ADVERTISEMENT

ಕೊರೊನಾ ಜೊತೆ ಬದುಕೋಣ: ‘ಜೀವನ ಪಾಠ ಕಲಿಸುವ 14 ದಿನಗಳ ವನವಾಸ’

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಡಾ. ಅರುಣ್ ಕುಮಾರ್ ಮೋದಿ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 20:07 IST
Last Updated 17 ಸೆಪ್ಟೆಂಬರ್ 2020, 20:07 IST
ಡಾ. ಅರುಣ್ ಕುಮಾರ್
ಡಾ. ಅರುಣ್ ಕುಮಾರ್   

ಬೆಂಗಳೂರು: ‘ನಮ್ಮ ದೇಹದ ಮೇಲೆ ಕೊರೊನಾ ಎಂಬ ಸೋಂಕು ದಾಳಿಮಾಡಿದಲ್ಲಿ ಅದನ್ನು ಹೊಡೆದೊಡಿಸಲು ಎಲ್ಲ ಚಿಂತೆಗಳನ್ನು ಬದಿಗಿಟ್ಟು, 14 ದಿನಗಳು ವನವಾಸ ನಡೆಸುವ ಮೂಲಕ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅಷ್ಟೇ ಅಲ್ಲ, ಈ ಅವಧಿ ನಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಲು ಸಿಕ್ಕ ಅವಕಾಶ ಅಂದುಕೊಳ್ಳಬೇಕು’.

–ಇದು ಕೊರೊನಾ ಸೋಂಕನ್ನು ಜಯಿಸಿ ಬಂದಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಸಹಾಯಕ ಶಸ್ತ್ರಚಿಕಿತ್ಸಕ ಡಾ. ಅರುಣ್ ಕುಮಾರ್ ಮೋದಿ ಅವರ ಮನದಾಳದ ಮಾತುಗಳು. ಕ್ಯಾನ್ಸರ್ ರೋಗಿಗಳ ಸಂಪರ್ಕದಲ್ಲಿದ್ದ ಅವರಿಗೆ ಜೂನ್‌ನಲ್ಲಿ ಕೊರೊನಾ ಸೋಂಕು ತಗುಲಿತ್ತು. ಈಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ.ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ಲಾಸ್ಮಾ ದಾನ ಮಾಡಿರುವ ಅವರು, ಕೊರೊನಾ ಸೋಂಕಿತರಾಗಿ ಮನೆ ಆರೈಕೆಗೆ ಒಳಗಾದ ನೂರಕ್ಕೂ ಅಧಿಕ ಮಂದಿಗೆ ದೂರವಾಣಿ ಮೂಲಕವೇ ಉಚಿತವಾಗಿ ಕೌನ್ಸೆಲಿಂಗ್ ಮಾಡಿ ಧೈರ್ಯ ತುಂಬಿದ್ದಾರೆ.

‘ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಬಳಿಕ ಮನೆ ಆರೈಕೆಗೆ ಒಳಗಾದೆ.15 ದಿನಗಳವರೆಗೂ ಜ್ವರ ಹಾಗೂ ಕೆಮ್ಮಿನ ಸಮಸ್ಯೆಯಿತ್ತು. ಹಾಗೆಂದು ನಾನು ಭಯಕ್ಕೆ ಒಳಗಾಗಲಿಲ್ಲ. ಸಂಪೂರ್ಣವಾಗಿ ಚೇತರಿಸಿಕೊಳ್ಳಲು 28 ದಿನಗಳು ಬೇಕಾದವು. ಉತ್ತಮ ಆಹಾರ, ಹಣ್ಣುಗಳು ಹಾಗೂ ರೋಗನಿರೋಧಕಶಕ್ತಿ ವೃದ್ಧಿಗೆ ಪೂರಕವಾದ ಮಾತ್ರೆಗಳನ್ನು ಸೇವಿಸಿದೆ. ಈ ಅವಧಿಯಲ್ಲಿ ದೇಹಕ್ಕೆ ಹೆಚ್ಚಿನ ವಿಶ್ರಾಂತಿ ಬೇಕಾಗುತ್ತದೆ. ಹಾಗಾಗಿ ದಿನದ ಅಧಿಕ ಸಮಯ ನಿದ್ದೆ ಮಾಡುತ್ತಿದ್ದೆ. ಗುಣಮುಖನಾದ ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ, ಪ್ಲಾಸ್ಮಾ ದಾನ ಮಾಡಿದೆ’ ಎಂದು ಡಾ. ಅರುಣ್ ಕುಮಾರ್ ಮೋದಿ ತಿಳಿಸಿದರು.

ADVERTISEMENT

‘ಪ್ಲಾಸ್ಮಾ ದಾನ ಮಾಡಿದಲ್ಲಿ ನಮ್ಮಲ್ಲಿನ ರೋಗನಿರೋಧಕಶಕ್ತಿ ಕಡಿಮೆ ಆಗುತ್ತದೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಪ್ಲಾಸ್ಮಾ ದಾನ ಮಾಡುವುದರಿಂದ ನಾವು ಇನ್ನೊಂದು ಜೀವ ಉಳಿಸಿದಂತಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾದ ನಡುವೆಯೇ ನಾವು ಬದುಕಬೇಕಾಗಿದೆ. ಒಳ್ಳೆಯ ಹವ್ಯಾಸಗಳನ್ನು ಬೆಳೆಸುಕೊಳ್ಳುವ ಜತೆಗೆ ಯೋಗಾಸನ, ವ್ಯಾಯಾಮ ಮಾಡಬೇಕು. ತರಕಾರಿಗಳು–ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಾಗ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆಗ ನಮ್ಮಿಂದ ಮನೆಮಂದಿಗೆ ರೋಗ ಹರಡುವುದನ್ನು ತಡೆಯಲು ಸಾಧ್ಯ. ಪೂರಕ ಚಿಕಿತ್ಸೆಗೆ ಕೂಡ ವ್ಯಕ್ತಿ ಬೇಗ ಸ್ಪಂದಿಸುತ್ತಾನೆ’ ಎಂದರು.

‘ಸೋಂಕಿನ ಬಗ್ಗೆ ಅನಗತ್ಯವಾಗಿ ಭಯ ಪಡಬಾರದು. ಬದಲಾಗಿ ಸಕಾರಾತ್ಮಕವಾಗಿ ಯೋಚನೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಆಗ ಸೋಂಕಿತರಾದರೂ ಬೇಗ ಗುಣಮುಖವಾಗಬಹುದು’ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.