ADVERTISEMENT

‘ದುಡ್ಡು ಮಾಡಲು ಬಿಬಿಎಂಪಿ ಹುನ್ನಾರ’

‘ಸ್ವಾತಂತ್ರ್ಯ ಉದ್ಯಾನ ಉಳಿಸಿ ಹೋರಾಟ ಸಮಿತಿ’ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2018, 19:36 IST
Last Updated 27 ಜನವರಿ 2018, 19:36 IST
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ‘ಸ್ವಾತಂತ್ರ್ಯ ಉದ್ಯಾನ ಉಳಿಸಿ ಹೋರಾಟ ಸಮಿತಿ’ ಸದಸ್ಯರು – ಪ್ರಜಾವಾಣಿ ‌‌ಚಿತ್ರ
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ‘ಸ್ವಾತಂತ್ರ್ಯ ಉದ್ಯಾನ ಉಳಿಸಿ ಹೋರಾಟ ಸಮಿತಿ’ ಸದಸ್ಯರು – ಪ್ರಜಾವಾಣಿ ‌‌ಚಿತ್ರ   

ಬೆಂಗಳೂರು: ‘ಸ್ವಾತಂತ್ರ್ಯ ಉದ್ಯಾನದ ಜಾಗವನ್ನು ಖಾಸಗಿಯವರಿಗೆ ಕೊಟ್ಟು ದುಡ್ಡು ಮಾಡಲು ಬಿಬಿಎಂಪಿ ಹಾಗೂ ಪ್ರವಾಸೋದ್ಯಮ ಇಲಾಖೆಯು ಹುನ್ನಾರ ನಡೆಸಿದೆ’ ಎಂದು ಸಿಪಿಎಂ ಮುಖಂಡ ಜಿ.ವಿ.ಶ್ರೀರಾಮ ರೆಡ್ಡಿ ಆರೋಪಿಸಿದರು.

‘ಸ್ವಾತಂತ್ರ್ಯ ಉದ್ಯಾನ ಉಳಿಸಿ ಹೋರಾಟ ಸಮಿತಿ’ ವತಿಯಿಂದ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಈ ಉದ್ಯಾನವು ಹೋರಾಟದ ಸ್ಥಳವಾಗಿದ್ದು, ಸ್ವಾತಂತ್ರ್ಯ ದಿನದಿಂದಲೂ ಇಲ್ಲಿ ಹೋರಾಟಗಳು ನಡೆಯುತ್ತಿವೆ. ಉದ್ಯಾನದ ಜಾಗವನ್ನು ಖಾಸಗಿಯವರಿಗೆ ನೀಡಬಾರದು, ಸಾರ್ವಜನಿಕ ಸ್ಥಳವಾಗಿ ಮುಂದುವರಿಸಬೇಕೆಂದು ಜೆ.ಎಚ್‌.ಪಟೇಲ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ತೀರ್ಮಾನ ಕೈಗೊಳ್ಳಲಾಗಿದೆ’ ಎಂದರು.

ADVERTISEMENT

‘ಆ ತೀರ್ಮಾನಕ್ಕೆ ವಿರುದ್ಧವಾಗಿ ಬಿಬಿಎಂಪಿಗೆ ಪತ್ರ ಬರೆದಿರುವ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಜಾಗವನ್ನು ಇಲಾಖೆಗೆ ನೀಡುವಂತೆ ಕೋರಿದ್ದಾರೆ. ಬಿಬಿಎಂಪಿಯಲ್ಲಿ ಇದೇ 29ರಂದು ನಡೆಯುವ ಕೌನ್ಸಿಲ್‌ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ. ಯಾವುದೇ ಕಾರಣಕ್ಕೂ ಜಾಗವನ್ನು ಖಾಸಗಿಯವರಿಗೆ ನೀಡಬಾರದು ಎಂದು ಬಿಬಿಎಂಪಿಯನ್ನು ಒತ್ತಾಯಿಸುತ್ತೇನೆ’ ಎಂದರು.

ಪ್ರತಿಭಟನೆಗೆ ಪರ್ಯಾಯ ಜಾಗವಿಲ್ಲ: ‘ಸಮಸ್ಯೆಗಳು ಇಂದು ಸುಲಭವಾಗಿ ಬಗೆಹರಿಯುತ್ತಿಲ್ಲ. ಪ್ರತಿಭಟನೆಗಳು ಅನಿವಾರ್ಯವೇ ಆಗಿವೆ. ಪ್ರತಿಭಟನೆ ನಡೆಸಲು ನಗರದಲ್ಲಿ ಇರುವುದು ಸ್ವಾತಂತ್ರ್ಯ ಉದ್ಯಾನ ಮಾತ್ರ. ಅದನ್ನು ಖಾಸಗಿಯವರಿಗೆ ನೀಡಿದರೆ, ಪ್ರತಿಭಟನೆ ನಡೆಸುವುದು ಕಷ್ಟವಾಗಲಿದೆ’ ಎಂದರು.

‘ಪ್ರತಿಭಟನೆಗೆ ನಗರದಲ್ಲಿ ಪರ್ಯಾಯ ಜಾಗವಿಲ್ಲ. ನಗರದಿಂದ 30 ಕಿ.ಮೀ ಹೊರಗೆ ಹೋಗಿ ಪ್ರತಿಭಟನೆ ನಡೆಸಲು ಆಗದು. ಹೀಗಾಗಿ ಉದ್ಯಾನ ಜಾಗವನ್ನು ಪ್ರತಿಭಟನೆಗೆ ಮೀಸಲಿಡಬೇಕು. ಖಾಸಗಿಯವರಿಗೆ ನೀಡಿದರೆ ಗಂಭೀರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದರು.

ಪ್ರತಿಭಟನೆ ಹತ್ತಿಕ್ಕಲು ಯತ್ನ: ‘ಉದ್ಯಾನದ ಜಾಗವನ್ನು ಖಾಸಗಿಯವರಿಗೆ ನೀಡಿ ಪ್ರತಿಭಟನೆಗಳನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಯತ್ನಿಸುತ್ತಿದೆ’ ಎಂದು ಸಿಐಟಿಯು ಅಧ್ಯಕ್ಷೆ ವರಲಕ್ಷ್ಮಿ ದೂರಿದರು.

‘ಅನ್ಯಾಯಕ್ಕೆ ಒಳಪಟ್ಟ ಶೋಷಿತ ಸಮುದಾಯದ ಲಕ್ಷಾಂತರ ಮಂದಿಯು ಉದ್ಯಾನಕ್ಕೆ ಬಂದು ಪ್ರತಿಭಟನೆ ಮಾಡುತ್ತಾರೆ. ಈಗ ಉದ್ಯಾನದ ಜಾಗವನ್ನೇ ಖಾಸಗಿಯವರಿಗೆ ನೀಡಿದರೆ ಅವರೆಲ್ಲ ಎಲ್ಲಿಗೆ ಹೋಗಬೇಕು’ ಎಂದು ಪ್ರಶ್ನಿಸಿದರು.

*
ಸಂಬಂಧಿಕರೇ ಆದ ಉದ್ಯಮಿಯೊಬ್ಬರಿಗೆ ಜಾಗವನ್ನು ಕೊಡಿಸಲು ಸಚಿವ ಪ್ರಿಯಾಂಕ್ ಖರ್ಗೆ ಈ ರೀತಿ ಮಾಡುತ್ತಿದ್ದಾರೆ. ಅವರದ್ದು ಜನವಿರೋಧಿ ನಿಲುವು.
–ಶ್ರೀರಾಮ್‌ ರೆಡ್ಡಿ, ಸಿಪಿಎಂ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.