ADVERTISEMENT

‘ಭೂಮಿ ಕೊಡಿ ಇಲ್ಲವೇ ಪರಿಹಾರ ನೀಡಿ’

ಜಮೀನು ಕಳೆದುಕೊಂಡು ಸಂಕಷ್ಟಕ್ಕೆ ಒಳಗಾದ ರೈತರ ಅಳಲು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2019, 18:21 IST
Last Updated 9 ಮಾರ್ಚ್ 2019, 18:21 IST
ಭೂಸ್ವಾಧೀನ ಪಡಿಸಿಕೊಂಡಿರುವ ಜಮೀನುಗಳ ರೈತರಿಗೆ ಪರಿಹಾರ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ರೈತರು ಆನಂದರಾವ್ ವೃತ್ತದ ಬಳಿ ಶನಿವಾರ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ
ಭೂಸ್ವಾಧೀನ ಪಡಿಸಿಕೊಂಡಿರುವ ಜಮೀನುಗಳ ರೈತರಿಗೆ ಪರಿಹಾರ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ರೈತರು ಆನಂದರಾವ್ ವೃತ್ತದ ಬಳಿ ಶನಿವಾರ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಆರೋಗ್ಯ ಸಚಿವ ಶಿವಾನಂದ ಪಾಟೀಲ ಮಾಲೀಕತ್ವದ ಸಿದ್ಧೇಶ್ವರ ಸಕ್ಕರೆ ಕಂಪನಿ ನಿರ್ಮಾಣಕ್ಕೆ ಬಸವನ ಬಾಗೇವಾಡಿಯ ತೆಲಗಿ ಹಾಗೂ ಅಂಡಲಗೇರಿ ಗ್ರಾಮದ ರೈತರ ಭೂಮಿಯನ್ನು ಕೆಐಎಡಿಬಿಯು ಸ್ವಾಧೀನ ಮಾಡಿಕೊಂಡು ವಂಚಿಸಿದೆ’ ಎಂದು ಭೂಮಿ ಕಳೆದುಕೊಂಡ ರೈತರು ದೂರಿದರು.

ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ರೈತರು ಆನಂದರಾವ್‌ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಸರ್ಕಾರ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

‘ಹತ್ತು ವರ್ಷಗಳ ಹಿಂದೆ 20 ರೈತರ 130 ಎಕರೆ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಶಪಡಿಸಿಕೊಂಡಿದೆ. ಸಚಿವರು ₹ 21 ಕೋಟಿ ಪರಿಹಾರ ಕೊಡುವುದಾಗಿ ಹೇಳಿ ₹ 40 ಲಕ್ಷ ಮಾತ್ರ ನೀಡಿದ್ದಾರೆ. ಉಳಿದದ್ದು ಕೇಳಿದರೆ ಧಮಕಿ ಹಾಕುತ್ತಾರೆ’ ಎಂದು ಅಳಲು ತೋಡಿಕೊಂಡರು.

ADVERTISEMENT

‘ಸಿದ್ಧೇಶ್ವರ ಸಕ್ಕರೆ ಕಂಪನಿ ಪರವಾನಗಿ ರದ್ದಾಗಿದೆ. ಅತ್ತ ಕಂಪನಿಯೂ ನಿರ್ಮಾಣವಾಗಿಲ್ಲ. ಇತ್ತ ಜಮೀನಿಗೆ ಪರಿಹಾರವೂ ಇಲ್ಲ. ಮಂಡಳಿಯಿಂದ ಸಚಿವರಿಗೆ ಹಲವು ಬಾರಿ ನೋಟಿಸ್‌ ನೀಡಿದ್ದರೂ‌ ಉತ್ತರಿಸಿಲ್ಲ. ಕೂಡಲೇ ಕಂಪನಿ ಮತ್ತು ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಬೆಳ್ಳುಬ್ಬಿ ಆಗ್ರಹಿಸಿದರು.

‘2017ರಲ್ಲಿ ತಹಶೀಲ್ದಾರರು ಕೆಐಎಡಿಬಿಗೆ ಸೇರಿದ ಜಮೀನು ಎಂದು ಪಹಣಿ ಪತ್ರದಲ್ಲಿ ಮುದ್ರೆ ಒತ್ತಿದ್ದಾರೆ. ಆ ಜಮೀನಿಗೆ ಸರ್ಕಾರದ ಸೌಲಭ್ಯ ಸಿಗದಂತಾಗಿದೆ. ಮುಖ್ಯಮಂತ್ರಿ, ಕೈಗಾರಿಕಾ ಸಚಿವರಿಗೆ ಮತ್ತು ಮಂಡಳಿಗೆ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.