ಬೆಂಗಳೂರು: ಬಿಎಂಟಿಸಿಯಲ್ಲಿ ಮೊದಲ ಬಾರಿಗೆ 320 ಎಲೆಕ್ಟ್ರಿಕ್ ಹವಾನಿಯಂತ್ರಿತ ಬಸ್‌ಗಳು ಸಂಚಾರಕ್ಕೆ ಸಿದ್ಧವಾಗಿವೆ. ಆದರೆ, ಚಾಲಕರು ಸಿಗದೇ 300 ಬಸ್‌ಗಳು ರಸ್ತೆಗಳಿದಿಲ್ಲ. 20 ಬಸ್‌ಗಳು ಮಾತ್ರ ಪ್ರಯೋಗಾರ್ಥ ಸಂಚಾರ ಮಾಡುತ್ತಿವೆ.
ಸದ್ಯ ಸಂಚರಿಸುವ ಬಿಎಂಟಿಸಿ ಹವಾ ನಿಯಂತ್ರಿತ ಬಸ್‌ಗಳು ಡೀಸೆಲ್ ಎಂಜಿನ್ ಹೊಂದಿರುವ ವೊಲ್ವೊ ಬಸ್‌ಗಳಾಗಿವೆ. ಎಲೆಕ್ಟ್ರಿಕ್ ಬಸ್‌ಗಳು ಹವಾ ನಿಯಂತ್ರಣವನ್ನು ಹೊಂದಿರಲಿಲ್ಲ.
ಇವಿಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರದ ಭಾರಿ ಕೈಗಾರಿಕಾ ಸಚಿವಾಲಯವು ‘ಫೇಮ್–2’ ಯೋಜನೆಯ ಮೂಲಕ ರಿಯಾಯಿತಿಯನ್ನು ನೀಡುತ್ತಿದೆ. ಆದರೆ, ಈ ರಿಯಾಯಿತಿಯನ್ನು ಖಾಸಗಿ ಕಂಪನಿಗಳಿಗಷ್ಟೇ ಪಡೆಯುವ ಅವಕಾಶವನ್ನು ನೀಡಿರುವುದರಿಂದ ಖಾಸಗಿ ಕಂಪನಿಗಳೇ ನಿಗಮಗಳಿಗೆ ಇವಿ ಬಸ್‌ಗಳನ್ನು ಒದಗಿಸಿ ನಿರ್ವಹಿಸುತ್ತಿವೆ. ಹವಾನಿಯಂತ್ರಿತ ಇವಿ ಬಸ್‌ಗಳನ್ನು ಬಿಎಂಟಿಸಿಗೆ ಒದಗಿಸುವ ಗುತ್ತಿಗೆಯನ್ನು ಅಶೋಕ್ ಲೇಲ್ಯಾಂಡ್ ಅಡಿಯಲ್ಲಿರುವ ಒಎಚ್‌ಎಂ (ಓಂ) ಸಂಸ್ಥೆ ಪಡೆದಿದೆ.
ಬಿಎಂಟಿಸಿಯು ಪ್ರತಿ ಕಿಲೋಮೀಟರ್‌ಗೆ ₹ 65.8 ಬಾಡಿಗೆ ನೀಡಲಿದೆ. ಸದ್ಯ ಐಟಿಪಿಎಲ್ ನಿಲ್ದಾಣದಿಂದ 20 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಐಟಿಪಿಎಲ್, ಕೆಂಪೇಗೌಡ ಬಸ್ ನಿಲ್ದಾಣ, ಕತ್ರಿಗುಪ್ಪೆ ಮತ್ತು ಹೆಬ್ಬಾಳ ಡಿಪೊಗಳಿಂದ ಎಲ್ಲ 320 ಬಸ್‌ಗಳು ಸಂಚರಿಸಲಿವೆ.
ಇವಿ ಬಸ್‌ಗಳಲ್ಲಿ ನಿರ್ವಾಹಕರು ಬಿಎಂಟಿಸಿ ಸಂಸ್ಥೆಗೆ ಸೇರಿದವರಾಗಿರುತ್ತಾರೆ. ಚಾಲಕರು ಗುತ್ತಿಗೆ ಪಡೆದ ಕಂಪನಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್‌ಗಳಿಗೆ ನಿರ್ವಾಹಕರ ಕೊರತೆ ಇಲ್ಲ. ಆದರೆ, ಚಾಲಕರು ಸಿಗದೇ ಇರುವುದರಿಂದ ಬಸ್‌ಗಳ ಸಂಚಾರ ಆರಂಭವಾಗಿಲ್ಲ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
‘ದಿನಕ್ಕೆ 9 ಗಂಟೆ ಕೆಲಸ ಮತ್ತು ಹೆಚ್ಚಿನ ಅವಧಿ (ಒಟಿ) ಕೆಲಸಕ್ಕೆ ಹೆಚ್ಚುವರಿ ಸಂಭಾವನೆ ನೀಡಲಾಗುವುದು’ ಎಂದು ಜಾಹೀರಾತು ನೀಡಲಾಗಿದೆ. ಆಸಕ್ತರು ಸಂಪರ್ಕಿಸುತ್ತಿದ್ದಾರೆ. ಸದ್ಯದಲ್ಲಿಯೇ ಎಲ್ಲ ಬಸ್‌ಗಳ ಸಂಚಾರ ಆರಂಭವಾಗಲಿದೆ’ ಎಂದು ಗುತ್ತಿಗೆ ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.
‘ಚಾಲಕರಿಗೆ ₹ 27,600 ವೇತನ, ₹ 125 ಒಟಿ ನೀಡುತ್ತಾರೆ. ಈ ವೇತನಕ್ಕೆ ದುಡಿಯಲು ಯುವತಲೆಮಾರಿನ ಚಾಲಕರು ತಯಾರು ಇರುವುದಿಲ್ಲ’ ಎಂದು ಬಿಎಂಟಿಸಿ ಚಾಲಕರೊಬ್ಬರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.