ADVERTISEMENT

‘24ನೇ ವಿಟಿಯು ಯುವ ಉತ್ಸವ’ 24ರಿಂದ

ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿಯಲ್ಲಿ ‘ಬ್ರ್ಯಾಂಡ್‌ ಕರ್ನಾಟಕ‘ದಡಿ ಸಂಸ್ಕೃತಿ ಅನಾವರಣ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 15:47 IST
Last Updated 20 ಮಾರ್ಚ್ 2025, 15:47 IST
ವಿಟಿಯು ಯುವ ಉತ್ಸವ
ವಿಟಿಯು ಯುವ ಉತ್ಸವ   

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ‘24ನೇ ವಿಟಿಯು ಯುವ ಉತ್ಸವ– ಇಂಟರ‍್ಯಾಕ್ಟ್‌– 2025’ ಅನ್ನು ರಾಜರಾಜೇಶ್ವರಿನಗರದಲ್ಲಿರುವ ಗ್ಲೋಬಲ್ ಅಕಾಡೆಮಿ ಆಫ್‌ ಟೆಕ್ನಾಲಜಿಯಲ್ಲಿ ಮಾರ್ಚ್‌ 24ರಿಂದ ನಾಲ್ಕು ದಿನ ಆಯೋಜಿಸಲಾಗಿದೆ.

‘ನಮ್ಮ ರಾಜ್ಯದ ಕಲೆ–ಸಂಸ್ಕೃತಿಯನ್ನು ಅನಾವರಣಗೊಳಿಸುವ ಉತ್ಸವವನ್ನಾಗಿ ಆಯೋಜಿಸಲಾಗುತ್ತಿದ್ದು, ‘ಬ್ರ್ಯಾಂಡ್‌ ಕರ್ನಾಟಕ’ ಶೀರ್ಷಿಕೆಯಡಿ ರಾಜ್ಯದ ನಾಲ್ಕು ಭಾಗಗಳ ಸಂಸ್ಕೃತಿಯನ್ನು ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ’ ಎಂದು ನ್ಯಾಷನಲ್‌ ಎಜ್ಯುಕೇಷನ್‌ ಫೌಂಡೇಷನ್‌ನ (ಎನ್‌ಇಎಫ್) ಟ್ರಸ್ಟಿ ಕಾರ್ಯದರ್ಶಿ ಐಶ್ವರ್ಯ ಡಿಕೆಎಸ್‌ ಹೆಗ್ಡೆ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿ ತನ್ನ 25ನೇ ವಾರ್ಷಿಕೋತ್ಸವದ ಅಂಗವಾಗಿ ವಿಟಿಯು ಉತ್ಸವವನ್ನು ತನ್ನ ಕ್ಯಾಂಪಸ್‌ನಲ್ಲಿ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ. ವಿಟಿಯು ಪ್ರತಿಬಾರಿ ಆಯೋಜಿಸುವ ಯುವ ಉತ್ಸವಕ್ಕಿಂತ ಈ ಬಾರಿ ದಾಖಲೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. 100ಕ್ಕೂ ಹೆಚ್ಚು ಕಾಲೇಜುಗಳಿಂದ ಮೂರೂವರೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ’ ಎಂದರು.

ADVERTISEMENT

‘ರಾಜ್ಯದ ವಿವಿಧ ಭಾಗಗಳಿಂದ ಉತ್ಸವಕ್ಕೆ ಬರುವ ಸುಮಾರು 1,800 ವಿದ್ಯಾರ್ಥಿಗಳಿಗೆ ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿ ವತಿಯಿಂದ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಪ್ರತಿದಿನ ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ನಟ ಧ್ರುವ ಸರ್ಜಾ ಅವರು ಉತ್ಸವ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಹಾಗೂ ಎನ್‌ಇಎಫ್‌ನ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಟಿಯು ಕುಲಪತಿ ವಿದ್ಯಾಶಂಕರ್‌ ಭಾಗವಹಿಲಿದ್ದಾರೆ. ಎರಡನೇ ದಿನದ ಉತ್ಸವದಲ್ಲಿ ಗಾಯಕ ವಿಜಯಪ್ರಕಾಶ್‌ ಅವರ ಸಂಗೀತ ಕಾರ್ಯಕ್ರಮವಿದೆ. ಮೂರನೇ ದಿನ ಡಿಜೆ ವಿನಯ್‌ ಕಾರ್ಯಕ್ರಮ ಹಾಗೂ ಸಮಾರೋಪದಲ್ಲಿ ನಟ ವಿಜಯ ರಾಘವೇಂದ್ರ ಭಾಗವಹಿಸಲಿದ್ದಾರೆ’ ಎಂದು ವಿವರ ನೀಡಿದರು.

‘ನಾಲ್ಕು ದಿನಗಳ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಶಾಸ್ತ್ರೀಯ ಸಂಗೀತ, ರಂಗೋಲಿ ಪ್ರದರ್ಶನ, ನೃತ್ಯ, ಮಿಮಿಕ್ರಿ, ನಾಟಕ, ಗಾಯನ, ರಸಪ್ರಶ್ನೆ, ಚಿತ್ರಕಲೆ, ಕಾರ್ಟೂನ್‌, ಪೋಸ್ಟರ್‌ ತಯಾರಿಸುವ ಸ್ಪರ್ಧೆ, ಚರ್ಚಾ ಸ್ಪರ್ಧೆ, ಪಾಶ್ಚಿಮಾತ್ಯ ನೃತ್ಯ, ಗಾಯನ, ಫ್ಯಾಷನ್‌ ಶೋಗಳು ನಡೆಯಲಿವೆ. 100ಕ್ಕೂ ಹೆಚ್ಚು ತಜ್ಞರು ವಿವಿಧ ಸ್ಪರ್ಧೆಗಳ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಐಶ್ವರ್ಯ ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ನೇತೃತ್ವ

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವ ಉದ್ದೇಶದಿಂದ ‘24ನೇ  ವಿಟಿಯು ಯುವ ಉತ್ಸವ– ಇಂಟರ‍್ಯಾಕ್ಟ್‌– 2025’ರ ಆಯೋಜನೆ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ವಹಿಸಲಾಗಿದೆ. ಕಾಲೇಜಿನ ಆಡಳಿತ ಮಂಡಳಿ ಅವರಿಗೆ ಆರ್ಥಿಕ ನೆರವು ಹಾಗೂ ಇತರೆ ಸೌಲಭ್ಯಗಳೆಲ್ಲವನ್ನೂ ನೀಡುತ್ತಿದೆ. ಹಿಂದೆಂದೂ ನಡೆಯದ ಮುಂದೆನದೂ ನೆನಪಿನಲ್ಲಿಟ್ಟುಕೊಳ್ಳ ಬಹುದಾದಂ ತಹ ಉತ್ಸವವನ್ನು ನಮ್ಮ ವಿದ್ಯಾರ್ಥಿಗಳು ರೂಪಿಸಿದ್ದಾರೆ’ ಎಂದು ಐಶ್ವರ್ಯ ಡಿಕೆಎಸ್‌ ಹೆಗ್ಡೆ ತಿಳಿಸಿದರು. ‘ಐದಾರು ಸಾವಿರ ಯುವಕರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ಅವಕಾಶವನ್ನು ಈ ವೇದಿಕೆ ನೀಡುತ್ತಿದೆ. ಉತ್ಸವದ ನಾಲ್ಕೂ ದಿನಗಳ ಕಾರ್ಯಕ್ರಮವನ್ನು ಕಾಲೇಜಿನ ಯೂಟ್ಯೂಬ್‌ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ’ ಎಂದರು.

ಐದು ವಿಭಾಗಗಳಲ್ಲಿ ಸ್ಪರ್ಧೆ

‘24ನೇ ವಿಟಿಯು ಯುವ ಉತ್ಸವ– ಇಂಟರ‍್ಯಾಕ್ಟ್‌– 2025’ನಲ್ಲಿ ಐದು ವಿಭಾಗಗಳ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ. ಸಂಗೀತ ನೃತ್ಯ ರಂಗಭೂಮಿ ಸಾಹಿತ್ಯ ಫೈನ್‌ ಆರ್ಟ್‌ ವಿಭಾಗದಲ್ಲಿ 25 ಸ್ಪರ್ಧೆಗಳು ನಡೆಯಲಿವೆ. ಇದರಲ್ಲಿ ವಿಜೇತರಾದವರಿಗೆ ಉತ್ತಮ ಬಹುಮಾನದ ಜೊತೆಗೆ ಅಂತರ್‌ ವಿಶ್ವವಿದ್ಯಾಲಯದ ಸ್ಪರ್ಧೆಗಳು ದೇಶ–ವಿದೇಶಗಳಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶವೂ ಸಿಗಲಿದೆ ಎಂದು ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿಯ ಪ್ರಾಂಶುಪಾಲ ಎಚ್.ಬಿ. ಬಾಲಕೃಷ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.