ADVERTISEMENT

ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 20:40 IST
Last Updated 18 ಜನವರಿ 2018, 20:40 IST

ಬೆಂಗಳೂರು: ‘ಬಗರ್ ಹುಕುಂ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು’ ಎಂದು ಕೋರಿ ಬಿಜೆಪಿ ಮುಖಂಡ ಆರ್.ಅಶೋಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯಿಂದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹಿಂದೆ ಸರಿದಿದ್ದಾರೆ.

‘ನಾನು ಕಾನೂನು ಇಲಾಖೆ ಕಾರ್ಯದರ್ಶಿಯಾಗಿದ್ದ ವೇಳೆ ಇಂತಹುದೇ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರಕ್ಕೆ ಕಾನೂನು ಅಭಿಪ್ರಾಯ ನೀಡಿದ್ದೆ. ಆದ್ದರಿಂದ ಈ ಅರ್ಜಿ ವಿಚಾರಣೆ ನಡೆಸುವುದು ಸೂಕ್ತವಲ್ಲ’ ಎಂದು ಫಣೀಂದ್ರ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಕ್ಕೆ ಕಾರಣ ನೀಡಿದರು.

ಅರ್ಜಿಯನ್ನು ಮತ್ತೊಂದು ಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸುವಂತೆ ರಿಜಿಸ್ಟ್ರಾರ್‌ ಅವರಿಗೆ ಸೂಚಿಸಿದರು.

ADVERTISEMENT

ಪ್ರಕರಣವೇನು?: ‘ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ಅಕ್ರಮ ಭೂಮಂಜೂರಾತಿ ಮಾಡಲಾಗಿದೆ’ ಎಂದು ಎ.ಆನಂದ ಎಂಬುವರು ಆರ್. ಅಶೋಕ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿದ್ದಾರೆ. ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ.

‘1998ರಿಂದ 2006ರ ಅವಧಿಯಲ್ಲಿ ಬೆಂಗಳೂರು–ದಕ್ಷಿಣ ತಾಲ್ಲೂಕಿನ ಭೂ–ಸಕ್ರಮೀಕರಣ ಸಮಿತಿ ಅಧ್ಯಕ್ಷರು, ಉತ್ತರಹಳ್ಳಿ ಕ್ಷೇತ್ರದ ಅಂದಿನ ಶಾಸಕ ಆರ್. ಅಶೋಕ್, ಇತರ ಸರ್ಕಾರಿ ನೌಕರರು ಮತ್ತು ಅಕ್ರಮ ಫಲಾನುಭವಿಗಳು’ ಎಂಬುದು ದೂರುದಾರರ ಆರೋಪ.

‘ನಾನು ಯಾವುದೇ ತಪ್ಪು ಮಾಡಿಲ್ಲ. ಇದು ರಾಜಕೀಯ ದುರುದ್ದೇಶದಿಂದ ಕೂಡಿದ ದೂರಾಗಿದೆ’ ಎಂದು ಅಶೋಕ್‌ ರಿಟ್‌ ಅರ್ಜಿಯಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.