ADVERTISEMENT

ಜಲ್ಲಿ ಸುರಿದರು, ಟಾರು ಹಾಕಲು ಮರೆತರು

ಬ್ಯಾಟರಾಯನಪುರ ವಾರ್ಡ್‌ನ ಅಮೃತಹಳ್ಳಿಯ ಈಶ್ವರ ದೇವಸ್ಥಾನದಿಂದ ಆರಂಭವಾಗುವ ರಸ್ತೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2018, 19:39 IST
Last Updated 10 ಅಕ್ಟೋಬರ್ 2018, 19:39 IST
ಅಮೃತನಗರದ ಬಳಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ
ಅಮೃತನಗರದ ಬಳಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ   

ಬೆಂಗಳೂರು: ಬ್ಯಾಟರಾಯನಪುರ ವಾರ್ಡ್‌ನ ಅಮೃತಹಳ್ಳಿಯ ಈಶ್ವರ ದೇವಸ್ಥಾನದಿಂದ ಅಮೃತನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಆರು ತಿಂಗಳ ಹಿಂದೆ ಜಲ್ಲಿ ಹಾಕಲಾಗಿದೆ.

ಆದರೆ, ಈ ರಸ್ತೆಗೆ ಡಾಂಬರು ಕಾಣುವ ಭಾಗ್ಯ ಇನ್ನೂ ಒದಗಿ ಬಂದಿಲ್ಲ. ಇದ್ದ ರಸ್ತೆಯನ್ನೂ ಅಗೆದು ಹಾಕಿದ್ದರಿಂದ ಸಾರ್ವಜನಿಕರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ.

‘ಈ ರಸ್ತೆಯುದ್ದಕ್ಕೂ ಗುಂಡಿಗಳು ಸೃಷ್ಟಿಯಾಗಿದ್ದವು. ಡಾಂಬರೀಕರಣದ ಸಲುವಾಗಿ ರಸ್ತೆ ಅಗೆದು ಜಲ್ಲಿ ಕಲ್ಲು ಅಳವಡಿಸಿ, ಅದರ ಮೇಲೆ ಮಣ್ಣು ಹಾಕಿದ್ದಾರೆ. ಅಳವಡಿಸಿದ ಜಲ್ಲಿ ಚೆಲ್ಲಾಪಿಲ್ಲಿಯಾಗಿ ಗುಂಡಿಗಳು ಬಿದ್ದಿವೆ. ಗುಂಡಿಗಳು ಬಿದ್ದಿರುವುದರಿಂದ ಆಗಾಗ ಅಪಘಾತಗಳು ಸಂಭವಿಸುತ್ತಲೇ ಇವೆ’ ಎಂದು ಸ್ಥಳೀಯ ನಿವಾಸಿಗಳು ದೂರಿದರು.

ADVERTISEMENT

‘ಜಲ್ಲಿ ಸುರಿದು ಹೋದ ಬಳಿಕ ಗುತ್ತಿಗೆದಾರರು ಇತ್ತ ಸುಳಿದಿಲ್ಲ. ತ್ವರಿತ ಗತಿಯಲ್ಲಿ ಡಾಂಬರೀಕರಣ ನಡೆಸುವ ಬಗ್ಗೆ ಅಧಿಕಾರಿಗಳೂ ಲಕ್ಷ್ಯ ವಹಿಸಿಲ್ಲ. ಮಳೆ ಬಂದಾಗಲಂತೂ ಈ ರಸ್ತೆ ಕೆಸರಿನಿಂದ ಕೂಡಿರುತ್ತದೆ. ವಾಹನ ಸವಾರರು ಸಮಸ್ಯೆ ಎದುರಿಸುತ್ತಾರೆ. ಸಾರ್ವಜನಿಕರು ನಡೆದಾಡಲು ತೊಂದರೆ ಅನುಭವಿಸುವಂತಾಗಿದೆ’ ಎಂದು ಅಮೃತಹಳ್ಳಿ ನಿವಾಸಿಗಳು ಅಳಲು ತೋಡಿಕೊಂಡರು.

‘ಅಮೃತನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎಡಬದಿಯ ಪಾದಚಾರಿ ಮಾರ್ಗವನ್ನು ಮಾತ್ರ ಅಭಿವೃದ್ಧಿ ಮಾಡಲಾಗಿದೆ. ಬಲಬದಿ ಕೆರೆಗೆ ಅಳವಡಿಸಿರುವ ತಂತಿ ಬೇಲಿ ಇದೆ. ಈ ಕೆಲಸ ಅರ್ಧಕ್ಕೆ ನಿಂತಿದ್ದರಿಂದ ಪಾದಚಾರಿ ಮಾರ್ಗದ ಮೇಲೆ ಕಸ ತುಂಬಿಕೊಂಡಿದೆ. ಕೆಲವು ಕಡೆ ಚಪ್ಪಡಿ ಹಾಸೂ ಇಲ್ಲ. ರಸ್ತೆಯ ಎರಡೂ ಬದಿ ಕಳೆ ಗಿಡಗಳು ಬೆಳೆದಿವೆ’ ಎಂದು ಅವರು ದೂರಿದರು.

‘ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಹೈಕೋರ್ಟ್‌ ಚಾಟಿ ಬೀಸಿದ ಬಳಿಕವೂ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಅಭಿವೃದ್ಧಿಗೆ ಕ್ರಮ ಕೈಗೊಳ್ಳದಿದ್ದರೆ ಇನ್ನೂ ಹೆಚ್ಚು ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಕೂಡಲೇ ಅಧಿಕಾರಿಗಳು ಇತ್ತ ಗಮನ ಹರಿಸಬೇಕು’ ಎಂದು ಹೆಸರು ಹೇಳಲಿಚ್ಛಿಸದ ನಿವಾಸಿಯೊಬ್ಬರು ಆರೋಪಿಸಿದರು.

ಆಮೆಗತಿಯಲ್ಲಿ ಸೇತುವೆ ಕಾಮಗಾರಿ:‘ಅಮೃತಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅಮೃತನಗರದ 7ನೇ ಅಡ್ಡರಸ್ತೆಯ ಸಮೀಪ ಸೇತುವೆ ನಿರ್ಮಿಸಲಾಗುತ್ತಿದೆ. ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದಾಗಿ ರಸ್ತೆಯ ಡಾಂಬರೀಕರಣವೂ ವಿಳಂಬವಾಗಿದೆ’ ಎಂದು ಸ್ಥಳೀಯರು ದೂರಿದರು.

‘ದಶಕಗಳಷ್ಟು ಹಳೆಯ ಸೇತುವೆ ಕುಸಿಯುವ ಹಂತದಲ್ಲಿದೆ. ಅದರ ಪಕ್ಕದಲ್ಲಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಬ್ಯಾಟರಾಯನಪುರ ವಾರ್ಡ್‌ನ ಪಾಲಿಕೆ ಸದಸ್ಯ ಪಿ.ವಿ.ಮಂಜುನಾಥ (ಬಾಬು) ಭರವಸೆ ನೀಡಿದರು.

‘ಅಮೃತಹಳ್ಳಿ ಕೆರೆಯೇ ವಿಷಮಯ’

ಅಮೃತಹಳ್ಳಿ ಕೆರೆಗೆ ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯ ಸೇರಿ ನೀರು ವಿಷಮಯವಾಗಿದೆ. ಜೀವ ಸಂಕುಲಕ್ಕೆ ಕುತ್ತು ಬಂದಿದೆ. ಮೀನುಗಳು ಅಪಾರ ಸಂಖ್ಯೆಯಲ್ಲಿ ಸಾವಿಗೀಡಾಗಿವೆ. ವಲಸೆ ಬರುತ್ತಿದ್ದ ಪಕ್ಷಿಗಳ ಪ್ರಮಾಣವೂ ಕಡಿಮೆ ಆಗಿದೆ.

ನಡಿಗೆ ಪಥದ ಜಾಡು...: ‘ಸುಸಜ್ಜಿತ ನಡಿಗೆ ಪಥ, ಉದ್ಯಾನ, ಕೆರೆಯ ಅಭಿವೃದ್ಧಿ ಕಾಮಗಾರಿಗೆ ಸಚಿವ ಕೃಷ್ಣ ಬೈರೇಗೌಡ ಅವರು 2015ರಲ್ಲಿ ಚಾಲನೆ ನೀಡಿದ್ದರು. ಕೊಳಚೆ ನೀರು ಕೆರೆಗೆ ಸೇರದಂತೆ ಹೊರಭಾಗದಲ್ಲಿ ಚರಂಡಿ ಮೂಲಕ ನೀರನ್ನು ಬೇರ್ಪಡಿಸುವ ವ್ಯವಸ್ಥೆ ಕಲ್ಪಿಸುವುದಾಗಿಯೂ ಹೇಳಿದ್ದರು. ಆದರೆ, ಯಾವುದೂ ಅವರ ಮಾತಿನಂತೆ ನಡೆದಿಲ್ಲ’ ಎಂದು ಸ್ಥಳೀಯರು ದೂರಿದರು.

‘ನಡಿಗೆ ಪಥದ ಕಾಮಗಾರಿಯು ಅರ್ಧಕ್ಕೆ ನಿಂತಿದ್ದು, ಅದೂ ಕಳಪೆಯಾಗಿದೆ. ಕೆರೆಯ ಸುತ್ತ ಅಳವಡಿಸಿರುವ ತಂತಿ ಬೇಲಿಯೂ ಕುಸಿಯುತ್ತಿದೆ. ಪಥದಲ್ಲಿ ಕಳೆ ಗಿಡಗಳು ಬೆಳೆದಿವೆ. ಅಳವಡಿಸಿರುವ ಸ್ಲ್ಯಾಬ್‌ಗಳೂ ಹಂತ ಹಂತವಾಗಿ ಕಿತ್ತು ಹೋಗುತ್ತಿವೆ’ ಎಂದು ಹೇಳಿದರು.
ಅಂಕಿ ಅಂಶಗಳು

2 ಕಿ.ಮೀ

ಡಾಂಬರೀಕರಣಗೊಳ್ಳಬೇಕಾದ ರಸ್ತೆಯ ಉದ್ದ

₹ 5.50 ಕೋಟಿ

ರಸ್ತೆ ಅಭಿವೃದ್ಧಿ ಮತ್ತು ಮೇಲ್ಸೇತುವೆ ಕಾಮಗಾರಿಯ ಅಂದಾಜು ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.