ADVERTISEMENT

ಬಿಬಿಎಂಪಿ ಕೌನ್ಸಿಲ್‌ ಸಭೆ: ಆನ್‌ಲೈನ್‌ನಲ್ಲೇ ಖಾತೆ, ನಕ್ಷೆ ಮಂಜೂರಾತಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 19:40 IST
Last Updated 30 ಜನವರಿ 2018, 19:40 IST
ಸಭೆಯಲ್ಲಿ ಎನ್‌.ಮಂಜುನಾಥ ಪ್ರಸಾದ್ ಮಾತನಾಡಿದರು. ಆರ್‌.ಸಂಪತ್‌ ರಾಜ್‌ ಇದ್ದಾರೆ –ಪ್ರಜಾವಾಣಿ ಚಿತ್ರ
ಸಭೆಯಲ್ಲಿ ಎನ್‌.ಮಂಜುನಾಥ ಪ್ರಸಾದ್ ಮಾತನಾಡಿದರು. ಆರ್‌.ಸಂಪತ್‌ ರಾಜ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಖಾತೆಗೆ ಸಂಬಂಧಿಸಿದ ಎಲ್ಲ ಸೇವೆಗಳು ಹಾಗೂ ಕಟ್ಟಡ ನಕ್ಷೆ ಮಂಜೂರಾತಿಯನ್ನು ಆನ್‌ಲೈನ್‌ ಮೂಲಕ ನೀಡುವ ವ್ಯವಸ್ಥೆಯನ್ನು ಫೆಬ್ರುವರಿ ಮೊದಲ ವಾರದಿಂದ ಜಾರಿಗೊಳಿಸಲಾಗುತ್ತದೆ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಮಂಗಳವಾರ ನಡೆದ ಪಾಲಿಕೆಯ ಸಭೆಯಲ್ಲಿ ಅವರು ಮಾತನಾಡಿದರು.

ಖಾತೆ ಹಾಗೂ ಕಟ್ಟಡದ ನಕ್ಷೆಗೆ ಮಂಜೂರಾತಿ ಪಡೆಯಲು ಸಾರ್ವಜನಿಕರು ಪಾಲಿಕೆಯ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಇದೆ. ಇದರಿಂದ ಪಾಲಿಕೆಗೆ ಕೆಟ್ಟ ಹೆಸರು ಬರುತ್ತಿದೆ. ಸಾರ್ವಜನಿಕರ ಅಲೆದಾಟವನ್ನು ತಪ್ಪಿಸುವ ಉದ್ದೇಶದಿಂದ ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ ಎಂದರು.

ADVERTISEMENT

ಇ–ಆಡಳಿತ ಇಲಾಖೆಯ ಅಧಿಕಾರಿಗಳು ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರ ಜತೆ ಚರ್ಚಿಸಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಖಾತಾ ನೋಂದಣಿ, ವರ್ಗಾವಣೆ ಸೇರಿದಂತೆ ಖಾತೆಗೆ ಸಂಬಂಧಿಸಿದ ಯಾವುದೇ ಸೇವೆಗೆ ಪಾಲಿಕೆಯ ಕಚೇರಿಗಳಿಗೆ ತಿರುಗಾಡುವ ಅಗತ್ಯವಿಲ್ಲ. ಮನೆಯಲ್ಲೇ ಖಾತಾ ಪಡೆಯಬಹುದು ಎಂದು ಹೇಳಿದರು.

ಖಾತಾ ನೋಂದಣಿ ಅಥವಾ ಬದಲಾವಣೆಗೆ ಸಂಬಂಧಿಸಿದಂತೆ ಅಗತ್ಯವಿರುವ ದಾಖಲೆಗಳನ್ನು ತಂತ್ರಾಂಶದ ಮೂಲಕ ಅಪ್‌ಲೋಡ್‌ ಮಾಡಬೇಕು. ಆ ದಾಖಲೆಗಳನ್ನು ಪಾಲಿಕೆಯ ಅಧಿಕಾರಿಗಳು ಡೌನ್‌ಲೋಡ್‌ ಮಾಡಿಕೊಂಡು ಪರಿಶೀಲಿಸುತ್ತಾರೆ. ಸಲ್ಲಿಸಿರುವ ದಾಖಲೆಗಳು ಸರಿಯಾಗಿದ್ದರೆ ಕೂಡಲೇ ಖಾತಾ ನೀಡಲಾಗುತ್ತದೆ. ಅದನ್ನು ಮಾಲೀಕರು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಈ ಖಾತೆಗೆ ಅಧಿಕಾರಿಯ ಸಹಿ ಬೇಕಿರುವುದಿಲ್ಲ. ದಾಖಲೆಗಳು ತಪ್ಪಾಗಿದ್ದರೆ ಈ ಸಂಬಂಧ ಮಾಲೀಕರಿಗೆ ಎಸ್‌ಎಂಎಸ್‌ ಹಾಗೂ ಇ–ಮೇಲ್‌ ಮೂಲಕ ಸೂಚನೆ ನೀಡಲಾಗುತ್ತದೆ ಎಂದು ವಿವರಿಸಿದರು.

ಈ ಬಗ್ಗೆ ಕಂದಾಯ ಅಧಿಕಾರಿಗಳಿಗೆ ಮುಂದಿನ ವಾರದಿಂದ ತರಬೇತಿ ನೀಡಲಾಗುತ್ತದೆ. ಇದೇ ರೀತಿಯಲ್ಲೇ ಕಟ್ಟಡದ ನಕ್ಷೆ ಮಂಜೂರಾತಿಯನ್ನೂ ನೀಡಲಾಗುತ್ತದೆ ಎಂದು ತಿಳಿಸಿದರು.

ಮಧ್ಯ ಪ್ರವೇಶಿಸಿದ ಬಿಜೆಪಿಯ ಡಾ.ರಾಜು, ‘ಆಯುಕ್ತರು ಹೇಳುತ್ತಿರುವುದು ಬರೀ ಶಾಸ್ತ್ರ, ಅದು ವಾಸ್ತವ ಅಲ್ಲ. ಯಾರು ಪ್ರಾಮಾಣಿಕರಿದ್ದಾರೋ ಅವರಿಗೆ ಖಾತಾ ಸಿಗುವುದಿಲ್ಲ’ ಎಂದು ದೂರಿದರು.

ಪಾಲಿಕೆ ಆಸ್ತಿ ಸಂರಕ್ಷಣೆಗೆ ಒತ್ತಾಯ: ಪಾಲಿಕೆಗೆ ಸೇರಿದ ಆಸ್ತಿಗಳನ್ನು ಸಂರಕ್ಷಿಸುವಂತೆ ಎಲ್ಲ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.

‘ಮಿಲ್ಲರ್‌ ಟ್ಯಾಂಕ್‌ಗೆ ಹೊಂದಿಕೊಂಡಂತೆ ಇರುವ ಕ್ರೆಸೆಂಟ್‌ ರಸ್ತೆಯಲ್ಲಿ ಆಸ್ತಿ ಸಂಖ್ಯೆ 9ರಲ್ಲಿ 1.28 ಲಕ್ಷ ಚದರಡಿ ಆಸ್ತಿಯನ್ನು ನರಸಮ್ಮ ಎಂಬುವರಿಗೆ ಬೋಗಸ್‌ ಖಾತೆ ಮಾಡಲಾಗಿದೆ. ಅವರ ಬಳಿ ಯಾವುದೇ ಟೈಟಲ್‌ ಡೀಡ್‌ ಇಲ್ಲ. ಈ ಆಸ್ತಿಯು ಮುನಿಸಿಪಾಲಿಟಿ ಸ್ವತ್ತು ಎಂದು 1958ರ ಸರ್ವೆ ದಾಖಲೆಗಳಲ್ಲಿ ನಮೂದಾಗಿದೆ. ಇದನ್ನು ಪರಿಶೀಲಿಸಿದೆ, ನರಸಮ್ಮ ಅವರಿಗೆ ಖಾತಾ ಮಾಡಿಕೊಡಲಾಗಿದೆ’ ಎಂದು ಪದ್ಮನಾಭರೆಡ್ಡಿ ದೂರಿದರು.

‘ನರಸಮ್ಮ ಅವರು ಈ ಆಸ್ತಿಗೆ ₹590 ತೆರಿಗೆ ಕಟ್ಟಿದ್ದಾರೆ. ಆದರೆ, ಈ ಮೊತ್ತ 2 ಚದರಡಿಗೆ ಸಮ. ಅವರು 2000ರಿಂದ 2008ರವರೆಗೆ ತೆರಿಗೆ ಕಟ್ಟಿದ್ದಾರೆ. ಬಳಿಕ ಕಟ್ಟಿರಲಿಲ್ಲ. 2016ರಲ್ಲಿ ಮೂರು ಸೇಲ್‌ಡೀಡ್‌ಗಳನ್ನು ಮಾಡಿದ ನರಸಮ್ಮ, ಎರಡನ್ನು ಸುಬ್ಬರಾಜು ಎಂಬುವರ ಮಕ್ಕಳಿಗೆ ನೀಡಿ, ಒಂದನ್ನು ಅವರೇ ಇಟ್ಟುಕೊಂಡಿದ್ದಾರೆ. ಖಾತಾ ಪುಸ್ತಕದಲ್ಲಿ ಕೆರೆ ಒತ್ತುವರಿ ಜಾಗ ಎಂದು ನಮೂದಾಗಿದೆ. ಆದರೆ ಈ  ಅಂಶಗಳನ್ನು ಪರಿಗಣಿಸದೆಯೇ ಕಂದಾಯ ಅಧಿಕಾರಿ, ಸಹಾಯಕ ಕಂದಾಯ ಅಧಿಕಾರಿ, ಕಂದಾಯ ಇನ್‌ಸ್ಪೆಕ್ಟರ್‌, ಉಪ ಆಯುಕ್ತರು ಹಾಗೂ ಜಂಟಿ ಆಯುಕ್ತರು ಒಂದೇ ದಿನದಲ್ಲಿ ಖಾತೆ ಮಾಡಿ, ವಿಂಗಡಣೆಯನ್ನೂ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಈ ಪ್ರಕರಣ ಸಂಬಂಧ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಿದ್ದು ಬಿಟ್ಟರೆ ಈವರೆಗೆ ಖಾತಾವನ್ನು ರದ್ದುಪಡಿಸಿಲ್ಲ. ₹350 ಕೋಟಿ ಬೆಲೆ ಬಾಳುವ ಆಸ್ತಿಯನ್ನು ಪಾಲಿಕೆಯು ವಶಕ್ಕೆ ಪಡೆದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ‘ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಮೇಯರ್‌, ‘ಬುಧವಾರ ಬೆಳಿಗ್ಗೆ 11ಕ್ಕೆ ಆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸೋಣ’ ಎಂದರು.

ಪಾಲಿಕೆಗೆ ಸೇರಿದ ಸ್ಥಿರ ಹಾಗೂ ಚರಾಸ್ತಿಗಳು ಎಷ್ಟು ಇವೆ ಎಂಬುದನ್ನು ಪಟ್ಟಿ ಮಾಡಿ ಕೈಪಿಡಿ ಮಾಡಬೇಕು. ಅದನ್ನು ಎಲ್ಲ ವಾರ್ಡ್‌ಗಳ ಸದಸ್ಯರಿಗೆ ನೀಡಬೇಕು. ಪಾಲಿಕೆಯ ಆಸ್ತಿಗಳಿಗೆ ತಂತಿ ಬೇಲಿ ಅಳವಡಿಸಿ, ಇದು ಪಾಲಿಕೆಯ ಸ್ವತ್ತು ಎಂಬ ಫಲಕ ಹಾಕಬೇಕು. ಕೆಲ ಕಾಲೇಜು, ಸಂಘ–ಸಂಸ್ಥೆಗಳಿಗೆ ಗುತ್ತಿಗೆ ರೂಪದಲ್ಲಿ ಭೂಮಿಯನ್ನು ನೀಡಲಾಗಿದೆ. ಆದರೆ, ಮೂಲ ಉದ್ದೇಶವನ್ನು ಉಲ್ಲಂಘಿಸಿ ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಂತಹ ಆಸ್ತಿಗಳನ್ನು ವಶಕ್ಕೆ ಪಡೆಯಬೇಕು ಎಂಬ ಒತ್ತಾಯ ಸದಸ್ಯರಿಂದ ಕೇಳಿಬಂತು.

ಇದಕ್ಕೆ ಉತ್ತರಿಸಿದ ಆಯುಕ್ತರು, ‘1.28 ಲಕ್ಷ ಚದರಡಿ ಆಸ್ತಿಗೆ ಸಂಬಂಧಿಸಿದ ಖಾತಾವನ್ನು ರದ್ದುಪಡಿಸುವಂತೆ ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ಆದೇಶ ನೀಡಿದ್ದೇನೆ. ಅವರಿಗೆ ವರದಿ ಪಡೆದು ಕ್ರಮ ಕೈಗೊಳ್ಳುತ್ತೇನೆ. ಪಾಲಿಕೆಯ ಎಲ್ಲ ಆಸ್ತಿಗಳಿಗೆ ತಂತಿ ಬೇಲಿ ಅಳವಡಿಸಲಾಗುತ್ತದೆ’ ಎಂದರು. ಮೇಯರ್‌, ‘ತಂತಿ ಬೇಲಿ ಅಳವಡಿಸಲು ₹5 ಕೋಟಿ ನೀಡಲಾಗುತ್ತದೆ’ ಎಂದು ಹೇಳಿದರು.

ಸಮಸ್ಯೆ–ಸ್ಪಂದನ
ಎಂ.ಕೆ.ಗುಣಶೇಖರ್‌, ಸದಸ್ಯ: ಪಾಲಿಕೆಯ ಕ್ರೆಡಿಟ್‌ ರೇಟಿಂಗ್‌ ಕಡಿಮೆ ಇದೆ. ಇದರಿಂದ ಸಾಲ ಪಡೆಯಲು ಸಾಧ್ಯವಾಗುವುದಿಲ್ಲ. ಈ ರೇಟಿಂಗ್‌ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು.

ಎನ್.ಮಂಜುನಾಥ ಪ್ರಸಾದ್‌: ಕ್ರಿಸಿಲ್‌ ಎನ್ನುವ ಸಂಸ್ಥೆ ಕ್ರೆಡಿಟ್‌ ರೇಟಿಂಗ್‌ ನೀಡುತ್ತಿದೆ. ‘ಸಿ’ ಕೆಟಗಿರಿಯಿಂದ ‘ಬಿ’ಗೆ ಬಂದಿದೆ. ಪಾಲಿಕೆಯು ಅಡವಿಟ್ಟಿರುವ ಆಸ್ತಿಗಳ ಪೈಕಿ ಇನ್ನೊಂದು ಆಸ್ತಿಯನ್ನು ಬಿಡಿಸಿಕೊಂಡರೆ ‘ಬಿ’ಯಿಂದ ‘ಎ’ ಕೆಟಗಿರಿ ಸಿಗಲಿದೆ ಎಂದು ಆ ಸಂಸ್ಥೆಯವರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದೇವೆ.

ಶಶಿರೇಖಾ, ಸದಸ್ಯೆ: ಸರ್ವಜ್ಞ ನಗರ ವಾರ್ಡ್‌ಗೆ ಎಂಜಿನಿಯರ್‌ ನೇಮಿಸಿಲ್ಲ. ಇಲ್ಲಿ 7 ಕೊಳೆಗೇರಿಗಳಿವೆ. ಎಂಜಿನಿಯರ್‌ ಇಲ್ಲದೆ ಕ್ರಿಯಾಯೋಜನೆ ರೂಪಿಸಲು ಆಗುತ್ತಿಲ್ಲ.

ಮೇಯರ್‌: ನಿಮ್ಮ ವಾರ್ಡ್‌ಗೆ ಕೂಡಲೇ ಎಂಜಿನಿಯರ್‌ ನೇಮಿಸುತ್ತೇವೆ. ಎಂಜಿನಿಯರ್‌ಗಳು ಕೊಳಗೇರಿಗಳು ಇರುವ ವಾರ್ಡ್‌ಗಳಲ್ಲಿ ಕನಿಷ್ಠ ಒಂದು ವರ್ಷದವರೆಗೆ ಕೆಲಸ ಮಾಡುವ ನಿರ್ಣಯ ಕೈಗೊಳ್ಳುತ್ತೇವೆ.

***

ಪಾಲಿಕೆ ಗುತ್ತಿಗೆದಾರರ ದಂಡಾವರ್ತನೆ

ಗುತ್ತಿಗೆದಾರ ಕೃಷ್ಣಮೂರ್ತಿ ಮೇಲಿನ ಹಲ್ಲೆ ಖಂಡಿಸಿ ಬಿಬಿಎಂಪಿ ಕಾರ್ಯನಿರತರ ಗುತ್ತಿಗೆದಾರರ ಸಂಘದ ಸದಸ್ಯರು ಪಾಲಿಕೆಯ ಪೌರಸಭಾಂಗಣಕ್ಕೆ ನುಗ್ಗಿ ದುಂಡಾವರ್ತನೆ ತೋರಿದರು.

ಕೌನ್ಸಿಲ್‌ ಸಭೆ ನಡೆಯು್ತ್ಇದ್ದಾಗ ಸಭಾಂಗಣದ ಆವರಣಕ್ಕೆ ಬಂದ ಪ್ರತಿಭಟನಾಕಾರರು, ಬಾಗಿಲುಗಳನ್ನು ಬಡಿದು ಗಲಾಟೆ ಮಾಡಿದರು. ಮೇಯರ್‌ ಆರ್‌.ಸಂಪತ್‌ ರಾಜ್‌ ಸಭೆಯನ್ನು ಮುಂದೂಡಿದರು.

ಮೇಯರ್‌ ಹೊರಗೆ ಹೋಗುತ್ತಿದ್ದಂತೆ ಸುತ್ತುವರಿದ ಪ್ರತಿಭಟನಾಕಾರರು, ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು. ಅಗ್ರಹಾರ ದಾಸರಹಳ್ಳಿ ವಾರ್ಡ್‌ನ ಸದಸ್ಯೆ ಶಿಲ್ಪಾ ಶ್ರೀಧರ್‌ ವಿರುದ್ಧ ಘೋಷಣೆಗಳನ್ನು ಕೂಗಿದರು.

‘ಕೃಷ್ಣಮೂರ್ತಿ ಮೇಲೆ ಶಿಲ್ಪಾ ಪತಿ ಶ್ರೀಧರ್‌ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಕಾಮಗಾರಿಗಳ ಪರಿಶೀಲನೆ ನಡೆಸಲು ಶ್ರೀಧರ್‌ ಅವರಿಗೆ ಯಾವುದೇ ಅಧಿಕಾರ ಇಲ್ಲ. ಆದರೂ, ಪರಿಶೀಲನೆ ನೆಪದಲ್ಲಿ ಹಲ್ಲೆ ನಡೆಸಿದ್ದಾರೆ’ ಎಂದು ಸಂಘದ ಅಧ್ಯಕ್ಷ ಮಂಜುನಾಥ್‌ ದೂರಿದರು.

‘ಶಿಲ್ಪಾ ಅವರು ಕೂಡಲೇ ರಾಜೀನಾಮೆ ನೀಡಬೇಕು. ಪ್ರಕರಣವನ್ನು ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಪ್ರತಿಭಟಿಸುತ್ತೇವೆ’ ಎಂದು ಎಚ್ಚರಿಸಿದರು.

ಇದಕ್ಕೆ ಮೇಯರ್‌, ‘ಗುತ್ತಿಗೆದಾರರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರ ಮೇಲಿನ ಹಲ್ಲೆ ಖಂಡನೀಯ. ಈ ಬಗ್ಗೆ ವರದಿ ನೀಡಲು ಸೂಚಿಸಿದ್ದೇನೆ’ ಎಂದರು. ಗುತ್ತಿಗೆದಾರರ ಮೇಲಿನ ಹಲ್ಲೆ ಪ್ರಕರಣ ಕೌನ್ಸಿಲ್‌ ಸಭೆಯಲ್ಲೂ ಕಾಂಗ್ರೆಸ್‌–ಬಿಜೆಪಿ ಸದಸ್ಯರ ಜಟಾಪಟಿಗೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.