ADVERTISEMENT

74 ಕಡೆಗಳಲ್ಲಿ ಇ–ಶೌಚಾಲಯ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 19:30 IST
Last Updated 7 ಜನವರಿ 2018, 19:30 IST

ಬೆಂಗಳೂರು: ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ನಡೆಸುತ್ತಿರುವ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯ ರ‍್ಯಾಂಕಿಂಗ್‌ನಲ್ಲಿ ಉತ್ತಮ ಸ್ಥಾನ ಪಡೆಯುವ ಉದ್ದೇಶದಿಂದ ನಗರದ 74 ಕಡೆಗಳಲ್ಲಿ ಇ–ಶೌಚಾಲಯಗಳನ್ನು ಅಳವಡಿಸಲು ಬಿಬಿಎಂಪಿ ಮುಂದಾಗಿದೆ.

ಈ ಸಮೀಕ್ಷೆ ಆರಂಭವಾದ ಬಳಿಕ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು ಪಾಲಿಕೆಯು ಸಿದ್ಧತೆ ನಡೆಸಿದೆ. ₹5.92 ಕೋಟಿ ವೆಚ್ಚದಲ್ಲಿ ಇ-ಶೌಚಾಲಯಗಳನ್ನು ಅಳವಡಿಸಲಾಗುತ್ತದೆ. ಇವುಗಳ ಪೂರೈಕೆಗೆ ಟೆಂಡರ್‌ ಆಹ್ವಾನಿಸಿದೆ. ಈ ಶೌಚಾಲಯಗಳಲ್ಲಿ ಸ್ವಯಂಚಾಲಿತ ಬೆಳಕಿನ ವ್ಯವಸ್ಥೆ ಹಾಗೂ ಫ್ಲಷ್‌ ವ್ಯವಸ್ಥೆ ಇರಲಿದೆ. ಗುತ್ತಿಗೆ ಪಡೆಯುವ ಸಂಸ್ಥೆಯು ಇವುಗಳನ್ನು 2 ವರ್ಷಗಳವರೆಗೆ ನಿರ್ವಹಣೆ ಮಾಡಬೇಕು. ಸಾರ್ವಜನಿಕರು ₹5 ಶುಲ್ಕ ಪಾವತಿಸಿ ಶೌಚಾಲಯವನ್ನು ಬಳಸಬಹುದು.

ನಗರದಲ್ಲಿ ಸ್ಥಗಿತಗೊಂಡಿರುವ ಕಸ ಸಂಸ್ಕರಣಾ ಘಟಕಗಳನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವುದನ್ನು ನಿಯಂತ್ರಿಸುವ ಉದ್ದೇಶದಿಂದ ಕಸ ಸಂಗ್ರಹ ಕಾಂಪ್ಯಾಕ್ಟರ್‌ಗಳನ್ನು ಖರೀದಿಸಲಾಗುತ್ತದೆ. ವಾಣಿಜ್ಯ ಪ್ರದೇಶಗಳಲ್ಲಿರುವ ಪ್ರತಿಯೊಂದು ಮಳಿಗೆಯ ಬಳಿ ಎರಡು ಕಸದ ಬುಟ್ಟಿಗಳನ್ನು ಇಡಬೇಕು ಎಂದು ಪಾಲಿಕೆಯು ಸುತ್ತೋಲೆ ಹೊರಡಿಸಿದೆ.

ADVERTISEMENT

ನಗರದಲ್ಲಿ ಶೌಚಾಲಯಗಳ ಕೊರತೆ ಇದೆ. ಈ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ ಇ–ಶೌಚಾಲಯಗಳನ್ನು ಅಳವಡಿಸಲಾಗುತ್ತಿದೆ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.