ADVERTISEMENT

‘ಪಾಳು ಬಿದ್ದ ಆಸ್ಪತ್ರೆ ಕಟ್ಟಡ ಕೋವಿಡ್‌ ಕೇಂದ್ರ ಮಾಡಿ’

ಆರ್‌.ಆರ್‌.ನಗರದ ನಿವಾಸಿಗಳ ಒತ್ತಾಯ l ಸೇವೆಗಾಗಿ 100 ಸ್ವಯಂ ಸೇವಕರು ಸಿದ್ಧ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 21:37 IST
Last Updated 30 ಏಪ್ರಿಲ್ 2021, 21:37 IST
ಹಳೇ ಆಸ್ಪತ್ರೆ ಕಟ್ಟಡ
ಹಳೇ ಆಸ್ಪತ್ರೆ ಕಟ್ಟಡ   

ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಬಳಕೆಯಾಗದೇ ಪಾಳು ಬಿದ್ದಿರುವ ಆಸ್ಪತ್ರೆ ಕಟ್ಟಡವನ್ನು ಕೋವಿಡ್‌ ಚಿಕಿತ್ಸೆಗಾಗಿ ಬಳಸಿಕೊಳ್ಳಬೇಕು ಎಂದು ಸಾರ್ವಜನಿಕರು ಸರ್ಕಾರವನ್ನುಒತ್ತಾಯಿಸಿದ್ದಾರೆ.

ಪಾಳು ಬಿದ್ದಿರುವ ಕಟ್ಟಡ ಹಿಂದೆ ಮಕ್ಕಳ ಆಸ್ಪತ್ರೆಯಾಗಿತ್ತು. ಬಳಿಕ ಇದನ್ನು ಮಣಿಪಾಲ ಆಸ್ಪತ್ರೆ ಸಮೂಹಕ್ಕೆ ಪರಭಾರೆ ಮಾಡಲಾಗಿತ್ತು. ಅವರು ಸ್ವಲ್ಪ ವರ್ಷ ಆಸ್ಪತ್ರೆ ನಡೆಸಿ ಬಳಿಕ ಮುಚ್ಚಿದರು. ಈಗ ಅದನ್ನು ಡೆವಲಪರ್‌ ಒಬ್ಬರಿಗೆ ನೀಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

‘ಪಾಳುಬಿದ್ದ ಆಸ್ಪತ್ರೆಯನ್ನು ಆರು ತಿಂಗಳು ಅಥವಾ ವರ್ಷದ ಮಟ್ಟಿಗೆ ಪಡೆದು 400 ಹಾಸಿಗೆಗಳ ಕೋವಿಡ್‌ ಚಿಕಿತ್ಸಾ ಕೇಂದ್ರವಾಗಿ ಪರಿವರ್ತಿಸಬಹುದು ಅಥವಾ ಮೇಕ್‌ ಶಿಫ್ಟ್‌ ಆಗಿಯೂ ಬಳಸಿಕೊಳ್ಳಲು ಸಾಧ್ಯವಿದೆ’ ಎಂದು ವೈದ್ಯ ಡಾ.ರಾಘವೇಂದ್ರ ರಾವ್‌ ತಿಳಿಸಿದ್ದಾರೆ.

ADVERTISEMENT

‘ಕಲ್ಯಾಣ ಮಂಟಪ ಇತ್ಯಾದಿಗಳನ್ನು ಪಡೆದುಕೊಳ್ಳುವುದಕ್ಕಿಂತ ಈ ಕಟ್ಟಡವನ್ನು ಸ್ವಚ್ಛ ಮಾಡಿ ಬಳಸಿಕೊಳ್ಳಬಹುದು. ಇಲ್ಲಿ ಶೌಚಾಲಯವನ್ನು ಹೊಂದಿದ ಸಿಂಗಲ್‌ ರೂಮ್‌ಗಳಿವೆ. ಐಸೋಲೇಷನ್‌ ಮಾಡುವುದಕ್ಕೂ ಸುಲಭವಾಗುತ್ತದೆ. ಈ ಭಾಗದಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಇದನ್ನು ಸರ್ಕಾರ ಪಡೆದುಕೊಂಡರೆ ಸುಲಭವಾಗುತ್ತದೆ’ ಎಂದು ಅವರು ಹೇಳಿದರು.

‘ಒಂದು ದೊಡ್ಡ ಆಸ್ಪತ್ರೆಯಲ್ಲಿ ಇರುವ ಎಲ್ಲ ಸೌಲಭ್ಯಗಳು ಇವೆ. ಆಕ್ಸಿಜನ್‌ ಪೂರೈಕೆಗೆ ಅಗತ್ಯ ಸೌಕರ್ಯಗಳಿವೆ. ಹೀಗಾಗಿ ಅತಿ ಸುಲಭವಾಗಿ ಕೋವಿಡ್‌ ಕೇಂದ್ರವಾಗಿ ಪರಿವರ್ತನೆ ಮಾಡಬಹುದು. ಈ ಬಗ್ಗೆ ಡೆವಲಪರ್‌ಗೆ ಹೇಳಿದ್ದೇವೆ. ಅವರಿಗೆ ಆಸಕ್ತಿ ಇದ್ದಂತಿಲ್ಲ. ಸರ್ಕಾರ ಮತ್ತು ಶಾಸಕರನ್ನು ಸಂಪರ್ಕಿಸಿ ಮಾತನಾಡಿಸುವ ಪ್ರಯತ್ನ ನಡೆದಿದೆ’ ಎಂದು ಸ್ಥಳೀಯರೊಬ್ಬರು ಹೇಳಿದರು.

ಸರ್ಕಾರ ಮಧ್ಯ ಪ್ರವೇಶಿಸಿದರೆ ದೊಡ್ಡ ಕೋವಿಡ್ ಕೇರ್‌ ಸೆಂಟರ್‌ ಆಗುತ್ತದೆ. ತುಂಬಾ ರೋಗಿಗಳಿಗೆ ಅನುಕೂಲವಾಗುತ್ತದೆ. ಸರ್ಕಾರವೇ ಇದನ್ನು ನಡೆಸಬಹುದು. ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡಲು ಸ್ಥಳೀಯ ನಿವಾಸಿಗಳು ಸಿದ್ಧರಿದ್ದಾರೆ. ಒಂದು ವೇಳೆ ಸರ್ಕಾರದ ಕೈಯಲ್ಲಿ ಆಗುವುದಿಲ್ಲ ಎಂದರೆ ರೆಸಿಡೆನ್ಸ್‌ ವೆಲ್‌ಫೇರ್ ಅಸೋಸಿಯೇಷನ್‌ನವರೇ ನಡೆಸಲು ಸಿದ್ಧರಿದ್ದೇವೆ. ಈಗಾಗಲೇ ರಾಷ್ಟ್ರೋತ್ಥಾನದವರು 300 ಹಾಸಿಗೆಗಳ ಕೋವಿಡ್‌ ಕೇರ್‌ ಸೆಂಟರ್‌ ಮಾಡಿದ್ದಾರೆ. ಅದರಿಂದ ಅನುಕೂಲ ಆಗಿದೆ ಎಂದು ಅವರು ಹೇಳಿದರು.

ಸಚಿವರ ಜತೆ ಮಾತುಕತೆ
ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರಿಗೆ ಈ ಕುರಿತು ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರ್ಕಾರ ಒಪ್ಪಿಗೆ ನೀಡಿ ಡೆವಲಪರ್‌ ಕಡೆಯಿಂದ ಬಿಡಿಸಿಕೊಟ್ಟರೆ 100 ಕಾರ್ಯಕರ್ತರು ಹಗಲಿರಳು ಕೆಲಸ ಮಾಡಲು ಸಿದ್ಧರಿದ್ದಾರೆ. ಸಚಿವರ ಜತೆ ಚರ್ಚಿಸುತ್ತೇವೆ ಎಂದು ವಿಧಾನಪರಿಷತ್‌ ಸದಸ್ಯ ತುಳಸಿ ಮುನಿರಾಜುಗೌಡ ಹೇಳಿದ್ದಾರೆ.

ಇದನ್ನು 6 ತಿಂಗಳು ಅಥವಾ ಒಂದು ವರ್ಷದ ಮಟ್ಟಿಗೆ ಪಡೆದು ಬಳಿಕ ಅವರಿಗೇ ಹಿಂತಿರುಗಿಸಬಹುದು. ಈ ಕಟ್ಟಡದಲ್ಲಿ ವ್ಯವಸ್ಥೆ ಮಾಡಲು ಸುಲಭ. ಇದಕ್ಕೆ ಶಾಸಕರ ನಿಧಿಯಿಂದ ಹಣ ಕೊಡಲು ಅವಕಾಶವಿದ್ದರೆ, ಕೊಡಲು ಸಿದ್ಧವಿದ್ದೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.