ADVERTISEMENT

ಈಡಿಗ ಸಮುದಾಯದ ₹7.10 ಲಕ್ಷ ವಿದ್ಯಾರ್ಥಿವೇತನ ವಿತರಣೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 14:40 IST
Last Updated 29 ಜೂನ್ 2025, 14:40 IST
ಬೆಂಗಳೂರು ಈಡಿಗರ ವಿದ್ಯಾರ್ಥಿನಿಲಯದ ಹಳೇ ವಿದ್ಯಾರ್ಥಿಗಳ ಸಂಘದಿಂದ ವಿದ್ಯಾರ್ಥಿವೇತನ ವಿತರಿಸಲಾಯಿತು.
ಪ್ರಜಾವಾಣಿ ಚಿತ್ರ
ಬೆಂಗಳೂರು ಈಡಿಗರ ವಿದ್ಯಾರ್ಥಿನಿಲಯದ ಹಳೇ ವಿದ್ಯಾರ್ಥಿಗಳ ಸಂಘದಿಂದ ವಿದ್ಯಾರ್ಥಿವೇತನ ವಿತರಿಸಲಾಯಿತು. ಪ್ರಜಾವಾಣಿ ಚಿತ್ರ   

ಬೆಂಗಳೂರು: ಈಡಿಗ ಸಮುದಾಯದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಭಾನುವಾರ ₹7.10 ಲಕ್ಷ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸಲಾಯಿತು.

ಈಡಿಗ ವಿದ್ಯಾರ್ಥಿ ನಿಲಯದ ಹಳೆ ವಿದ್ಯಾರ್ಥಿಗಳ ಸಂಘವು ವಿವಿಧ ದತ್ತಿಗಳು ಹಾಗೂ ದಾನಿಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿದ ಕೋಲಾರದ ದೇವರಾಜ್ ಅರಸು ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಜಿ.ಎಚ್. ನಾಗರಾಜ್ ಮಾತನಾಡಿ, ‘ಈಡಿಗ ಸಮುದಾಯ ಸಂಘಟಿಸಿದವರನ್ನು ಶಿಕ್ಷಣ, ಉದ್ಯೋಗ ದೊರಕಲು ಕಾರಣರಾದವರನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು. ಸಮುದಾಯದ ಉದ್ಯಮಿಗಳು, ಸ್ಥಿತಿವಂತರು ವಿದ್ಯಾರ್ಥಿಗಳಿಗೆ ನೆರವಾಗಬೇಕು’ ಎಂದು ತಿಳಿಸಿದರು.

‘ಸಮುದಾಯವನ್ನು ಕಟ್ಟಿ ಬೆಳೆಸಿದ ಕೆ.ಎನ್. ಗುರುಸ್ವಾಮಿ, ಕೆ. ವೆಂಕಟಸ್ವಾಮಿ, ಕೆ.ಎ. ನೆಟ್ಟಕಲ್ಲಪ್ಪ ಇನ್ನಿತರ ಹಿರಿಯರ ದೂರದೃಷ್ಟಿ, ಹಾಕಿಕೊಟ್ಟ ಮಾರ್ಗದರ್ಶನ ನಮಗೆಲ್ಲ ಸ್ಪೂರ್ತಿಯಾಗಬೇಕು’ ಎಂದರು.

ADVERTISEMENT

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಉಪಾಧ್ಯಕ್ಷ ಟಿ. ಶಿವಕುಮಾರ್ ಮಾತನಾಡಿ, ‘ವಿದ್ಯೆಯ ಜೊತೆಗೆ ಆರೋಗ್ಯದ ಕಡೆಗೂ ಗಮನ ಕೊಡಬೇಕು. ಯೋಗ, ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ಪರಿಸರವನ್ನು ಸಂರಕ್ಷಿಸಬೇಕು’ ಎಂದು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಡಾ. ನಳಿನಾಕ್ಷಿ ಸಣ್ಣಪ್ಪ, ಡಾ. ಎಸ್.ಆರ್‌. ಕೇಶವಮೂರ್ತಿ ಹಾಗೂ ಮೆಟ್ರೊ ರೈಲು ಚಾಲಕಿ ಎಲ್. ರಶ್ಮಿ ಅವರನ್ನು ಗೌರವಿಸಲಾಯಿತು. ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಸತ್ಯದರ್ಶನ ಟ್ರಸ್ಟ್ ಅಧ್ಯಕ್ಷ ನರಸಿಂಹ ಸ್ವಾಮಿ ಅವರ ‘ಸತ್ಯದ ಬೆಳಕು’ ಸಂಕಲನ ಬಿಡುಗಡೆ ಮಾಡಲಾಯಿತು. ಸಂಘದ ಕಾರ್ಯದರ್ಶಿ ಟಿ.ಎಲ್‌. ಹನುಮಂತರಾಯ, ಪತ್ರಕರ್ತ ಇ.ವಿ. ಸತ್ಯನಾರಾಯಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.