ADVERTISEMENT

ಎಸಿಬಿ ಹೆಸರಿನಲ್ಲಿ ಬೆದರಿಕೆ: ನಕಲಿ ಡಿವೈಎಸ್ಪಿ ಬಂಧನ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2023, 16:16 IST
Last Updated 1 ಸೆಪ್ಟೆಂಬರ್ 2023, 16:16 IST
ಸಂತೋಷ ಕೊಪ್ಪದ
ಸಂತೋಷ ಕೊಪ್ಪದ   

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಬಿ) ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಆರೋಪದಡಿ ಸಂತೋಷ್ ಕೊಪ್ಪದ (25) ಅವರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಬೆಳಗಾವಿ ಜಿಲ್ಲೆಯ ಸಂತೋಷ್, ಎಸ್ಸೆಸ್ಸೆಲ್ಸಿವರೆಗೆ ಓದಿದ್ದ. ಎಸಿಬಿ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಡಿವೈಎಸ್ಪಿ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದ ಪ್ರಮುಖ ಆರೋಪಿ ವಿಶಾಲ್ ಪಾಟೀಲ ಜೊತೆ ಸೇರಿ ಕೃತ್ಯ ಎಸಗುತ್ತಿದ್ದ.  ವಿಶಾಲ್ ಸದ್ಯ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ಹಣ ಸಂಪಾದಿಸುವುದನ್ನೇ ವೃತ್ತಿ ಮಾಡಿಕೊಂಡಿದ್ದ ವಿಶಾಲ್ ಪಾಟೀಲ ವಿರುದ್ಧ ಬೈಲಹೊಂಗಲ ಠಾಣೆಯಲ್ಲಿ 2020ರಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ವಿಶಾಲ್‌ ಬಂಧನವೂ ಆಗಿತ್ತು. ಜಾಮೀನು ಮೇಲೆ ಹೊರಬಂದಿದ್ದ ಈತ, ತನ್ನ ಕೃತ್ಯ ಮುಂದುವರಿಸಿದ್ದ. ಸಂತೋಷ್‌ ಕೊಪ್ಪದನನ್ನೇ ತನ್ನ ಸಹಾಯಕಯೆಂದು ಹೇಳಿಕೊಳ್ಳುತ್ತಿದ್ದ’ ಎಂದು ತಿಳಿಸಿವೆ.

ADVERTISEMENT

ಅಧಿಕಾರಿಗಳ ಪಟ್ಟಿ ಸಿದ್ಧಪಡಿಸಿ ಕೃತ್ಯ: ‘ಆರೋಪಿ ವಿಶಾಲ್, ಸರ್ಕಾರಿ ಅಧಿಕಾರಿಗಳ ಪಟ್ಟಿ ಸಿದ್ಧಪಡಿಸುತ್ತಿದ್ದ. ನಂತರ, ಎಸಿಬಿ ಡಿವೈಎಸ್ಪಿ ಹೆಸರಿನಲ್ಲಿ ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನಿಮ್ಮ ವಿರುದ್ಧ ದೂರು ಬಂದಿದೆ. ಸದ್ಯದಲ್ಲೇ ನಿಮ್ಮ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಲಿದ್ದೇವೆ’ ಎಂದು ವಿಶಾಲ್ ಬೆದರಿಸುತ್ತಿದ್ದ. ‘ನಿಮ್ಮ ಮೇಲೆ ದಾಳಿ ಮಾಡಬಾರದೆಂದರೆ ಹಣ ನೀಡಿ’ ಎಂಬುದಾಗಿ ಬೇಡಿಕೆ ಇರಿಸುತ್ತಿದ್ದ. ಈತನ ಮಾತಿನಿಂದ ಹೆದರುತ್ತಿದ್ದ ಅಧಿಕಾರಿಗಳು, ವಿಶಾಲ್‌ನನ್ನು ಭೇಟಿಯಾಗುತ್ತಿದ್ದರು. ಸಹಾಯಕ ಸಂತೋಷ್ ಕೊಪ್ಪದ ಕೈಗೆ ಹಣ ನೀಡುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಆರೋಪಿಗಳ ಕಿರುಕುಳದಿಂದ ಬೇಸತ್ತಿದ್ದ ಅಧಿಕಾರಿಯೊಬ್ಬರು 2022ರಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದರು. ಇತ್ತೀಚೆಗೆ ಕೆಲ ಸುಳಿವುಗಳು ಸಿಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಬೆಳಗಾವಿಯಲ್ಲಿ ಆರೋಪಿ ಸಂತೋಷ್‌ನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಎಸಿಬಿ ರದ್ದಾದ ನಂತರ, ಲೋಕಾಯುಕ್ತ ಪೊಲೀಸರ ಹೆಸರಿನಲ್ಲೂ ಆರೋಪಿಗಳು ಅಧಿಕಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡಿರುವ ಮಾಹಿತಿ ಇದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.