ಯಲಹಂಕ: ‘ನಮ್ಮಲ್ಲಿರುವ ಸಸ್ಯ ತಳಿಗಳನ್ನು ಅದರಲ್ಲೂ ವಿಶೇಷವಾಗಿ ರೈತರು ಸಂರಕ್ಷಿಸಿದ ಸಸ್ಯತಳಿಗಳನ್ನು ರಕ್ಷಣೆ ಮಾಡಬೇಕು. ಹಾಗೆಯೇ ಹಲಸಿನ ವಿವಿಧ ದೇಶೀ ತಳಿಗಳನ್ನು ಸಂರಕ್ಷಣೆ ಮಾಡುವುದು ಬಹಳ ಮುಖ್ಯ’ ಎಂದು ಸಸ್ಯತಳಿ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ (ನವದೆಹಲಿ) ಅಧ್ಯಕ್ಷ ಡಾ.ಆರ್.ಆರ್. ಹಂಚಿನಾಳ್ ಹೇಳಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಜೈವಿಕ ತಂತ್ರಜ್ಞಾನ ವಿಭಾ ಗದ (ನವದೆಹಲಿ) ಆಶ್ರಯದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಹಲಸು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
‘ಸಸ್ಯತಳಿಗಳನ್ನು ಕಾನೂನಿನ ಚೌಕಟ್ಟಿನಲ್ಲಿ ರಕ್ಷಣೆ ಮಾಡಲು ಮತ್ತು ರೈತರ ಹಕ್ಕುಗಳನ್ನು ರಕ್ಷಿಸಲು ಭಾರತ ಸರ್ಕಾರ ಸಸ್ಯತಳಿ ಮತ್ತು ರೈತರ ಹಕ್ಕುಗಳ ರಕ್ಷಣೆ ಕಾಯಿದೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಈ ಕಾನೂ ನಿನ ಕುರಿತು ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಲುವಾಗಿ ಪ್ರಾಧಿಕಾರವು ಪ್ರಸ್ತುತ ವರ್ಷದಲ್ಲಿ ₨5 ಕೋಟಿ ಅನುದಾನವನ್ನು ಮೀಸಲಿರಿಸಿದೆ’ ಎಂದು ತಿಳಿಸಿದರು.
ಭಾರತೀಯ ಕೃಷಿ ಸಂಶೋಧನಾ ಪರಿಷತ್‌ನ (ತೋಟಗಾರಿಕೆ) ಉಪ ಮಹಾನಿರ್ದೇಶಕ ಡಾ.ಎನ್.ಕೆ. ಕೃಷ್ಣಕುಮಾರ್ ಮಾತನಾಡಿ, ‘ಹಲಸು ಭಾರತದ ಪ್ರಮುಖ ನಾಟಿ ಹಣ್ಣಿನ ಬೆಳೆಯಾಗಿದ್ದು, ಹಣ್ಣಿ ಗಾಗಿ, ಮರಕ್ಕಾಗಿ ಉಪಯೋಗಿಸುವ ಬಹುಪಯೋಗಿ ಬೆಳೆಯಾಗಿದೆ.
ಶೈತ್ಯಾಗಾರದಲ್ಲಿ ಹಲಸಿನ ಪರಾಗರೇಣುವನ್ನು ಸಂರಕ್ಷಿಸುವ ಮೂಲಕ ಹಲಸಿನ ವಿವಿಧ ಬೆಳೆ ಜಾತಿಗಳನ್ನು ಸಂರಕ್ಷಿಸಬಹುದು’ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕೃಷಿ ಪದವೀಧರರಾಗಿ ಕೃಷಿ ಕ್ಷೇತ್ರದ ಬೆಳವಣಿಗೆಗಾಗಿ ಸೇವೆ ಸಲ್ಲಿಸಿರುವ ಜಿಲ್ಲೆಗಳ 32 ಸಾಧಕರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಎ.ಎಸ್.ಪ್ರೇಮ ನಾಥ್, ಕೆನರಾ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಆರ್.ಕೆ.ಭಂಡಾರಿ, ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಎನ್.ನಾಗರಾಜ್, ಶಿಕ್ಷಣ ನಿರ್ದೇ ಶಕ ಡಾ.ಡಿ. ಪಿ.ಕುಮಾರ್, ವ್ಯವಸ್ಥಾಪಕ ಮಂಡಳಿ ಸದಸ್ಯರಾದ ಆಶಾ ಶೇಷಾದ್ರಿ, ಪ್ರೊ.ಹಿರೇವೆಂಕಣ್ಣಗೌಡರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.