ADVERTISEMENT

ಹೊಸ ವರ್ಷಾಚರಣೆ: ಎಂಬಿಎ ವಿದ್ಯಾರ್ಥಿ ಸೇರಿದಂತೆ ನಾಲ್ವರ ಹತ್ಯೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 20:28 IST
Last Updated 1 ಜನವರಿ 2018, 20:28 IST

ಬೆಂಗಳೂರು: ಭಾನುವಾರ ಮಧ್ಯರಾತ್ರಿ ಹೊಸ ವರ್ಷಾಚರಣೆ ವೇಳೆಯೇ ನಗರದಲ್ಲಿ ನೆತ್ತರು ಹರಿದಿದೆ. ಎಂಬಿಎ ವಿದ್ಯಾರ್ಥಿ ಸೇರಿದಂತೆ ನಾಲ್ವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.

ಕುಡಿದ ಅಮಲಿನಲ್ಲಿ ಪರಸ್ಪರ ಶುಭಾಶಯ ಕೋರುವ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಶುರುವಾದ ಗಲಾಟೆಗಳು ಕೊಲೆಯಲ್ಲಿ ಅಂತ್ಯವಾಗಿವೆ. ಜೆ.ಪಿ.ನಗರ ಠಾಣೆ ವ್ಯಾಪ್ತಿಯಲ್ಲಿ ಎರಡು, ಕಾಟನ್‌ಪೇಟೆ ಹಾಗೂ ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದು ಕೊಲೆ ಪ್ರಕರಣಗಳು ದಾಖಲಾಗಿವೆ.

ಎಂಬಿಎ ವಿದ್ಯಾರ್ಥಿ ಅಮಿತ್‌ (22) ಹೊಸ ವರ್ಷದ ಸಂಭ್ರಮ ಆಚರಿಸಲು ಸ್ನೇಹಿತರ ಜತೆ ಜೆ.ಪಿ. ನಗರದ ಮುಖ್ಯ ರಸ್ತೆಗೆ ಹೋಗಿದ್ದರು. ರಾತ್ರಿ 12.30 ಗಂಟೆಯ ಸುಮಾರಿಗೆ ಮನೆಗೆ ಮರಳುವಾಗ, ಸ್ನೇಹಿತರ ನಡುವೆ ಜಗಳ ಶುರುವಾಗಿತ್ತು. ಅದೇ ವೇಳೆ ಒಬ್ಬಾತ, ಅಮಿತ್‌ನ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದ.

ADVERTISEMENT

‘ಶಾಕಾಂಬರಿ ನಗರದ ನಿವಾಸಿಯಾಗಿದ್ದ ಅಮಿತ್‌, ಆಚರಣೆ ಮುಗಿಸಿಕೊಂಡು ಮನೆಗೆ ಹೊರಟಿದ್ದರು. ಅರ್ಧ ದಾರಿಯವರೆಗೆ ಸಾಗಿ ಪುನಃ ಸ್ನೇಹಿತರ ಜತೆ ವಾಪಸ್ ಜೆ.ಪಿ. ನಗರಕ್ಕೆ ಬಂದಿದ್ದರು. ಅದೇ ವೇಳೆ ಈ ಕೃತ್ಯ ನಡೆದಿದೆ. ಗಲಾಟೆಗೆ ನಿಖರ ಕಾರಣ ಗೊತ್ತಾಗಿಲ್ಲ’ ಎಂದು ಜೆ.ಪಿ. ನಗರ ಪೊಲೀಸರು ತಿಳಿಸಿದರು.

ಜಗಳ ಬಿಡಿಸಲು ಹೋಗಿದ್ದಕ್ಕೆ ಕೊಲೆ: ಜೆ.ಪಿ. ನಗರದ ಬಾಲಾಜಿ ವೈನ್ಸ್‌ ಎದುರು ಕ್ಯಾಬ್‌ ಚಾಲಕ ಹೇಮಂತ್‌ ಕುಮಾರ್ (27) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

‘ಸ್ಥಳೀಯ ನಿವಾಸಿ ಹೇಮಂತ್‌, ಸಹೋದರ ಹಾಗೂ ಆತನ ಸ್ನೇಹಿತನ ಜತೆಗೆ ಪಾರ್ಟಿಗೆಂದು ವೈನ್ಸ್‌ಗೆ ಹೋಗಿದ್ದರು. ಕಂಠಪೂರ್ತಿ ಕುಡಿದಿದ್ದ ಸಹೋದರ ಹಾಗೂ ಆತನ ಸ್ನೇಹಿತನ ನಡುವೆ ಜಗಳ ಶುರುವಾಗಿತ್ತು. ಜಗಳ ಬಿಡಿಸಲು ಹೋಗಿದ್ದ ಹೇಮಂತ್, ಇಬ್ಬರಿಗೂ ಬುದ್ಧಿವಾದ ಹೇಳಿದ್ದರು.

ಈ ವೇಳೆ ಅವರನ್ನು ವೈನ್ಸ್‌ನಿಂದ ಹೊರಗೆ ಖುಲ್ಲಾ ಜಾಗಕ್ಕೆ ಕರೆದುಕೊಂಡು ಬಂದ ಸ್ನೇಹಿತ ಚಾಕುವಿನಿಂದ ಹೊಟ್ಟೆಗೆ ಚುಚ್ಚಿದ್ದ’ ಎಂದು ಜೆ.ಪಿ. ನಗರ ಪೊಲೀಸರು ತಿಳಿಸಿದರು.

‘ಕೊಲೆ ಪ್ರಕರಣ ಸಂಬಂಧ ಅಮೃತ್‌ ಎಂಬಾತನನ್ನು ಬಂಧಿಸಿದ್ದೇವೆ. ಘಟನೆ ಬಗ್ಗೆ ಸಹೋದರ ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ಕೊಲೆ- ಏಳು ಮಂದಿ ಬಂಧನ: ಬೆಳ್ಳಂದೂರು ಬಳಿಯ ಕೊಳೆಗೇರಿಯಲ್ಲಿ ಸಂಭ್ರಮಾಚರಣೆ ವೇಳೆ ಎರಡು ಗುಂಪಿನ ನಡುವೆ ನಡೆದ ಗಲಾಟೆಯಲ್ಲಿ ಶಿವರಾಮ್‌ (30) ಎಂಬುವರನ್ನು ಕೊಲೆ ಮಾಡಲಾಗಿದೆ.

ಕೇಕ್‌ ಕತ್ತರಿಸುವ ವೇಳೆ ಕೆಲವರು ತಮಿಳು ಭಾಷೆಯಲ್ಲಿ ಶುಭಾಶಯ ಕೋರಿದ್ದರು. ಅದಕ್ಕೆ ತಕರಾರು ತೆಗೆದಿದ್ದ ಇನ್ನೊಂದು ಗುಂಪು, ಕನ್ನಡದಲ್ಲಿ ಶುಭಾ
ಶಯ ಕೋರುವಂತೆ ಹೇಳಿತ್ತು. ಆಗ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿತ್ತು.

‘ಕುಡಿದ ಅಮಲಿನಲ್ಲಿ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ಶಿವರಾಮ್‌ ಮೃತಪಟ್ಟ ಬಳಿಕ ಆರೋಪಿಗಳು ಪರಾರಿಯಾಗಿದ್ದರು. ಏಳು ಮಂದಿಯನ್ನು ಬಂಧಿಸಿದ್ದೇವೆ. ಕೆಲವರು ತಲೆಮರೆಸಿಕೊಂಡಿದ್ದಾರೆ’ ಎಂದು ಬೆಳ್ಳಂದೂರು ಪೊಲೀಸರು ತಿಳಿಸಿದರು.

ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ: ಕಾಟನ್‌ಪೇಟೆಯ ಫ್ಲವರ್‌ ಗಾರ್ಡನ್‌ ಪ್ರದೇಶದಲ್ಲಿ ವಿನುತ್‌ (27) ಎಂಬುವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ.

ವರ್ಷಾಚರಣೆಗೆಂದು ಸ್ನೇಹಿತರಿದ್ದ ಜಾಗಕ್ಕೆ ಹೊರಟಿದ್ದ ವೇಳೆ ಅವರನ್ನು ಅಡ್ಡಗಟ್ಟಿದ್ದ ನಾಲ್ವರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

‘ವಿನುತ್‌ ರಕ್ತದ ಮಡುವಿನಲ್ಲಿ ಬೀಳುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದರು. ಗಾಯಾಳುವನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು’ ಎಂದು ಕಾಟನ್‌ಪೇಟೆ ಪೊಲೀಸರು ತಿಳಿಸಿದರು.

‘ಪರಿಚಯಸ್ಥರೇ ಹಳೇ ವೈಷಮ್ಯದಿಂದಾಗಿ ಈ ಕೊಲೆ ಮಾಡಿರುವ ಅನುಮಾನವಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದರು.

‘ಪಾನಮತ್ತ ಮಹಿಳೆಯರನ್ನು ಮನೆಗೆ ತಲುಪಿಸಿದ್ದೇವೆ’

ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪಾನಮತ್ತರಾಗಿದ್ದ ಕೆಲವು ಮಹಿಳೆಯರನ್ನು ಅವರ ಮನೆಗೆ ತಲುಪಿಸುವ ಕೆಲಸವನ್ನೂ ಪೊಲೀಸರು ಮಾಡಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

‘ಭಾನುವಾರ ಬೆಂಗಳೂರಿನಲ್ಲಿ ನಡೆದ ಆಚರಣೆಯಲ್ಲಿ ಯುವತಿಯರ ಜತೆ ಕೆಲವರು ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡಿದ್ದಾರಲ್ಲ’ ಎಂದು ಮಾಧ್ಯಮ ಪ್ರತಿನಿಧಿಗಳುಪ್ರಶ್ನಿಸಿದಾಗ, ‘ಒಂದು ಲಕ್ಷ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪೊಲೀಸರು ಚೆನ್ನಾಗಿ ಕೆಲಸ ಮಾಡಿದ್ದಾರೆ. ಕಿರುಕುಳ ನೀಡಿದ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಮಿತಿಮೀರಿ ಮದ್ಯಪಾನ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು. ಹೊಸ ವರ್ಷದ ವೇಳೆ ಜವಾಬ್ದಾರಿಯಿಂದ ವರ್ತಿಸುವುದನ್ನು ಜನರೂ ಕಲಿಯಬೇಕು ಎಂದು ಅವರು ಕಿವಿಮಾತು ಹೇಳಿದರು.

‘ಕಾನೂನಿಗಿಂತ ಶೋಭಾ ದೊಡ್ಡವರಾ?‘

ಸಂಸದೆ ಶೋಭಾ ಕರಂದ್ಲಾಜೆ ಕಾನೂನಿಗಿಂತ ದೊಡ್ಡವರಾ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.

‘ಮುಖ್ಯಮಂತ್ರಿಗೆ ತಾಕತ್ತಿದ್ದರೆ ನನ್ನನ್ನು ಬಂಧಿಸಲಿ’ ಎಂಬ ಶೋಭಾ ಸವಾಲಿಗೆ ಪ್ರತಿಕ್ರಿಯಿಸಿದ ಅವರು, ‘ನಾನು ಅಥವಾ ಮುಖ್ಯಮಂತ್ರಿ ಹೋಗಿ ಅವರನ್ನು ಬಂಧಿಸಲು ಆಗುತ್ತದೆಯೇ? ಕಾನೂನು ಪ್ರಕಾರ ಪೊಲೀಸರು ಕ್ರಮ ಜರುಗಿಸುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.