ADVERTISEMENT

ಆಯುತಚಂಡಿ ಯಾಗ ಸಂಪನ್ನ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 20:17 IST
Last Updated 12 ಏಪ್ರಿಲ್ 2019, 20:17 IST
ದಿನೇಶ್ ಗುರೂಜಿ ಅವರು ಯಾಗದ ಪ್ರಧಾನಕುಂಡದಲ್ಲಿ ಮಾಹಾಪೂರ್ಣಾಹುತಿ ಸಂಪನ್ನಗೊಳಿಸಿದರು
ದಿನೇಶ್ ಗುರೂಜಿ ಅವರು ಯಾಗದ ಪ್ರಧಾನಕುಂಡದಲ್ಲಿ ಮಾಹಾಪೂರ್ಣಾಹುತಿ ಸಂಪನ್ನಗೊಳಿಸಿದರು   

ನೆಲಮಂಗಲ: 10 ದಿನಗಳಿಂದ ಬೂದಿ ಹಾಳ್‌ನಲ್ಲಿ ನಡೆಯುತ್ತಿದ್ದ ಆಯುತಚಂಡಿ ಯಾಗವು 11ನೇ ದಿನವಾದ ಶುಕ್ರವಾರದಂದು ನೂರಾ ಒಂದು ಅಗ್ನಿಕುಂಡಗಳಲ್ಲಿ ಮಹಾಪೂರ್ಣಾಹುತಿಯೊಂದಿಗೆ ಸಂಪನ್ನಗೊಂಡಿತು.

1,010 ಋತ್ವಿಕರು ಚಂಡಿಹೋಮ ನಡೆಸಿದರು. 15,000 ಕೆ.ಜಿ ಪರಮಾನ್ನ ಪೂರ್ಣಾಹುತಿಗೆ ಸಮರ್ಪಣೆಯಾಯಿತು. ವಿಜಯ ದುರ್ಗಾಪರಮೇಶ್ವರಿ ದೇವಿಗೆ ಮಹಾಮಂಗಳಾರತಿ, ಅನ್ನಸಂತರ್ಪಣೆ, ಆಶೀರ್ವಚನ, ಮಂತ್ರಾಕ್ಷತೆಯೊಂದಿಗೆ ಯಾಗ ಸಂಪನ್ನವಾಯಿತು.

11 ದಿನಗಳಲ್ಲಿ ದುರ್ಗಾಸಪ್ತಶತಿ ಪಾರಾಯಣ, ಒಂದು ಕೋಟಿ ನವಾಕ್ಷರೀ ಮಹಾಮಂತ್ರ ಜಪ, ಕ್ಷೀರ ತರ್ಪಣ, ಪರಮಾನ್ನ ಆಹುತಿ, ಆಜ್ಯಾಹುತಿ, ನವಾವರಣ ಕಲ್ಪೋಕ್ತ ಪೂಜೆ, ದಂಪತಿ, ಸುವಾಸಿನಿ, ಕುಮಾರಿ ಪೂಜೆ, ಅಷ್ವಾವಧಾನ-ಸೇವಾದಿಗಳಿಂದ ಚಂಡಿ ಮಹಾಯಾಗವನ್ನು ನೆರವೇರಿಸಲಾಯಿತು.

ADVERTISEMENT

40 ಎಕರೆ ಪ್ರದೇಶದಲ್ಲಿ ಯಾಗಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸ್ಥಳದಲ್ಲಿ ಚಂಡಿಕಾ ಪರಮೇಶ್ವರಿ ಮೂರ್ತಿ, ಶೃಂಗೇರಿ ಶ್ರೀಗಳ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. 1,008 ಕಳಸಗಳ ಸ್ಥಾಪನೆ ಮಾಡಲಾಗಿತ್ತು. ನಿತ್ಯವೂ ಹೋಮದ ನಂತರ ಚಂಡೆ–ಮದ್ದಳೆ, ನಗಾರಿಯ ಮಂತ್ರಾಕ್ಷತೆ, ಆನೆಯೊಂದಿಗೆ ದೇವಿಯ ರಥೋತ್ಸವ ನಡೆಸಲಾಗುತ್ತಿತ್ತು. ರಾಜರಾಜೇಶ್ವರಿ ನಗರದ ದಿನೇಶ್ ಗುರೂಜಿ ಅವರ ನೇತೃತ್ವದಲ್ಲಿ, ಉದ್ಯಮಿ ತಿಪ್ಪಣ್ಣ ಅವರ ಪ್ರಾಯೋಜಕತ್ವದಲ್ಲಿ ಯಾಗ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.