ADVERTISEMENT

ಮೀನಮೇಷ ಎಣಿಸುತ್ತಿರುವ ಖಾಸಗಿ ಕಂಪೆನಿಗಳು: ಬಿಬಿಎಂಪಿಯಿಂದಲೇ ಘಟಕ ಸ್ಥಾಪನೆಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 20:03 IST
Last Updated 1 ಜನವರಿ 2018, 20:03 IST
ಮೀನಮೇಷ ಎಣಿಸುತ್ತಿರುವ ಖಾಸಗಿ ಕಂಪೆನಿಗಳು: ಬಿಬಿಎಂಪಿಯಿಂದಲೇ ಘಟಕ ಸ್ಥಾಪನೆಗೆ ಚಿಂತನೆ
ಮೀನಮೇಷ ಎಣಿಸುತ್ತಿರುವ ಖಾಸಗಿ ಕಂಪೆನಿಗಳು: ಬಿಬಿಎಂಪಿಯಿಂದಲೇ ಘಟಕ ಸ್ಥಾಪನೆಗೆ ಚಿಂತನೆ   

ಬೆಂಗಳೂರು: ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಘಟಕ ಸ್ಥಾಪಿಸಲು ಖಾಸಗಿ ಕಂಪೆನಿಗಳು ಮೀನಮೇಷ ಎಣಿಸುತ್ತಿರುವುದರಿಂದ ಬೇಸತ್ತಿರುವ
ಬಿಬಿಎಂಪಿ ಸ್ವತಃ ಘಟಕ ಸ್ಥಾಪಿಸಲು ಚಿಂತನೆ ನಡೆಸಿದೆ.

ಖಾಸಗಿ ಸಹಭಾಗಿತ್ವದಲ್ಲಿ ಇಂತಹ ಘಟಕಗಳನ್ನು ಸ್ಥಾಪಿಸಲು ಪಾಲಿಕೆ ಮುಂದಾಗಿತ್ತು. ಆದರೆ, ಅದಕ್ಕೆ ಖಾಸಗಿ ಕಂಪೆನಿಗಳು ಅಷ್ಟಾಗಿ ಆಸಕ್ತಿ ತೋರಿಸಿಲ್ಲ. ಈ ಘಟಕಗಳನ್ನು ವಿರೋಧಿಸಿ ಸ್ಥಳೀಯರೂ ಪ್ರತಿಭಟನೆನಡೆಸಿದ್ದರು. ಜಾಗದ ಮಾಲೀಕತ್ವದ ಬಗ್ಗೆಯೂ ಗೊಂದಲಗಳಿದ್ದವು. ಈ ಕಾರಣಗಳಿಂದಾಗಿ ಹಲವು
ವರ್ಷಗಳ ಹಿಂದಿನ ಈ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

‘ಖಾಸಗಿ ಕಂಪೆನಿಗಳ ನೆರವಿಲ್ಲದೆಯೂ, ಪಾಲಿಕೆ ವತಿಯಿಂದಲೇ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಘಟಕ ಸ್ಥಾಪಿಸಬಹುದು. ಈ ಬಗ್ಗೆ ಮೇಯರ್‌ ಜೊತೆ ಚರ್ಚಿಸಿದ್ದೇವೆ. ಅವರೂ ಹಸಿರು ನಿಶಾನೆ ತೋರಿಸಿದ್ದಾರೆ. ಇದಕ್ಕೆ ವಿಶೇಷ ಅನುದಾನ ಒದಗಿಸುವಂತೆ ಕೋರಿ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಲಿದ್ದೇವೆ’ ಎಂದು ಜಂಟಿಆಯುಕ್ತ (ಘನತ್ಯಾಜ್ಯನಿರ್ವಹಣೆ) ಸರ್ಫರಾಜ್‌ ಖಾನ್‌ ತಿಳಿಸಿದರು.

ADVERTISEMENT

ದಿನವೊಂದರಲ್ಲಿ 500 ಟನ್‌ ಕಸದಿಂದ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯದ ಘಟಕ ಸ್ಥಾಪಿಸಲು ಅಂದಾಜು ₹ 300 ಕೋಟಿ ವೆಚ್ಚವಾಗಲಿದೆ. ಇದಕ್ಕೆ ಸ್ವಚ್ಛ ಭಾರತ ಯೋಜನೆ ಅಡಿ ಶೇ 53ರಷ್ಟು ಸಹಾಯಧನವೂ ಸಿಗುತ್ತದೆ. ಹಾಗಾಗಿ ಯೋಜನೆಯ ಅರ್ಧದಷ್ಟುಮೊತ್ತವನ್ನು ಮಾತ್ರ ರಾಜ್ಯ ಸರ್ಕಾರ ಭರಿಸಿದರೆ ಸಾಕು ಎಂದು ಅವರು ವಿವರಿಸಿದರು.

ಈ ಯೋಜನೆಗೆ ಮೂರು ಕಂಪೆನಿಗಳು ಆಸಕ್ತಿ ತೋರಿಸಿದ್ದವು. ಚಿಕ್ಕನಾಗಮಂಗಲದಲ್ಲಿ ದಿನವೊಂದಕ್ಕೆ 500 ಟನ್ ಕಸ ಬಳಸುವ ಸಾಮರ್ಥ್ಯದ ಘಟಕ ಸ್ಥಾಪಿಸಲು ಫ್ರಾನ್ಸ್‌ನ ತ್ರೀ ವೇಸ್‌ ಎನರ್ಜಿ ಸಂಸ್ಥೆ, ಬಾಗಲೂರಿನಲ್ಲಿ 600 ಟನ್‌ ಸಾಮರ್ಥ್ಯದ ಘಟಕಸ್ಥಾಪಿಸಲು ನೆದರ್ಲೆಂಡ್‌ನ ನೆಕ್ಸಸ್‌ ನೋವಸ್‌ ಸಂಸ್ಥೆ, ದೊಡ್ಡಬಿದಿರಕಲ್ಲು ಬಳಿ 100 ಟನ್‌ ಸಾಮರ್ಥ್ಯದ ಘಟಕ ಸ್ಥಾಪಿಸಲು ಅಮೆರಿಕದ ಇಂಡಿಯಂ ಸಂಸ್ಥೆ ಮುಂದಾಗಿದ್ದವು.

ಸೂಕ್ತ ತಂತ್ರಜ್ಞಾನವನ್ನು ಆಯ್ಕೆ ಮಾಡುವ ವಿಚಾರದಲ್ಲಿ ಬಿಬಿಎಂಪಿ ಹಾಗೂ ತಜ್ಞರ ಸಮಿತಿ ನಡುವೆ ಒಮ್ಮತ ಮೂಡದಿರುವುದು ಕೂಡ ಈ ಯೋಜನೆ ಅನುಷ್ಠಾನ ಆಗದಿರುವುದಕ್ಕೆ ಕಾರಣ. ತಂತ್ರಜ್ಞಾನವನ್ನು ಆಯ್ಕೆ ಮಾಡುವ ಸಲುವಾಗಿ ಜರ್ಮನಿ, ಫ್ರಾನ್ಸ್‌, ದಕ್ಷಿಣ ಕೊರಿಯಾ ಹಾಗೂ ಚೀನಾ ದೇಶಗಳಿಗೆ ಬಿಬಿಎಂಪಿ ಅಧಿಕಾರಿಗಳ ತಂಡ ಪ್ರವಾಸ ಕೈಗೊಳ್ಳಲಿದೆ.

ಕಸದಿಂದ ವಿದ್ಯುತ್‌ ಉತ್ಪಾದಿಸಲು ಪ್ರಮುಖವಾಗಿ ಮೂರು ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ ಎನ್ನುತ್ತಾರೆ ಸರ್ಫರಾಜ್‌ ಖಾನ್‌.

ಒಂದು, ಕಸವನ್ನು ಸುಡುವ ತಂತ್ರಜ್ಞಾನ. ಇನ್ನೊಂದು, ಬಯೋಮಿಥೇನೇಷನ್‌ ವಿಧಾನ. ಇದರಲ್ಲಿ ತ್ಯಾಜ್ಯದಿಂದ ಅನಿಲವನ್ನು ಉತ್ಪಾದಿಸಿ ಅದರಿಂದ ವಿದ್ಯುತ್‌ ತಯಾರಿಸಲಾಗುತ್ತದೆ. ಇನ್ನೊಂದು ವಿಧಾನದಲ್ಲಿ ಮಿಶ್ರಕಸವನ್ನು ಒಣಗಿಸಿ ಚಿಂದಿ ಮಾಡಿ, ಅದರ ಹೊಟ್ಟಿನಿಂದ ಅನಿಲವನ್ನು ತಯಾರಿಸಲಾಗುತ್ತದೆ. ಅದರಿಂದ ವಿದ್ಯುತ್‌ ಉತ್ಪಾದಿಸುತ್ತಾರೆ ಎಂದು ಅವರು ವಿವರಿಸಿದರು.

‘ತಾಂತ್ರಿಕ ಪರಿಣತಿ ಇದೆಯೇ?’

ಕಸದಿಂದ ವಿದ್ಯುತ್‌ ಉತ್ಪಾದಿಸುವ ಘಟಕವನ್ನು ನಿರ್ವಹಿಸಲು ಅಗತ್ಯವಿರುವ ತಾಂತ್ರಿಕ ಪರಿಣತಿ ಬಿಬಿಎಂಪಿ ಬಳಿ ಇದೆಯೇ ಎಂದು ಪ್ರಶ್ನೆ ಮಾಡುತ್ತಾರೆ ‘ಸಾಲಿಡ್‌ ವೇಸ್ಟ್‌ ಮ್ಯಾನೇಜ್‌ಮೆಂಟ್‌ ರೌಂಡ್‌ ಟೇಬಲ್‌’ನ ಸಂಧ್ಯಾ ನಾರಾಯಣ್‌.

‘ಸ್ಥಳೀಯ ಸಂಸ್ಥೆ ವತಿಯಿಂದಲೇ ಈ ಘಟಕವನ್ನು ಆರಂಭಿಸುವುದು ಒಳ್ಳೆಯ ಚಿಂತನೆ. ಆದರೆ, ಅದರ ನಿರ್ವಹಣೆ ಹೊಣೆಯನ್ನು ತಾಂತ್ರಿಕ ಪರಿಣತಿ ಇರುವವರಿಗೇ ವಹಿಸಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.