ADVERTISEMENT

22ರಿಂದ ಆರು ರಾಜ್ಯಗಳಲ್ಲಿ ಆನೆ ಗಣತಿ ಕಾರ್ಯ

​ಪ್ರಜಾವಾಣಿ ವಾರ್ತೆ
Published 14 ಮೇ 2012, 19:30 IST
Last Updated 14 ಮೇ 2012, 19:30 IST
22ರಿಂದ ಆರು ರಾಜ್ಯಗಳಲ್ಲಿ ಆನೆ ಗಣತಿ ಕಾರ್ಯ
22ರಿಂದ ಆರು ರಾಜ್ಯಗಳಲ್ಲಿ ಆನೆ ಗಣತಿ ಕಾರ್ಯ   

ಬೆಂಗಳೂರು: ಕರ್ನಾಟಕ ಸೇರಿದಂತೆ ಐದು ರಾಜ್ಯಗಳಲ್ಲಿ ಇದೇ 22ರಿಂದ ಆನೆಗಳ ಗಣತಿ ಆರಂಭವಾಗಲಿದೆ. 
ಐದು ವರ್ಷಗಳಿಗೆ ಒಮ್ಮೆ ರಾಷ್ಟ್ರದಾದ್ಯಂತ ಆನೆಗಳ ಗಣತಿ ನಡೆಸಲಾಗುತ್ತದೆ. ಇದರ ಅಂಗವಾಗಿ ರಾಜ್ಯ ಸೇರಿದಂತೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾಗಳಲ್ಲಿ ಏಕಕಾಲಕ್ಕೆ ಗಣತಿ ಆರಂಭವಾಗಲಿದೆ. 

`ಸಾಮಾನ್ಯವಾಗಿ ಮೀಸಲು ಅರಣ್ಯ ಪ್ರದೇಶಗಳಲ್ಲಿನ ಆನೆಗಳ ಗಣತಿ ನಡೆಸಲಾಗುತ್ತದೆ. ಆದರೆ ರಾಷ್ಟ್ರದಾದ್ಯಂತ ಹಮ್ಮಿಕೊಳ್ಳಲಾಗುತ್ತಿರುವ ಈ ಗಣತಿಯಲ್ಲಿ ಮೀಸಲು ಪ್ರದೇಶವೂ ಸೇರಿದಂತೆ, ಸಾಮಾನ್ಯ ಅರಣ್ಯ, ಅರಣ್ಯೇತರ ಪ್ರದೇಶ ಎಲ್ಲೆಡೆಗಳಲ್ಲಿನ ಆನೆಗಳ ಒಟ್ಟಾರೆ ಗಣತಿ ನಡೆಸಲಾಗುವುದು~ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಆನೆ ಯೋಜನೆ) ಅಜಯ್ ಮಿಶ್ರಾ ಅವರು ತಿಳಿಸಿದರು.

`ಗಣತಿ ಹೇಗೆ ನಡೆಸಬೇಕು ಎಂಬ ಬಗ್ಗೆ ಆನೆ ತಜ್ಞರಾದ ರಮಣ ಸುಕುಮಾರ್, ಎಂ.ಡಿ. ಮಧುಸೂದನ್, ಸುರೇಂದ್ರ ವರ್ಮ ಮುಂತಾದವರ ನೇತೃತ್ವದಲ್ಲಿ ಇದೇ 10ರಂದು ಬಂಡೀಪುರದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಅರಣ್ಯ ಇಲಾಖೆಯ ಹಲವು ಅಧಿಕಾರಿಗಳು ಭಾಗವಹಿಸಿ ಸಲಹೆ ಸೂಚನೆ ನೀಡಿದ್ದಾರೆ~ ಎಂದು ಅವರು ಹೇಳಿದರು.

`ಗಣತಿಯನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ಈಗಾಗಲೇ ಮಾರ್ಗಸೂಚಿ ರೂಪಿಸಲಾಗಿದೆ. ಇದರಲ್ಲಿ ಪಾಲ್ಗೊಳ್ಳುವ ಇಲಾಖೆಯ ಅಧಿಕಾರಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸಿಬ್ಬಂದಿಗೆ ತರಬೇತಿ ನೀಡಲಾಗುವುದು~ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದೀಪಕ್ ಶರ್ಮ ತಿಳಿಸಿದರು.

`ಆನೆಗಳ ಒಟ್ಟಾರೆ ಗಣತಿಯನ್ನಷ್ಟೇ ಅಲ್ಲದೇ, ಅವುಗಳ ವಯೋಮಾನ ಹಾಗೂ ಲಿಂಗಕ್ಕೆ ಅನುಗುಣವಾಗಿ ಪ್ರತ್ಯೇಕ ಅಂಕಿ ಅಂಶ ಕಲೆ ಹಾಕಲಾಗುವುದು~ ಎಂದು ಮಾಹಿತಿ ನೀಡಿದರು.

`ಈ ಗಣತಿಗೆ ಯೋಗ್ಯ ಸ್ವಯಂ ಸೇವಕರನ್ನು ನೇಮಕ ಮಾಡುವ ಜವಾಬ್ದಾರಿ ಅರಣ್ಯ ಇಲಾಖೆಯ ಮೇಲಿದೆ. ಹೆಚ್ಚು ಮಂದಿ ಸ್ವಯಂ ಸೇವಕರಿದ್ದರೆ ಆನೆಗಳ ಗಣತಿ ಮಾಡುವುದು ಸುಲಭ. ಆದರೆ ಇದು ಹಲವು ಗೊಂದಲಗಳಿಗೂ ಎಡೆ ಮಾಡಿಕೊಡುವ ಸಾಧ್ಯತೆ ಇದೆ.
 
ತಾವು ಪ್ರವಾಸಕ್ಕೆ ಹೋಗುತ್ತಿಲ್ಲ ಎನ್ನುವುದನ್ನು ಪ್ರತಿಯೊಬ್ಬ ಸ್ವಯಂ ಸೇವಕರೂ ಮನದಟ್ಟು ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ. ಆದುದರಿಂದ ಅವರನ್ನು ಆಯ್ಕೆ ಮಾಡುವ ಮುನ್ನ ಅರಣ್ಯ ಇಲಾಖೆ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಕ್ರಿಯೆ ಸಾಗಿದೆ~ ಎಂದು ವರ್ಮ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.