ADVERTISEMENT

7 ರಿಂದ ರಾಜ್ಯವ್ಯಾಪಿ ಲಾರಿ ಮುಷ್ಕರ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 19:53 IST
Last Updated 4 ಜುಲೈ 2013, 19:53 IST

ಬೆಂಗಳೂರು: `ರಾಜ್ಯ ಲಾರಿ ಮಾಲೀಕರ ವಿವಿಧ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಜುಲೈ 7ರ ಮಧ್ಯರಾತ್ರಿಯಿಂದಲೇ ರಾಜ್ಯದಾದ್ಯಂತ ಲಾರಿ ಮುಷ್ಕರ ನಡೆಸಲಾಗುವುದು' ಎಂದು ರಾಜ್ಯ ಲಾರಿ ಮಾಲೀಕರ ಹಾಗೂ ಏಜೆಂಟ್‌ಗಳ ಸಂಘಟನೆಯ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಮರಳು ಸಾಗಿಸಲು ಲಾರಿಗಳಿಗೆ ಅನುಮತಿ ನೀಡಬೇಕು ಹಾಗೂ ರಸ್ತೆಗಳಿಗೆ ಸುಂಕ ವಿಧಿಸುವ ಪ್ರಸ್ತಾಪವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ನಡೆಸಲಾಗುವುದು' ಎಂದರು.

`ಬೆಂಗಳೂರಿಗೆ 3,000 ಲಾರಿ ಸೇರಿದಂತೆ ರಾಜ್ಯದಲ್ಲಿ ದಿನಕ್ಕೆ ಈಗ 12 ಸಾವಿರ ಲಾರಿ ಮರಳು ಪೂರೈಸಲಾಗುತ್ತಿದೆ. ಮೆಟ್ರೊ ಹಾಗೂ ಇತರ ಕಟ್ಟಡಗಳ ನಿರ್ಮಾಣಕ್ಕೆ ಅಧಿಕ ಪ್ರಮಾಣದ ಮರಳಿನ ಅಗತ್ಯ ಇದೆ. ಆದರೆ, ಮರಳನ್ನು ಸಾಗಿಸಲು ಅನುಮತಿ ನೀಡಲು ಸರ್ಕಾರಕ್ಕೆ ಮನಸ್ಸಿಲ್ಲ. ಲಾರಿ ಮಾಲೀಕರಿಂದ ಹಣ ವಸೂಲಿ ಮಾಡುವ ಉದ್ದೇಶದಿಂದ ಅನುಮತಿ ನಿರಾಕರಿಸಲಾಗುತ್ತಿದೆ' ಎಂದು ಅವರು ಆರೋಪಿಸಿದರು.

`ಮರಳು ಲಾರಿಗಳ ಮಾಲೀಕರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದು, ಆರು ತಿಂಗಳಲ್ಲಿ ನಾಲ್ಕು ಲಾರಿ ಮಾಲೀಕರು ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಹಣವನ್ನು ನೀಡದಿದ್ದರೆ ಸೆಕ್ಷನ್ 394 ರ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕಿರುಕುಳ ನೀಡುತ್ತಾರೆ. ಕೆಲವು ಕಡೆಗಳಲ್ಲಿ ತಹಶೀಲ್ದಾರರೇ ಖುದ್ದಾಗಿ ನಿಂತು ಲಾರಿಗಳನ್ನು ತಡೆದು ಮಾಲೀಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ' ಎಂದು ಆರೋಪಿಸಿದರು.

ಕಾರ್ಯದರ್ಶಿ ಬಿ.ವಿ.ನಾರಾಯಣಪ್ಪ ಮಾತನಾಡಿ, `ಸದ್ಯ ಮರಳು ನೀತಿ ಜಾರಿಗೆ ತರದಿದ್ದರೂ ಕನಿಷ್ಠ ನಮಗೆ ತಾತ್ಕಾಲಿಕ ಅನುಮತಿಯನ್ನಾದರು ನೀಡಬೇಕು. ಪ್ರತಿ ಜಿಲ್ಲೆಯಲ್ಲಿ ಮರಳು ತುಂಬಿದ ನೂರು ಲಾರಿಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ನಮಗೆ ಪೊಲೀಸರ ಕಿರುಕುಳ ದಿಂದ ಮುಕ್ತಿನೀಡಬೇಕು ಇಲ್ಲದಿದ್ದರೇ ಮುಷ್ಕರವನ್ನು ನಿಲ್ಲಿಸುವುದಿಲ್ಲ' ಎಂದರು.

ರಾಜ್ಯದಲ್ಲಿ ಸೂಕ್ತ ಮರಳು ನೀತಿ ಜಾರಿಯಲ್ಲಿ ಇಲ್ಲದ ಕಾರಣ ಸರ್ಕಾರಕ್ಕೆ ವರ್ಷಕ್ಕೆ ರೂ300 ಕೋಟಿಯಷ್ಟು ನಷ್ಟ ಸಂಭವಿಸುತ್ತದೆ. ಸೂಕ್ತ ಅನುಮತಿ ವ್ಯವಸ್ಥೆ ಜಾರಿಗೊಳಿಸಿದಲ್ಲಿ ಅದು ಸರ್ಕಾರದ ಬೊಕ್ಕಸಕ್ಕೆ ಸೇರಲಿದೆ.

ಮರಳು ಲಾರಿಗಳನ್ನು ಗುರುತಿಸಲು ಲಾರಿಗೆ `ಹಳದಿ ಬಣ್ಣ'ದ ಪಟ್ಟಿಯನ್ನು ಕಡ್ಡಾಯ ಮಾಡಬೇಕು. ಆಗ ಅಕ್ರಮ ಮರಳು ಸಾಗಣೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂಬ ಸಲಹೆಗಳನ್ನು ಸಂಘಟನೆ ಮುಂದಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.