾರ್‌ ಪ್ರಶ್ನಿಸು ತ್ತಿದ್ದರು. ವೈಜ್ಞಾನಿಕತೆಯ ಆಧಾರದ ಮೇಲೆ ವಿಚಾರ ಧಾರೆಯನ್ನು ಪ್ರತಿಪಾದಿಸಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.