ADVERTISEMENT

ನಗರದಲ್ಲಿ ಅವತರಿಸಿದ ಜಪಾನ್ ಲೋಕ

ಜಪಾನ್ ಉಡುಗೆ ತೊಟ್ಟವರ ಜತೆ ಸೆಲ್ಫಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 19:30 IST
Last Updated 3 ಫೆಬ್ರುವರಿ 2018, 19:30 IST
ನಗರದಲ್ಲಿ ಅವತರಿಸಿದ ಜಪಾನ್ ಲೋಕ
ನಗರದಲ್ಲಿ ಅವತರಿಸಿದ ಜಪಾನ್ ಲೋಕ   

ಬೆಂಗಳೂರು: ಜಪಾನ್ ಸಂಸ್ಕೃತಿ ಬಿಂಬಿಸುವ ಬಣ್ಣ ಬಣ್ಣದ ದಿರಿಸು ಧರಿಸಿದ್ದ ಬೆಡಗಿಯರು. ಅವರ ಪಕ್ಕ ನಿಂತು ತಾ ಮುಂದು ನಾ ಮುಂದು ಎಂಬಂತೆ ಸೆಲ್ಫಿ ತೆಗೆಸಿಕೊಂಡ ನಗರದ ಯುವತಿಯರು. ಬಾಯಲ್ಲಿ ನೀರೂರಿಸುವ ಸ್ವಾದಭರಿತ ತಿನಿಸುಗಳು. ಇವುಗಳ ನಡುವೆ ಇಂಪಾದ ಸಂಗೀತ...

ಭಾರತ ಹಾಗೂ ಜಪಾನ್‌ ನಡುವೆ ಸಾಂಸ್ಕೃತಿಕ ವಿನಿಮಯದ ಉದ್ದೇಶದಿಂದ ಶನಿವಾರ ನಗರದಲ್ಲಿ ಆಯೋಜಿಸಿದ್ದ ‘ಜಪಾನ್‌ ಹಬ್ಬ’ದಲ್ಲಿ ಕಂಡುಬಂದ ದೃಶ್ಯಗಳಿವು. ಜಪಾನ್ ಹಬ್ಬ ಟ್ರಸ್ಟ್ ಹಾಗೂ ಜಪಾನೀಸ್‌ ಅಸೋಸಿಯೇಷನ್‌ ಆಶ್ರಯದಲ್ಲಿ ನಡೆದ ಈ ಹಬ್ಬ ಆ ದೇಶದ ಪರಂಪರೆಯನ್ನು ಪರಿಚಯಿಸಿತು.

ಸಾಂಪ್ರದಾಯಿಕ ಉಡುಗೆ ತೊಟ್ಟ ಜಪಾನಿ ಮಹಿಳೆಯರು, ಹಬ್ಬಕ್ಕೆ ಬಂದವರಿಗೆ ಎರಡು ಬಾರಿ ಶಿರಬಾಗಿ (ಜಪಾನಿ ಸಂಸ್ಕೃತಿ) ನಮಿಸಿ ಬರಮಾಡಿಕೊಂಡರು. ಜಪಾನ್‌ನ ಕಂಪನಿಗಳ ಮಳಿಗೆಗಳಿಗೆ ಜನ ಮುಗಿಬಿದ್ದಿದ್ದರು. ಕೆಲವು ಮಳಿಗೆಗಳಲ್ಲಿದ್ದ ಆಟದ ಸಾಮಗ್ರಿಗಳು, ಮಕ್ಕಳ ಆಟಿಕೆಗಳು ಅಲ್ಲಿನ ಸಂಸ್ಕೃತಿಯ ಶ್ರೀಮಂತಿಕೆಯ ದರ್ಶನ ಮಾಡಿಸಿದವು.

ADVERTISEMENT

ಕ್ಯಾಲಿಗ್ರಫಿ ಕಲೆಯಿಂದ ಅಲಂಕರಿಸಿದ್ದ ಬೀಸಣಿಗೆ ‘ಉಚಿವಾ’, ಸಂಗೀತ, ರಸಪ್ರಶ್ನೆ ಕಾರ್ಯಕ್ರಮಗಳು ಹಬ್ಬದ ಮೆರುಗು ಹೆಚ್ಚಿಸಿದವು. ಜಪಾನೀಯರು, ಭಾರತೀಯರು ಹಾಗೂ ಮಕ್ಕಳು ತಮಗಿಷ್ಟವಾದವರ ಹೆಸರುಗಳನ್ನು ಜಪಾನಿ ಲಿಪಿಯಲ್ಲಿ ಬರೆದು ಖುಷಿಪಟ್ಟರು. ಇನ್ನೂ ಕೆಲವರು ಕಪ್ಪು ಮಸಿಯಲ್ಲಿ ಚಿತ್ರ ಬಿಡಿಸಿದರು.

ಕಿರಿಗಾಮಿ (ಕಾಗದವನ್ನು ಬೇಕಾದ ಆಕಾರದಲ್ಲಿ ಕತ್ತರಿಸಿ ಕಲಾಕೃತಿ ರಚಿಸುವುದು) ಹಾಗೂ ಒರಿಗಾಮಿ (ಕಾಗದವನ್ನು ಮಡಚಿ ಬೇಕಾದ ರೂಪ ಕೊಡುವ ಕಲೆ) ಕಲೆಯಲ್ಲಿ ಅರಳಿದ ಕಲಾಕೃತಿಗಳು ನೋಡುಗರನ್ನು ಆಕರ್ಷಿಸಿದವು.‘ಮಮೆಶಿಬ’ ಎಂಬ ಜಪಾನ್ ಚಲನಚಿತ್ರವನ್ನು ಪ್ರದರ್ಶಿಸಲಾಯಿತು.

ಕನ್ನಡಿಗರ ಕೈಯಲ್ಲಿ ಅರಳಿದ ಜಪಾನ್ ಕಲೆ: ಜಪಾನ್‌ನ ಕಿರಿಗಾಮಿ ಹಾಗೂ ಒರಿಗಾಮಿ ಕಲೆಯಲ್ಲಿ ನಿಪುಣರಾಗಿರುವ ಕನ್ನಡಿಗ ಹುಸೇನ್ ವಿವಿಧ ಕಲಾಕೃತಿಗಳನ್ನು ರಚಿಸುವ ಮೂಲಕ ಗಮನ ಸೆಳೆದರು. ಅವರು ತಯಾರಿಸುತ್ತಿದ್ದ ಕಿರಿಗಾಮಿ ಕಲಾಕೃತಿಗಳನ್ನು ಮಕ್ಕಳು ಕುತೂಹಲದಿಂದ ವೀಕ್ಷಿಸಿದರು. ಅವರ ನೆರವಿನಿಂದ ತಾವೂ ಕಲಾಕೃತಿಗಳನ್ನು ತಯಾರಿಸಲು ಪ್ರಯತ್ನಿಸಿದರು.

ವಿ.ಎಸ್.ಶಾಸ್ತ್ರಿ ಎಂಬುವರು ಒರಿಗಾಮಿ ಕಲೆಯಲ್ಲಿ ‘ಗಣೇಶ’ (ಕಂಗಿಟೆನ್–ಜಪಾನ್ ಹೆಸರು) ದೇವರ ಮುಖ ಸೇರಿದಂತೆ ವಿವಿಧ ಮುಖವಾಡಗಳನ್ನು ಪೇಪರ್‌ ಮೂಲಕ ರಚಿಸಿದರು. ಕಾಗದದಲ್ಲಿ ಸಣ್ಣ ಗೆರೆಗಳ ಮೂಲಕ ಚಿತ್ತಾರ ಬಿಡಿಸುವ ಕಲೆಯನ್ನೂ ಪ್ರದರ್ಶಿಸಲಾಯಿತು.

‘ಗಣೇಶ ಹಾಗೂ ಸರಸ್ವತಿ ದೇವರನ್ನು ಜಪಾನ್‌ನಲ್ಲೂ ಆರಾಧಿಸುತ್ತಾರೆ. ಸುಮಾರು 3,500 ಭಾರತೀಯ ದೇವರನ್ನು ಅಲ್ಲಿನವರು ಪೂಜಿಸುತ್ತಾರೆ. ಹವ್ಯಾಸಕ್ಕಾಗಿ ಈ ಕಲೆ ಕಲೆತುಕೊಂಡೆ. ಅದನ್ನೇ ಮುಂದುವರೆಸಿಕೊಂಡು ಬಂದಿದ್ದೇನೆ’ ಎಂದು ಶಾಸ್ತ್ರಿ ಹೇಳಿದರು.

ಹಬ್ಬದಲ್ಲಿ ಕನ್ನಡದ ಕಂಪು

ಪ್ರತಿ ವರ್ಷವೂ ನಡೆಯುವ ಹಬ್ಬದಲ್ಲಿ ಕನ್ನಡದ ಹಾಡುಗಳಿಗೂ ಆದ್ಯತೆ ನೀಡಲಾಗುತ್ತದೆ. ಪುನೀತ್ ರಾಜ್‌ಕುಮಾರ್ ನಟನೆಯ ‘ಬೊಂಬೆ ಹೇಳುತೈತೆ....ಮತ್ತೆ ಹೇಳುತೈತೆ’ ಹಾಡನ್ನು ಜಪಾನ್‌ನ ಕಾಜುಮಾಸ ಕುಬೋಕಿ ನಿರರ್ಗಳವಾಗಿ ಹಾಡಿದರು. ಅವರ ಕನ್ನಡ ಪ್ರೀತಿಗೆ ನೆರೆದಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದರು.

ಡಾ.ರಾಜ್‌ಕುಮಾರ್ ಅಭಿನಯದ ‘ಹುಟ್ಟಿದರೇ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಚಿತ್ರಗೀತೆಯನ್ನು ‘ರಾಯಲ್ ಎಕೊ’ ತಂಡದವರು (ಜಪಾನೀಯರು) ಪ್ರಸ್ತುತಪಡಿಸಿ ಕರತಾಡನ ಗಿಟ್ಟಿಸಿದರು.

ಶಾಮಿಸೆನ್‌ಗೆ ಮಾರುಹೋದರು

ಜಪಾನ್‌ನ ಅವೊಮೊರಿ ರಾಜ್ಯದ ‘ಸುಗುರು ಶಾಮಿಸೆನ್’ ಸಂಗೀತ ಈ ಬಾರಿಯ ಹಬ್ಬದ ಪ್ರಧಾನ ಅಂಶವಾಗಿತ್ತು. ಯೊಸಿಯುಕಿ ಕಸೈ ಹಾಗೂ ಹಿರೊತೊ ಐಜವ ಎಂಬ ಜಪಾನಿ ಕಲಾವಿದರು ಪ್ರಸ್ತುತ ಪಡಿಸಿದ ಈ ಸಂಗೀತ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.

ಸಭಾಂಗಣದ ತುಂಬಿದ್ದ ಜನರು ಈ ಸಂಗೀತ ಕೇಳಿ ಹುಚ್ಚೆದ್ದು ಕುಣಿದರು. ಕಾರ್ಯಕ್ರಮ ಮುಗಿದ ಬಳಿಕ ಕಲಾವಿದರ ಜತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.