ADVERTISEMENT

₹ 3.45 ಲಕ್ಷ ದೋಚಿದ ವೆಬ್‌ಸೈಟ್ ಗೆಳತಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 20:28 IST
Last Updated 24 ಜನವರಿ 2018, 20:28 IST

ಬೆಂಗಳೂರು: ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಪರಿಚಯವಾದ ಯುವತಿಯೊಬ್ಬರು ಮದುವೆ ಆಗುವುದಾಗಿ ನಂಬಿಸಿ ಬ್ಯಾಂಕ್ ಉದ್ಯೋಗಿ ಧನಂಜಯ್ ಭಟ್ ಎಂಬುವರಿಂದ ₹ 3.45 ಲಕ್ಷ ಸುಲಿಗೆ ಮಾಡಿದ್ದಾರೆ.

ಈ ಸಂಬಂಧ ಗಿರಿನಗರ ಠಾಣೆಗೆ ಧನಂಜಯ್ ದೂರು ಕೊಟ್ಟಿದ್ದು, ಪೊಲೀಸರು ವಂಚನೆ (ಐಪಿಸಿ 420) ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಶಿಲ್ಪಾ ಬಂಧನಕ್ಕೆ ಬಲೆ ಬೀಸಿದ್ದಾರೆ.

‘ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ‘ಬ್ರಾಹ್ಮಿಣಿ ಮ್ಯಾಟ್ರಿಮೋನಿಯಲ್’ ವೆಬ್‌ಸೈಟ್‌ನಲ್ಲಿ ನನ್ನ ಫೋಟೊ ಹಾಗೂ ಸ್ವ–ವಿವರ ಹಾಕಿದ್ದೆ. ಅದನ್ನು ನೋಡಿ ಕರೆ ಮಾಡಿದ ಶಿಲ್ಪಾ, ಮದುವೆ ಆಗುವುದಾಗಿ ಹೇಳಿದ್ದರು. ಅವರ ಫೋಟೊ, ಸ್ವ–ವಿವರಗಳನ್ನು ನೋಡಿ ನಾನೂ ಮದುವೆಗೆ ಒಪ್ಪಿಕೊಂಡಿದ್ದೆ. ನಂತರ ಇಬ್ಬರೂ ಮೊಬೈಲ್‌ನಲ್ಲಿ ಸಂಪರ್ಕದಲ್ಲಿದ್ದೆವು’ ಎಂದು ಧನಂಜಯ್ ದೂರಿನಲ್ಲಿ ಹೇಳಿದ್ದಾರೆ.

ADVERTISEMENT

‘ಈ ನಡುವೆ ಕರೆ ಮಾಡಿದ್ದ ಅವರು, ‘ಕಾರು ಅಪಘಾತದಲ್ಲಿ ಅಣ್ಣನ ಕಾಲಿಗೆ ಪೆಟ್ಟಾಗಿದೆ. ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಿಸಬೇಕು. ನನಗೆ ಹಣಕಾಸಿನ ನೆರವು ನೀಡಿ. ಮದುವೆಯಾದ ಬಳಿಕ ಅಣ್ಣನ ಕಡೆಯಿಂದಲೇ ಹಣ ವಾಪಸ್ ಕೊಡಿಸುತ್ತೇನೆ’ ಎಂದಿದ್ದರು. ಅಂತೆಯೇ ಕೆನರಾ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ₹ 3.5 ಲಕ್ಷ ಜಮೆ ಮಾಡಿದ್ದೆ.’

‘ಹಣ ಹಾಕಿದ ಸ್ವಲ್ಪ ಸಮಯದಲ್ಲೇ ಅವರು ಮೊಬೈಲ್ ಸ್ವಿಚ್ಡ್‌ ಆಫ್ ಮಾಡಿಕೊಂಡಿದ್ದಾರೆ. ಒಂದೂವರೆ ತಿಂಗಳಿನಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರನ್ನು ಪತ್ತೆ ಮಾಡಿ ಹಣ ವಾಪಸ್ ಕೊಡಿಸಿ’ ಎಂದು ಧನಂಜಯ್ ದೂರಿನಲ್ಲಿ ಕೋರಿದ್ದಾರೆ. ಮೊಬೈಲ್ ಕರೆಗಳ ವಿವರ (ಸಿಡಿಆರ್) ಹಾಗೂ ಬ್ಯಾಂಕ್ ಖಾತೆಯ ಮಾಹಿತಿ ಆಧರಿಸಿ ಶಿಲ್ಪಾ ಪತ್ತೆ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಗಿರಿನಗರ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.