ADVERTISEMENT

‘ಅಲ್‌ಕೈದಾ’ ಸೇರಲು ತಯಾರಿ: ಮತ್ತೊಬ್ಬ ಶಂಕಿತ ಉಗ್ರ ಬಂಧನ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 21:05 IST
Last Updated 26 ಜುಲೈ 2022, 21:05 IST
ಅಬ್ದುಲ್ ಅಲೀಂ ಮಂಡಲ್
ಅಬ್ದುಲ್ ಅಲೀಂ ಮಂಡಲ್   

ಬೆಂಗಳೂರು: ‘ಅಲ್‌ಕೈದಾ’ ಉಗ್ರ ಸಂಘಟನೆಗೆ ನೇಮಕವಾಗಿ ಅಫ್ಗಾನಿಸ್ತಾನಕ್ಕೆ ಹೋಗಲು ಸಿದ್ಧನಾಗಿದ್ದ ಮತ್ತೊಬ್ಬ ಶಂಕಿತ ಅಬ್ದುಲ್ ಅಲೀಂ ಮಂಡಲ್ ಅಲಿಯಾಸ್ ಜುಬಾನನ್ನು (24) ನಗರದ ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

‘ಪಶ್ಚಿಮ ಬಂಗಾಳದ ಅಬ್ದುಲ್ ಅಲೀಂ ತಮಿಳುನಾಡಿನ ಸೇಲಂನಲ್ಲಿರುವ ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಬಡ ಕುಟುಂಬದ ಈತ, ಧರ್ಮ ರಕ್ಷಣೆ ಹಾಗೂ ಹಣದ ಆಸೆಗಾಗಿ ‘ಅಲ್‌ಕೈದಾ’ ಸಂಘಟನೆಗೆ ಸೇರಲು ಒಪ್ಪಿಕೊಂಡಿದ್ದ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಬೆಂಗಳೂರಿನ ತಿಲಕ್‌ನಗರದಲ್ಲಿ ಜುಲೈ 24ರಂದು ಬಂಧಿಸಲಾಗಿರುವ ಶಂಕಿತ ಅಖ್ತರ್ ಹುಸೇನ್ ಲಷ್ಕರ್‌ ಜೊತೆ ಅಬ್ದುಲ್ ಅಲೀಂ ಒಡನಾಟ ಹೊಂದಿದ್ದ. ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಗೆ ಗೊತ್ತಾಗದಂತೆ ಅಲ್‌ಕೈದಾ ಉಗ್ರರನ್ನು ಸಂಪರ್ಕಿಸಿ ಸಂಘಟನೆಗೆ ನೇಮಕವಾಗಿದ್ದ ಇವರಿಬ್ಬರು ಜಮ್ಮು–ಕಾಶ್ಮೀರ ಮೂಲಕ ಅಫ್ಗಾನಿಸ್ತಾನಕ್ಕೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು.’

ADVERTISEMENT

‘ಅಖ್ತರ್‌ನನ್ನು ಬಂಧಿಸುತ್ತಿದ್ದಂತೆಅಬ್ದುಲ್ ಅಲೀಂ ಬಗ್ಗೆ ಮಾಹಿತಿ ಸಿಕ್ಕಿತ್ತು. ತಮಿಳುನಾಡಿಗೆ ಹೋಗಿದ್ದ ವಿಶೇಷ ತಂಡ, ಅಬ್ದುಲ್‌ ಅಲೀಂನನ್ನು ಬಂಧಿಸಿ ನಗರಕ್ಕೆ ಕರೆತಂದಿದೆ. ಈತನನ್ನು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ, ವಿಚಾರಣೆಗಾಗಿ 10 ದಿನ
ಕಸ್ಟಡಿಗೆ ಪಡೆಯಲಾಗಿದೆ’ ಎಂದಿವೆ.

ಸ್ವಾಗತಿಸಲು ಸಜ್ಜಾಗಿದ್ದ ಉಗ್ರರು: ‘ಅಖ್ತರ್ ಹಾಗೂ ಅಬ್ದುಲ್‌ ಅಲೀಂನನ್ನು ಸಂಘಟನೆಗೆ ಸೇರಿಸಿಕೊಳ್ಳಲು ಮುಂದಾಗಿದ್ದ ಉಗ್ರರು, ಅವರ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದರು. ಜಮ್ಮು–ಕಾಶ್ಮೀರ ಗಡಿಮೂಲಕ ಅವರಿಬ್ಬರನ್ನು ಪಾಕಿಸ್ತಾನಕ್ಕೆ ಕರೆಸಿ, ಅಲ್ಲಿಂದ ಅಫ್ಗಾನಿಸ್ತಾನಕ್ಕೆ ಕರೆದೊಯ್ಯಲು ಉಗ್ರರು ಯೋಚಿಸಿದ್ದರು. ಅಷ್ಟರಲ್ಲೇ ಶಂಕಿತರು ನಮ್ಮ ಕೈಗೆ ಸಿಕ್ಕಿಬಿದ್ದರು’ ಎಂದು ಸಿಸಿಬಿ ಮೂಲಗಳು ಹೇಳಿವೆ.

ಅಖ್ತರ್‌ಗೆ ಅಲ್‌ಕೈದಾ ಪತ್ರ?

ಶಂಕಿತ ಅಖ್ತರ್‌ಗೆ ಅಲ್‌ಕೈದಾ ಉಗ್ರರು ಬರೆದಿದ್ದಾರೆ ಎನ್ನಲಾದ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ, ಈ ಪತ್ರದ ಬಗ್ಗೆ ಮಾಹಿತಿ ಇಲ್ಲವೆಂದು ಸಿಸಿಬಿ ಮೂಲಗಳು ಹೇಳಿವೆ.

‘ಪ್ರವಾದಿ ಅವರನ್ನು ನಾವು ರಕ್ಷಿಸಲು ವಿಫಲರಾದರೆ, ತಾಯಿಯನ್ನು ಕಳೆದು ಕೊಂಡಂತೆ’ ಎಂಬ ಶೀರ್ಷಿಕೆಯಡಿ ಪತ್ರವಿದೆ. ‘ಪ್ರಪಂಚದ ಎಲ್ಲರಿಗೂ ನಾವು ಎಚ್ಚರಿಕೆ ನೀಡುತ್ತಿದ್ದೇವೆ. ಆದರೆ, ಹಿಂದುತ್ವ ಭಯೋತ್ಪಾದಕರು ಭಾರತವನ್ನು ಆವರಿಸಿಕೊಳ್ಳುತ್ತಿದ್ದಾರೆ. ಪ್ರವಾದಿಗಳ ಪ್ರತಿಷ್ಠೆಗಾಗಿ ನಾವು ಹೋರಾಡಬೇಕಿದೆ. ಈ ಮೂಲಕ ಪ್ರವಾದಿಗಳಿಗೆ ಗೌರವ ಸಲ್ಲಿಸಬೇಕು’ ಎಂದೂ ಪತ್ರದಲ್ಲಿ ಬರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.