ADVERTISEMENT

ಚಾರ್ಮಾಡಿ ಘಾಟಿಯಲ್ಲಿ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2018, 19:30 IST
Last Updated 20 ಜನವರಿ 2018, 19:30 IST
ಶಿರಾಡಿ ಘಾಟಿ ರಸ್ತೆ ಆರಂಭವಾಗುವ ಗುಂಡ್ಯದಲ್ಲಿ ಹೆದ್ದಾರಿ ಮುಚ್ಚಲಾಗಿದೆ
ಶಿರಾಡಿ ಘಾಟಿ ರಸ್ತೆ ಆರಂಭವಾಗುವ ಗುಂಡ್ಯದಲ್ಲಿ ಹೆದ್ದಾರಿ ಮುಚ್ಚಲಾಗಿದೆ   

ಮೂಡಿಗೆರೆ: ಕರಾವಳಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟಿ ಬಂದ್‌ ಮಾಡಿದ ಮೊದಲ ದಿನವೇ ಚಾರ್ಮಾಡಿ ಘಾಟಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಶನಿವಾರ ಅನೇಕ ಕಡೆ ವಾಹನ ಸವಾರರು ತೊಂದರೆ ಅನುಭವಿಸಬೇಕಾಯಿತು.

ಶನಿವಾರ ಮುಂಜಾನೆ ಕಡಿಮೆಯಿದ್ದ ವಾಹನ ದಟ್ಟಣೆ ಮಧ್ಯಾಹ್ನ ಹೆಚ್ಚಾಗಿದ್ದು, ವಾರಾಂತ್ಯವಾಗಿದ್ದರಿಂದ ರಾತ್ರಿಯ ವೇಳೆಗೆ ದಟ್ಟಣೆ ಇನ್ನಷ್ಟು ಹೆಚ್ಚಳವಾಗಿ ರಾಷ್ಟ್ರೀಯ ಹೆದ್ದಾರಿ 234 ರ ಚಾರ್ಮಾಡಿ ಘಾಟಿಯ ಅನೇಕ ಕಡೆ ಸಂಚಾರ ಅಸ್ತವ್ಯಸ್ತವಾಗಿತ್ತು ಎಂದು ಪ್ರಯಾಣಿಕರು ತಿಳಿಸಿದರು.

ಅಣ್ಣಪ್ಪಸ್ವಾಮಿ ದೇವಾಲಯ, 11ನೇ ಹಿಮ್ಮುರಿ ತಿರುವುಗಳಲ್ಲಿ ಪದೇ ಪದೇ ಸಂಚಾರ ದಟ್ಟಣೆ ಆಗುತ್ತಿದ್ದುದರಿಂದ ಪ್ರಯಾಣಿಕರೇ ವಾಹನ ಸಂಚಾರವನ್ನು ಸರಿಪಡಿಸಿಕೊಂಡು ಸಾಗುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ADVERTISEMENT

ಕೊಟ್ಟಿಗೆಹಾರ ಪಟ್ಟಣದಲ್ಲಿಯೂ ಸಂಜೆ ವೇಳೆಗೆ ಹೆದ್ದಾರಿಯುದ್ದಕ್ಕೂ ಬಿಡುವಿಲ್ಲದಂತೆ ವಾಹನಗಳು ಸಾಗುತ್ತಿದ್ದು, ವಾಹನಗಳ ನಿಲುಗಡೆಗೆ ಜಾಗವಿಲ್ಲದೇ, ವಾಹನ ಸವಾರರು ಪರದಾಡುವಂತಾಗಿತ್ತು.

ಉಪ್ಪಿನಂಗಡಿ ವರದಿ:  ಶಿರಾಡಿ ಘಾಟ್ ರಸ್ತೆಯ 2ನೇ ಹಂತದ ಕಾಂಕ್ರೀಟ್ ರಸ್ತೆ ಕಾಮಗಾರಿ ಶನಿವಾರದಿಂದ ಆರಂಭವಾಗಿದೆ. ಹೀಗಾಗಿ ಶನಿವಾರ ಬೆಳಿಗ್ಗೆಯೇ ಶಿರಾಡಿ ಘಾಟ್ ರಸ್ತೆಯಲ್ಲಿ ಗೇಟ್‌ ಅಳವಡಿಸಿ ವಾಹನ ಸಂಚಾರವನ್ನು ನಿಷೇಧಿಸಲಾಯಿತು.

ಗುಂಡ್ಯದ ಜಂಕ್ಷನ್‍ನಲ್ಲೇ ರಸ್ತೆ ಬಂದ್‌ ಮಾಡಲಾಗಿದ್ದು, ಯಾವುದೇ ವಾಹನವೂ ಶಿರಾಡಿ ಘಾಟ್‌ ರಸ್ತೆಯಲ್ಲಿ ಇನ್ನು ಸಂಚರಿಸುವಂತಿಲ್ಲ. ಹೀಗಾಗಿ ಎಲ್ಲ ಲಘು ಮತ್ತು ಘನ ವಾಹನಗಳು ಬದಲಿ ಮಾರ್ಗದಲ್ಲಿ ಬೆಂಗಳೂರಿನತ್ತ ಸಂಚರಿಸಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.