ADVERTISEMENT

ರಾಜರಾಜೇಶ್ವರಿನಗರ: ದುಃಸ್ಥಿತಿಯಲ್ಲಿ ಬಾಲಕೃಷ್ಣ ರಂಗಮಂದಿರ

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 19:54 IST
Last Updated 23 ಜನವರಿ 2022, 19:54 IST
ಟಿ.ಎನ್‌. ಬಾಲಕೃಷ್ಣ ರಂಗಮಂದಿರದಲ್ಲಿ ಒಡೆದಿರುವ ಕಿಟಕಿ ಗಾಜುಗಳು
ಟಿ.ಎನ್‌. ಬಾಲಕೃಷ್ಣ ರಂಗಮಂದಿರದಲ್ಲಿ ಒಡೆದಿರುವ ಕಿಟಕಿ ಗಾಜುಗಳು   

ರಾಜರಾಜೇಶ್ವರಿನಗರ: ಇಲ್ಲಿನ ಬಿಇಎಂಎಲ್ ಬಡಾವಣೆಯ ಟಿ.ಎನ್.ಬಾಲಕೃಷ್ಣ ರಂಗಮಂದಿರ ನಿರ್ವಹಣೆ ಕೊರತೆಯಿಂದ ದುಃಸ್ಥಿತಿಯಲ್ಲಿದೆ.

ಬಿಇಎಂಎಲ್ ಸಂಸ್ಥೆಯು ತನ್ನ ನೌಕರರಿಗಾಗಿ ಬಿಇಎಂಎಲ್ ಬಡಾವಣೆ ನಿರ್ಮಿಸಿ ನಿವೇಶನ ಹಂಚಿಕೆ ಮಾಡಿತ್ತು. ಅದೇ ಸಂದರ್ಭದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಸ್ಥಳ ಮೀಸಲಿಟ್ಟು ಟಿ.ಎನ್.ಬಾಲಕೃಷ್ಣ ರಂಗಮಂದಿರ ನಿರ್ಮಿಸಿ ರಾಜರಾಜೇಶ್ವರಿ ನಗರಸಭೆಗೆ ಹಸ್ತಾಂತರ ಮಾಡಿತ್ತು.

ಬಿಇಎಂಎಲ್ ಕಾರ್ಮಿಕರ ಸಹಕಾರ ಸಂಘವು, ಸಾಂಸ್ಕೃತಿಕ, ಧಾರ್ಮಿಕ, ಗ್ರಾಮೀಣ, ಜಾನಪದ ಕಲೆ, ಕ್ರೀಡೆಗಳ ಪ್ರದರ್ಶನಕ್ಕೆಂದು ಬಾಲಕೃಷ್ಣ ಬಯಲು ರಂಗಮಂದಿರ ನಿರ್ಮಿಸಿ 2000ರ ಏಪ್ರಿಲ್‌ 9ರಂದು ಲೋಕಾರ್ಪಣೆ ಮಾಡಿತು.
ಎಲ್ಲ ಸಾಂಸ್ಕೃತಿಕ, ಗ್ರಾಮೀಣ ಕಲೆಗಳ ಪ್ರದರ್ಶನ, ಸಂತೆ, ವಿವಿಧ ಉತ್ಸವ, ಪೌರಾಣಿಕ, ಜಾನಪದ ನಾಟಕ ಪ್ರದರ್ಶನ ಹಾಗೂ ಶಾಲಾ-ಕಾಲೇಜು ಉತ್ಸವ ನಡೆಸಲು ರಾಜರಾಜೇಶ್ವರಿನಗರಕ್ಕೆ ಪ್ರಮುಖ ಸ್ಥಳ ಬಾಲಕೃಷ್ಣ ಬಯಲು ರಂಗಮಂದಿರವಾಗಿದೆ.

ADVERTISEMENT

ಆದರೆ, ಹೆಸರಿಗೆ ಮಾತ್ರ ಬಾಲಕೃಷ್ಣ ರಂಗಮಂದಿರ ಎಂಬ ದೊಡ್ಡ ನಾಮಫಲಕವಿದೆಯೇ ಹೊರತು, ನಿರ್ವಹಣೆಯ ಕೊರತೆಯಿಂದಾಗಿ ಅವ್ಯವಸ್ಥೆಯಿಂದ ಕೂಡಿದೆ.

ಬಂದೋಬಸ್ತ್ ವ್ಯವಸ್ಥೆ ಇಲ್ಲದ ಕಾರಣ ಮಾದಕ ವ್ಯಸನಿಗಳು ಸಿಗರೇಟ್, ಗಾಂಜಾ ಸೇದುವ ಸ್ಥಳವಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಮಾರಕಾಸ್ತ್ರಗಳಿಂದ ಬೆದರಿಸುತ್ತಾರೆ ಎಂದು ಸ್ಥಳೀಯ ಹಿರಿಯ ನಾಗರಿಕರು ಬೇಸರ ವ್ಯಕ್ತಪಡಿಸುತ್ತಾರೆ.

ರಂಗಮಂದಿರದ ರಕ್ಷಣೆಗಾಗಿ ಅಳವಡಿಸಿರುವ ತಂತಿ ಬೇಲಿ ಕಿತ್ತುಹೋಗಿವೆ. ಆವರಣದಲ್ಲೇ ಕಸದ ರಾಶಿ ಇದೆ. ಕಿಟಕಿ ಗಾಜುಗಳು ಸಹ ಒಡೆದುಹೋಗಿವೆ. ರಂಗಮಂದಿರದ ಹಿಂಭಾಗವು ಮೂತ್ರ ವಿಸರ್ಜನೆಯ ಸ್ಥಳವಾಗಿದೆ. ರಂಗಮಂದಿರದ ಒಳಾಂಗಣದಲ್ಲಿ ಹಾಕಲಾಗಿರುವ ವಿದ್ಯುತ್ ವೈರ್‌ಗಳು, ಸ್ವಿಚ್‍ಗಳು ಹಾಳಾಗಿವೆ. ಕೊಳವೆ ಬಾವಿ ಕೆಟ್ಟು ಹೋಗಿದ್ದು, ದುರಸ್ತಿ ಮಾಡದಿರುವುದರಿಂದ ಕಾರ್ಯಕ್ರಮಗಳನ್ನು ನಡೆಸುವ ಸಂದರ್ಭಗಳಲ್ಲಿ ಹೊರಗಿನಿಂದ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ನಾಗರಿಕರು ದೂರಿದ್ದಾರೆ.

ರಂಗಮಂದಿರದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಎಂದಿನಂತೆ ಸುಗಮವಾಗಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಅವಕಾಶ ಕಲ್ಪಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಬಿಬಿಎಂಪಿ (ಯೋಜನೆ) ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಮೋಹನ ಸಿ. ವಂಡರಕೇರಿ ಮಾತನಾಡಿ, ’ರಂಗಮಂದಿರದಲ್ಲಿ ಕಿತ್ತುಹೋಗಿರುವ ಕಿಟಕಿ, ಶೌಚಾಲಯ ನಿರ್ಮಾಣ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ₹ 5 ಲಕ್ಷದ ಟೆಂಡರ್ ಕರೆಯಲಾಗುತ್ತಿದೆ‘ ಎಂದರು.

ಬಿಬಿಎಂಪಿ ಪ್ರಭಾರ ಕಾರ್ಯಪಾಲಕ ಎಂಜಿನಿಯರ್ ಬಸವರಾಜು ಮಾತನಾಡಿ ‘ರಂಗಮಂದಿರ ಪುನರ್ ನವೀಕರಣ ಕಾರ್ಯವನ್ನು ₹15 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲು ಯೋಜನೆ ಸಿದ್ಧಪಡಿಸಿದ್ದು, ಕೇಂದ್ರ ಕಚೇರಿ ಅನುಮತಿಗಾಗಿ ಕಳುಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.