ADVERTISEMENT

ಬಾಲಕಿ ಎರಡು ಬಾರಿ ಅಪಹರಣ; ಅಪರಾಧಿಗೆ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 19:56 IST
Last Updated 30 ಜನವರಿ 2018, 19:56 IST

ಬೆಂಗಳೂರು: 16 ವರ್ಷದ ಬಾಲಕಿಯನ್ನು ಎರಡು ಬಾರಿ ಅಪಹರಿಸಿ ಅಕ್ರಮ ಬಂಧನದಲ್ಲಿಟ್ಟಿದ್ದ ಗುರು ಅಲಿಯಾಸ್‌ ಬೂಸಾ (20) ಎಂಬಾತನಿಗೆ ನಗರದ 54ನೇ ಸಿಟಿ ಸಿವಿಲ್‌ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ.

ಜಯನಗರ ಹಾಗೂ ಗಿರಿನಗರ ಪೊಲೀಸ್‌ ಠಾಣೆಯಲ್ಲಿ ಪ್ರತ್ಯೇಕವಾಗಿ ದಾಖಲಾಗಿದ್ದ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ. ಲತಾ ಕುಮಾರಿ, ಶಿಕ್ಷೆಯ ಆದೇಶ ಹೊರಡಿಸಿದ್ದಾರೆ. ಒಂದು ಪ್ರಕರಣದಲ್ಲಿ 10 ವರ್ಷ ಸಾದಾ ಜೈಲು ಶಿಕ್ಷೆ,  ₹1 ಲಕ್ಷ ದಂಡ ಮತ್ತು ಇನ್ನೊಂದು ಪ್ರಕರಣದಲ್ಲಿ 7 ವರ್ಷ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಲಾಗಿದೆ. ಹಿರಿಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಚಿನ್ನ ವೆಂಕಟರಮಣಪ್ಪ ವಾದಿಸಿದ್ದರು.

ಹೊಸಕೆರೆಹಳ್ಳಿ ನಿವಾಸಿ ಗುರು, 2015ರ ಜುಲೈ 14ರಂದು ಬಾಲಕಿಯನ್ನು ಅಪಹರಿಸಿ ಅಕ್ರಮ ಬಂಧನದಲ್ಲಿಟ್ಟಿದ್ದ. ಆ ಬಗ್ಗೆ ಗಿರಿನಗರ ಠಾಣೆಗೆ ಬಾಲಕಿ ತಂದೆ ದೂರು ಕೊಟ್ಟಿದ್ದರು. ತನಿಖೆ ಕೈಗೊಂಡಿದ್ದ ಪೊಲೀಸರು, ಬಾಲಕಿಯನ್ನು ರಕ್ಷಿಸಿ ಗುರುನನ್ನು ಬಂಧಿಸಿದ್ದರು.

ADVERTISEMENT

ಜಾಮೀನು ಮೇಲೆ ಹೊರಬಂದಿದ್ದ ಅಪರಾಧಿ, ಬಾಲಕಿಯನ್ನು 2015ರ ಸೆಪ್ಟೆಂಬರ್‌ 8ರಂದು ಎರಡನೇ ಬಾರಿ ಅಪಹರಿಸಿದ್ದ. ಆ ಬಗ್ಗೆ ಜಯನಗರ ಠಾಣೆಗೆ ತಂದೆ ದೂರು ನೀಡಿದ್ದರು. ಆ ಪ್ರಕರಣದಲ್ಲೂ ಬಾಲಕಿಯನ್ನು ರಕ್ಷಿಸಿ ಗುರುನನ್ನು ಬಂಧಿಸಲಾಗಿತ್ತು.

ಆರೋಪಿಯ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ಎರಡೂ ಠಾಣೆಯ ತನಿಖಾಧಿಕಾರಿಗಳು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.