ADVERTISEMENT

10ರಂದು ಸ್ವಾಭಿಮಾನಿ ಕನ್ನಡಿಗರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 19:35 IST
Last Updated 7 ಮಾರ್ಚ್ 2011, 19:35 IST

ಬೆಂಗಳೂರು: ಕರ್ನಾಟಕ ಜನಶಕ್ತಿ ಸಂಘಟನೆಯು ಇದೇ 10 ರಂದು ನಗರದ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ‘ಸ್ವಾಭಿಮಾನ ಕನ್ನಡಿಗರ ಸಮಾವೇಶ’ ಆಯೋಜಿಸಿದೆ.
ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವಕನ್ನಡ ಸಮ್ಮೇಳನದ ಉದ್ಘಾಟನೆಗೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರನ್ನು ಆಯ್ಕೆ ಮಾಡಿರುವ ಹಿನ್ನಲೆಯಲ್ಲಿ ಮತ್ತು ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಬದಲಾಗುತ್ತಿರುವ ರಾಜ್ಯ ಸರ್ಕಾರದ ನಿಲುವಿನ ಕುರಿತು ಚಿಂತನೆ ನಡೆಸಲು ಸಮಾವೇಶವು ವೇದಿಕೆಯಾಗಲಿದೆ.

‘ಈ ಸಮಾವೇಶವು ವಿಶ್ವಕನ್ನಡ ಸಮ್ಮೇಳನಕ್ಕೆ ವಿರೋಧವಾಗಲಿ, ಪರ್ಯಾಯವಾಗಲಿ ಅಲ್ಲ. ನಾವು ವಿರೋಧಿಸುತ್ತಿರುವುದು ನಾರಾಯಣಮೂರ್ತಿ ಪ್ರತಿನಿಧಿಸುತ್ತಿರುವ ಸಾಮ್ರಾಜ್ಯಶಾಹಿ ಧೋರಣೆಯನ್ನು ಮತ್ತು ಈ ಧೋರಣೆಗೆ ಮಣೆ ಹಾಕಿರುವ ಸರ್ಕಾರದ ಆದ್ಯತೆಗಳನ್ನು’ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಾ. ವಾಸು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಸಮಾವೇಶದಲ್ಲಿ ಕನ್ನಡ ಸಾರ್ವಭೌಮತೆ ಮತ್ತು ವಿಶ್ವ ಕನ್ನಡ ಸಮಸ್ಯೆಗಳ ಕುರಿತು ಚಿಂತನಾ ಗೋಷ್ಠಿ ನಡೆಯಲಿದೆ. ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಉದ್ಘಾಟಿಸಲಿದ್ದಾರೆ.ಬರಗೂರು ರಾಮಚಂದ್ರಪ್ಪ, ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ರಹಮತ್ ತರೀಕೆರೆ, ವಿಮರ್ಶಕ ಪ್ರೊ.ಕೆ.ಮರುಳಸಿದ್ದಪ್ಪ, ಲೇಖಕ ಬಂಜಗೆರೆ ಜಯಪ್ರಕಾಶ್, ಸಿಪಿಐ ರಾಜ್ಯ ಕಾರ್ಯದರ್ಶಿ ಡಾ.ಸಿದ್ದನಗೌಡ ಪಾಟೀಲ್, ಇತಿಹಾಸ ಪ್ರಾಧ್ಯಾಪಕಿ ಡಾ. ವಸು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.