ADVERTISEMENT

‘ಮೋದಿಗೆ ಪ್ರಾದೇಶಿಕ ಪಕ್ಷ ಅಡ್ಡಗಾಲು’

ಭಾರತೀಯ ಮತದಾರರಿಗೆ ವ್ಯಕ್ತಿಗಿಂತ ಪಕ್ಷವೇ ಮುಖ್ಯ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 19:46 IST
Last Updated 20 ಮಾರ್ಚ್ 2014, 19:46 IST

ಬೆಂಗಳೂರು:  ‘ದೇಶದ ವಿವಿಧ ಪ್ರಾದೇಶಿಕ ಪಕ್ಷಗಳಿಗೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಪಟ್ಟಕ್ಕೆ ಏರದಂತೆ ತಡೆಯುವ ಸಾಮರ್ಥ್ಯ ಇದೆ. ಏಕೆಂದರೆ, ಅವುಗಳಿಗೆ ಇರುವಂತಹ ಸಾಮಾಜಿಕ ತಳಹದಿ ಬಿಜೆಪಿಗೆ ಇಲ್ಲ’ ಎಂದು ಹಿರಿಯ ರಾಜಕೀಯ ವಿಶ್ಲೇಷಕ ಡಾ. ಘನಶ್ಯಾಮ್‌ ಷಾ ಅಭಿಪ್ರಾಯಪಟ್ಟರು.

ಜೈನ್‌ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ಹಾಗೂ ಶಿಕ್ಷಣ ಸಂಶೋಧನಾ ಕೇಂದ್ರದ ವತಿಯಿಂದ ಏರ್ಪಡಿಸಿರುವ ‘ರಾಷ್ಟ್ರೀಯ ರಾಜಕಾರಣದ ಕೇಂದ್ರವಾಗಿ ರಾಜ್ಯಗಳು’ ಕುರಿತ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ಅವರು ಮಾತನಾಡಿದರು.

‘ತಳ ಸಮುದಾಯಗಳ ಪಾಲಿಗೆ ಬಿಜೆಪಿ ಯಾವಾಗಲೂ ಮೊದಲ ಆಯ್ಕೆಯಲ್ಲ. ಕಾಂಗ್ರೆಸ್‌ಗೆ ಪರ್ಯಾಯ ಹುಡುಕುತ್ತಿರುವ ಈ ಸಾಮಾಜಿಕ ಗುಂಪುಗಳಿಗೆ ಬಿಜೆಪಿ ಮೇಲೆ ವಿಶ್ವಾಸ ಇಲ್ಲ. ಏಕೆಂದರೆ, ಆ ಪಕ್ಷವನ್ನು ಹಿಂದುತ್ವದ ಅಜೆಂಡಾ ಅದೃಶ್ಯವಾಗಿ ಹಿಂಬಾಲಿಸುತ್ತಿರುವ ಅರಿವು ಅವುಗಳಿಗಿದೆ’ ಎಂದು ವಿಶ್ಲೇಷಿಸಿದರು.

‘ಗುಜರಾತ್‌ ರಾಜ್ಯವೂ ಸೇರಿದಂತೆ ಕೆಲವೆಡೆ ಬಿಜೆಪಿಗೆ ಹಿಂದುಳಿದ ವರ್ಗಗಳು, ಆದಿವಾಸಿಗಳು ಮತ್ತು ದಲಿತ ಸಮುದಾಯಗಳು ಒಲಿದಿವೆ. ಪರ್ಯಾಯವೇ ಇಲ್ಲದಿದ್ದಾಗ ಮತದಾರರು ಮಾಡಿಕೊಂಡ ಹೊಂದಾಣಿಕೆ ಅದಾಗಿದೆಯೇ ಹೊರತು ಆ ಪಕ್ಷದ ಮೇಲಿನ ಪ್ರೀತಿ ಕಾರಣವಲ್ಲ. ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಿರುವ ಕಡೆಗಳಲ್ಲಿ ಬಿಜೆಪಿ ತಳ ಸಮುದಾಯಗಳ ಮತ ಗಳಿಸುವುದು ಕಷ್ಟ’ ಎಂದು ಹೇಳಿದರು.

‘ಸಿಪಿಐ–ಸಿಪಿಎಂನಂತಹ ಎಡಪಕ್ಷಗಳು ಹೆಸರಿಗೆ ರಾಷ್ಟ್ರೀಯ ಸ್ಥಾನಮಾನ ಹೊಂದಿದ್ದರೂ 1–2 ರಾಜ್ಯಗಳನ್ನು ಹೊರತುಪಡಿಸಿದರೆ ಬೇರೆಡೆ ಅವುಗಳಿಗೆ ಅಸ್ತಿತ್ವವೇ ಇಲ್ಲ. ದೇಶದ ಮನಃಸ್ಥಿತಿಗೆ ಅವುಗಳ ಸಿದ್ಧಾಂತ ತಾಳೆ ಆಗದಿರುವುದೇ ಇದಕ್ಕೆ ಕಾರಣ’ ಎಂದು ತಿಳಿಸಿದರು.

‘ಸಾಮಾಜಿಕ ನೆಲೆಗಟ್ಟಿನಲ್ಲಿ ಪ್ರಾದೇಶಿಕ ಪಕ್ಷಗಳು ಭದ್ರವಾಗಿವೆ. ಆದರೆ, ಅವುಗಳು ಅಧಿಕಾರಕ್ಕೆ ಬಂದರೆ ದೇಶದ ಭವಿಷ್ಯವನ್ನು ಹೇಗೆ ನೋಡುತ್ತವೆ ಎನ್ನುವ ಸ್ಪಷ್ಟತೆ ಇಲ್ಲ. ಉದಾಹರಣೆಗೆ ಜೆ.ಜಯ­ಲಲಿತಾ ಪ್ರಧಾನಿಯಾದರೆ ಶ್ರೀಲಂಕಾ ವಿಷಯವಾಗಿ ನಮ್ಮ ವಿದೇಶಾಂಗ ನೀತಿ ಉಗ್ರರೂಪ ತಾಳುವ ಸಾಧ್ಯತೆ ಇದೆ’ ಎಂದು ಸಂಶಯ ವ್ಯಕ್ತಪಡಿಸಿದರು.

‘ಜಯಲಲಿತಾ, ಮಮತಾ ಬ್ಯಾನರ್ಜಿ, ಮುಲಾಯಂ ಸಿಂಗ್‌ ಯಾದವ್‌ ಸೇರಿದಂತೆ ಪ್ರಾದೇಶಿಕ ಪಕ್ಷಗಳ ಯಾವೊಬ್ಬ ನಾಯಕರೂ ದೇಶದ ಬಗೆಗೆ ಮಾತನಾಡುತ್ತಿಲ್ಲ. ತಮ್ಮ ರಾಜ್ಯದ ಕುರಿತಷ್ಟೇ ಹೇಳುತ್ತಾರೆ. ಈ ವಿಷಯದಲ್ಲಿ ಮೋದಿಯೇ ಪರವಾಗಿಲ್ಲ. ಅವರು ದೇಶದ ಕುರಿತು ಮಾತನಾಡುತ್ತಾರೆ. ಕೆಲ ಸಮುದಾಯಗಳ ಆಕಾಂಕ್ಷೆಗಳಿಗೆ ಮಾತ್ರ ಸ್ಪಂದಿಸುವಂತಿದ್ದರೂ ಬಿಜೆಪಿಗೆ ಒಂದು ಸ್ಪಷ್ಟ ದೃಷ್ಟಿಕೋನ ಇದೆ’ ಎಂದು ಹೇಳಿದರು.

‘ಆರ್ಥಿಕ ನೀತಿ ಬಲು ಸಂಕೀರ್ಣವಾದ ವಿಷಯ. ಪಕ್ಷಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ಹೇಗೆ ಸ್ಪಂದಿಸುತ್ತವೆ ಎನ್ನುವುದು ಸಹ ಅಸ್ಪಷ್ಟವಾಗಿದೆ. ಆಂತರಿಕ ನಿವ್ವಳ ಉತ್ಪನ್ನ (ಜಿಡಿಪಿ) ಏರಿಕೆ ಆಗ­ಬೇಕೆಂದರೆ ಕೈಗಾರಿಕೆಗಳ ಮಾಲಿನ್ಯವನ್ನೂ ಸಹಿಸಿ­ಕೊಳ್ಳಲೇಬೇಕು. ಮಾಲಿನ್ಯ ನಿಯಂತ್ರಣಕ್ಕೆ ಮುಂದಾ­ದರೆ ಕೈಗಾರಿಕೆಗಳು ಆ ಪ್ರದೇಶವನ್ನು ಬಿಟ್ಟು ಹೋಗುತ್ತವೆ. ಕೈಗಾರಿಕೆಗಳಿಲ್ಲದೆ ಉದ್ಯೋಗ ಸೃಷ್ಟಿ ಅಸಾಧ್ಯ. ಆದರೆ, ಮಾಲಿನ್ಯದಿಂದ ಜನರ ಆರೋಗ್ಯ ಕೆಡುತ್ತದೆ’ ಎಂದು ಸಂಕೀರ್ಣ ಸಂಗತಿಗಳ ಮೇಲೆ ಬೆಳಕು ಚೆಲ್ಲಿದರು.

‘ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್‌ ಪಕ್ಷ ಸಾಮಾಜಿಕವಾಗಿ ಹೆಚ್ಚು ಪ್ರಜಾತಂತ್ರದಿಂದ ಕೂಡಿದೆ. ಆ ಪಕ್ಷದ ನೀತಿಗಳು ಮಾತ್ರ ಅಲ್ಲಿನ ಮುಖಂಡರಲ್ಲೇ ಗೊಂದಲ ಮೂಡಿಸಿವೆ’ ಎಂದು ಅಭಿಪ್ರಾಯಪಟ್ಟರು. ‘ಭಾರತದ ಸನ್ನಿವೇಶದಲ್ಲಿ ವ್ಯಕ್ತಿಗಿಂತ ಪಕ್ಷಕ್ಕೇ ಜನ ಹೆಚ್ಚಿನ ಮನ್ನಣೆ ಕೊಡುತ್ತಾರೆ. ವ್ಯಕ್ತಿಯ ಹಿನ್ನೆಲೆ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದ ಅವರು, ‘ಹೊಸ ಸರ್ಕಾರ ರಚನೆಯಲ್ಲಿ ಪ್ರಾದೇಶಿಕ ಪಕ್ಷಗಳು ಮಹತ್ವದ ಪಾತ್ರ ನಿಭಾಯಿಸುವುದು ಖಂಡಿತ’ ಎಂದು ಭವಿಷ್ಯ ನುಡಿದರು. ಜೈನ್‌ ವಿಶ್ವವಿದ್ಯಾಲಯದ ಸಹ ಕುಲಪತಿ ಡಾ. ಸಂದೀಪ ಶಾಸ್ತ್ರಿ ಹಾಜರಿದ್ದರು.

‘ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್‌ ಪಕ್ಷ ಸಾಮಾಜಿಕವಾಗಿ ಹೆಚ್ಚು ಪ್ರಜಾತಂತ್ರದಿಂದ ಕೂಡಿದೆ. ಆ ಪಕ್ಷದ ನೀತಿಗಳು ಮಾತ್ರ ಅಲ್ಲಿನ ಮುಖಂಡರಲ್ಲೇ ಗೊಂದಲ ಮೂಡಿಸಿವೆ’
–ಡಾ. ಘನಶ್ಯಾಮ್‌ ಷಾ, ರಾಜಕೀಯ ವಿಶ್ಲೇಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT