ಬೆಂಗಳೂರು: ‘ಸರ್ಕಾರ ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿರುವಂತೆ, ವಾಹನಗಳ ಸಂಖ್ಯೆ ನಿಯಂತ್ರಣಕ್ಕೂ ಕಾನೂನು ತರಬೇಕು’ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿ.ಗೋಪಾಲಗೌಡ ಹೇಳಿದರು. ನಗರ ಸಿವಿಲ್ ಕೋರ್ಟ್ ಆವರಣದ ವಕೀಲರ ಸಂಘದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪಶ್ಚಿಮ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಡಾ.ಸಿ.ಟಿ.ಮೂರ್ತಿ ಅವರ ‘ಸೇಫ್ ಜರ್ನಿ ಟು ಸ್ಕೂಲ್’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ದಿನ ನಿತ್ಯ ಅಮೂಲ್ಯ ಜೀವಗಳು ಅಪಘಾತದಲ್ಲಿ ಸಾವನ್ನಪ್ಪುತ್ತಿವೆ. ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಬೇಕು. ವಾಹನಗಳ ಸಂಖ್ಯೆ ನಿಯಂತ್ರಣದ ಪ್ರಸ್ತಾವವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು’ ಎಂದರು. ‘ಮೋಟಾರು ವಾಹನ ಕಾಯ್ದೆಯನ್ನು ಪಾಲಿಸದೆ ಇರುವವರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಅವರ ಚಾಲನಾ ಪರವಾನಗಿಯನ್ನೇ ರದ್ದುಗೊಳಿಸಬೇಕು’ ಎಂದು ಹೇಳಿದರು.
‘ಬದ್ಧತೆಯಿರುವ ಅಧಿಕಾರಿಗಳ ಸಂಖ್ಯೆ ಹೆಚ್ಚಬೇಕಿದೆ. ರಾಜಕಾರಣಿಗಳು, ಅಧಿಕಾರಿಗಳು, ವಕೀಲರು, ಸಾಹಿತಿಗಳು, ಮಾಧ್ಯಮದವರು ಒಟ್ಟಾಗಿ ಅಪಘಾತ ಮತ್ತು ಕಾನೂನಿನ ಬಗ್ಗೆ ಅರಿವು ಮೂಡಿಸಬೇಕಿದೆ’ ಎಂದರು. ‘ಅಪಘಾತದ ನಂತರ ಆಗುವ ಪರಿಣಾಮ ಬಹಳ ಭೀಕರ. ಅಪಘಾತದಲ್ಲಿ ಮಕ್ಕಳನ್ನು ಕಳೆದುಕೊಂಡ ಪೋಷಕರ ಪರಿಸ್ಥಿತಿಯನ್ನು ಊಹಿಸುವುದೂ ಕಷ್ಟ. ಸುರಕ್ಷಿತ ಚಾಲನೆ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು’ ಎಂದು ನುಡಿದರು.
‘ಸೇಫ್ ಜರ್ನಿ ಟು ಸ್ಕೂಲ್’ ಪುಸ್ತಕವು ಅನೇಕ ಮಾಹಿತಿಗಳನ್ನು ಒಳಗೊಂಡು ಪೋಷಕರಿಗೆ ಮತ್ತು ಮಕ್ಕಳಿಗೆ ಮಾಹಿತಿ ಪೂರ್ಣವಾಗಿದೆ’ ಎಂದರು. ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಎನ್. ಶ್ರೀನಿವಾಸಾಚಾರಿ, ‘ಮೋಟಾರು ವಾಹನ ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ಒತ್ತು ನೀಡಬೇಕಿದೆ’ ಎಂದು ಹೇಳಿದರು.
ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತ ಡಿ.ತಂಗರಾಜ್ ಮಾತನಾಡಿ, ‘ರಸ್ತೆ ಸುರಕ್ಷತೆ ಬಗೆಗೆ ಸರ್ಕಾರ ಮತ್ತು ಸಮುದಾಯ ಎರಡೂ ತಮ್ಮ ಹೊಣೆ ನಿಭಾಯಿಸಬೇಕು’ ಎಂದರು. ಪುಸ್ತಕದ ಲೇಖಕ ಹಾಗೂ ಪಶ್ಚಿಮ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಡಾ.ಸಿ.ಟಿ.ಮೂರ್ತಿ, ‘ದೇಶದಾದ್ಯಂತ ರಸ್ತೆ ಅಪಘಾತದಲ್ಲಿ ಅನೇಕ ಜನರು ಸಾವನ್ನಪ್ಪುತ್ತಿದ್ದಾರೆ.
ಪ್ರತಿ ವರ್ಷ ಚೀನಾದಲ್ಲಿ 80,000, ಆಸ್ಟ್ರೇಲಿಯಾ 1,193, ರಷ್ಯಾದಲ್ಲಿ 28,000 ಜನ ಮೃತಪಟ್ಟರೆ, ನಮ್ಮ ದೇಶದಲ್ಲಿ ಪ್ರತಿವರ್ಷ 1,50,000 ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.