ADVERTISEMENT

‘ಹಡ್ಸನ್‌ ಚರ್ಚ್‌’ಗೆ 109ನೇ ವಾರ್ಷಿಕೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2013, 20:16 IST
Last Updated 22 ಸೆಪ್ಟೆಂಬರ್ 2013, 20:16 IST

ಬೆಂಗಳೂರು: ನಗರದ ಹಡ್ಸನ್ ಸ್ಮಾರಕ ಚರ್ಚ್ನ 109ನೇ ವಾರ್ಷಿಕೋತ್ಸವ ಭಾನುವಾರ ಸಂಭ್ರಮದಿಂದ ಜರುಗಿತು.
ಪಾಲಿಕೆ ಕಟ್ಟಡದ ಸನಿಹದಲ್ಲಿಯೇ ಇರುವ ಈ ಚರ್ಚ್‌, ರೆವೆಡೆಂಡ್‌ ಜೋಶಾಯ್‌ ಹಡ್ಸನ್‌ ಅವರ ನೆನಪಿನಲ್ಲಿ 1904ರಲ್ಲಿ ನಿರ್ಮಾಣ ಗೊಂಡಿದೆ.

ತ್ರಿಕೋನಾಕಾರದ ನಿವೇಶನದಲ್ಲಿ ನಿರ್ಮಾಣಗೊಂಡಿರುವ ಈ ಚರ್ಚ್‌ 28 ಅಡಿ ಅಗಲ ಮತ್ತು 88 ಅಡಿ ಉದ್ದವಿದೆ. ನೆಲ ಗೋಪುರಕ್ಕೆ ಅಳವಡಿಸಿದ ಟೈಲ್ಸ್‌ಗಳನ್ನು ಇಂಗ್ಲೆಂಡ್‌ನಿಂದ ತರಿಸಲಾಗಿದೆ. ಗಾಥಿಕ್‌ ಶೈಲಿಯ ಈ ಕಟ್ಟಡ ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಹಡ್ಸನ್‌ ಮೈಸೂರು ಸಂಸ್ಥಾನದ ವೆಸ್ಲಿಯನ್‌ ಮಿಷನ್‌ ಅಧ್ಯಕ್ಷರಾಗಿದ್ದ ಹಡ್ಸನ್‌ ಅವರ ಹೆಸರು ಚಿರಕಾಲ ಉಳಿಯುವಂತೆ ಮಾಡಲು ಅವರ ಸ್ನೇಹಿತರು ಈ ಚರ್ಚ್‌ ನಿರ್ಮಿಸಿದ್ದಾರೆ. ಸುಮಾರು 2,500 ಜನರು ಪ್ರಾರ್ಥನೆ ಸಲ್ಲಿಸಲು ವಿಶಾಲವಾದ ಸ್ಥಳಾವಕಾಶವನ್ನು ಹೊಂದಿದೆ.

ಬೆಳಿಗ್ಗೆ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಆಯೋಜಿಸಲಾಗಿತ್ತು. ನೂರಾರು ಜನ ಪಾಲ್ಗೊಂಡಿದ್ದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಯಿತು. ವಿವಿಧ ಚರ್ಚ್‌ಗಳ ಮುಖಂಡರು, ಅನುಯಾಯಿಗಳು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮಂಗಳೂರಿನಿಂದ ಬಂದಿದ್ದ ಸಂಗೀತಗಾರರ ತಂಡ ಏಸುಗೀತೆಗಳನ್ನು ಪ್ರಸ್ತುತಪಡಿಸಿತು. ಸಭಾಪಾಲಕ ರೆವೆಡೆಂಡ್‌ ಎಸ್‌. ವಿಲಿಯಂ ಜೋನ್ಸ್‌, ಸಹ ಸಭಾಪಾಲಕರಾದ ರುತ್‌ ರೇಖಾ ಮೈಕೆಲ್‌, ಕಾರ್ಯದರ್ಶಿ ಎ.ಸಂಪತ್‌ಕುಮಾರ್‌, ಸಂಚಾಲಕ ಸುಭಾಷ್‌ ಮನೋಹರ ದಾಸ್‌, ಸತ್ಯ ಪ್ರೇಮಕುಮಾರಿ, ಲಾರೆನ್ಸ್‌ ಓ’ಲಿವರ್‌ ಜಾರ್ಜ್‌ ಮತ್ತು ಅಬ್ರಹಾಂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.