ADVERTISEMENT

ಪಟ್ಟಿಯಲ್ಲಿ ಹೆಸರಿಲ್ಲ: ಬಂದ ದಾರಿಗೆ ಸುಂಕವಿಲ್ಲ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 20:11 IST
Last Updated 18 ಏಪ್ರಿಲ್ 2019, 20:11 IST
ಪುಲಿಕೇಶಿನಗರದ ಮತಗಟ್ಟೆಯೊಂದರಲ್ಲಿ ಮತದಾರರ ಗುರುತಿನ ಚೀಟಿ ಇದ್ದರೂ ಮತ ಹಾಕಲು ಅವಕಾಶ ಸಿಗದವರು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ 
ಪುಲಿಕೇಶಿನಗರದ ಮತಗಟ್ಟೆಯೊಂದರಲ್ಲಿ ಮತದಾರರ ಗುರುತಿನ ಚೀಟಿ ಇದ್ದರೂ ಮತ ಹಾಕಲು ಅವಕಾಶ ಸಿಗದವರು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ    

ಬೆಂಗಳೂರು: ನಗರದ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ನೂರಾರು ಮಂದಿ ಮತದಾನದಿಂದ ವಂಚಿತರಾದರು. ಮತಗಟ್ಟೆಯನ್ನು ಹುಡುಕಿ ಬಂದ ನೂರಾರು ಮಂದಿ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮತ ಚಲಾಯಿಸದೆಯೇ ಹಿಂದಿರುಗಬೇಕಾಯಿತು.

ತಮ್ಮ ಗಮನಕ್ಕೆ ತಾರದೆಯೇ ಮತದಾರರ ಪಟ್ಟಿಯಿಂದ ಹೆಸರು ತೆಗೆಸಿದ ಬಗ್ಗೆ ಮತದಾರರು ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪದ್ಮನಾಭನಗರದ ಮತಗಟ್ಟೆ 172ರಲ್ಲಿ ಮತದಾನ ಮಾಡಲು 15ಕ್ಕೂ ಹೆಚ್ಚು ಮಂದಿ ಕುಟುಂಬ ಸಮೇತ
ರಾಗಿ ಬಂದಿದ್ದರು. ಮತದಾರರ ಪಟ್ಟಿಯಲ್ಲಿ ಹೆಸರು ಅಳಿಸಿದ್ದನ್ನು ಕಂಡು ಗಾಬರಿಯಾದರು.

ADVERTISEMENT

‘ನಮ್ಮ ಬಳಿ ಚುನಾವಣಾ ಆಯೋಗದ ಗುರುತಿನ ಚೀಟಿ, ಆಧಾರ್, ಪ್ಯಾನ್ ಕಾರ್ಡ್ ಸೇರಿದಂತೆ ಎಲ್ಲ ದಾಖಲೆಗಳೂ ಇವೆ. ಮತ ಚಲಾಯಿಸಲು ಅವಕಾಶ ನೀಡಿ’ ಎಂದು ಅಧಿಕಾರಿಗಳನ್ನು ಕೋರಿದರು.

‘ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರಿಂದ ಅವಕಾಶ ನೀಡುವುದಿಲ್ಲ’ ಎಂದು ಅಧಿಕಾರಿಗಳು ನಿರಾಕರಿಸಿದರು. ಹೀಗಾಗಿ, ಮತದಾನ ಮಾಡದೇ ನಿರಾಸೆಯಿಂದ ವಾಪಸು ಹೋದರು.

‘ಕುಟುಂಬದವರೆಲ್ಲ ಮತದಾನ ಮಾಡಲು ಬಂದಿದ್ದೇವೆ. ಮಗ ಹಾಗೂ ಮಗಳು ಮತ ಚಲಾಯಿಸಿದರು.ಎಲ್ಲರೂ ಒಂದೇ ಮನೆಯಲ್ಲಿದ್ದರೂ ನನಗೆ ಮಾತ್ರ ಅವಕಾಶ ಸಿಕ್ಕಿಲ್ಲ’ ಎಂದು ವೃದ್ಧೆ ವಿಜಯಲಕ್ಷ್ಮಿ ಬೇಸರ ವ್ಯಕ್ತಪಡಿಸಿದರು.

‘ನಾನು ನಿವೃತ್ತ ಶಿಕ್ಷಕಿ. ನಾನೂ ಚುನಾವಣಾ ಕೆಲಸ ಮಾಡಿದ್ದೇನೆ. ಹೆಸರನ್ನು ಡಿಲೀಟ್ ಮಾಡಿದ ಬಗ್ಗೆ ವಿಚಾರಿಸಿದರೆ ಮತಗಟ್ಟೆಯ ಅಧಿಕಾರಿಗಳು ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ‘ಎಂದರು.

ಸಿವಿಲ್ ಎಂಜಿನಿಯರ್ ಜಿ.ವಿ.ನಂಜುಂಡೇಶ್ವರ, ‘ವಿಧಾನಸಭಾ ಚುನಾವಣೆಗೆ ಮತದಾನ ಮಾಡಿದ್ದೇನೆ. ಈಗ ಏಕಾಏಕಿ ನನ್ನ ಹೆಸರು ಡಿಲೀಟ್ ಮಾಡಲಾಗಿದೆ. ಅಧಿಕಾರಿಗಳು ಕಾರಣ ತಿಳಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಾಲ್ಗುಡಿ ಡೇಸ್’ ಧಾರಾವಾಹಿ ಕಲಾ ನಿರ್ದೇಶಕ ಜಾನ್‌ ದೇವರಾಜ್‌ ಸೇರಿದಂತೆ ಜಯನಗರದಲ್ಲಿ 60 ಮಂದಿ ಮತದಾನದಿಂದ ವಂಚಿತರಾಗಿದ್ದಾರೆ. ಒಂದೇ ಅಪಾರ್ಟ್‌ಮೆಂಟ್‌ನ 20 ಮಂದಿಗೆ ಹಕ್ಕು ಚಲಾಯಿಸಲು ಸಾಧ್ಯವಾಗಿಲ್ಲ. ಎಲ್‌ಐಸಿ ಲೇಔಟ್‌ನ ಸಪ್ತಗಿರಿ ಅಪಾರ್ಟ್‌ಮೆಂಟ್‌ ಸಮುಚ್ಚಯದ 20 ಮಂದಿಗೇ ಮತಚೀಟಿ ಇದ್ದರೂ ಮತದಾನದ ಅವಕಾಶ ಸಿಕ್ಕಿಲ್ಲ. ಬಿಟಿಎಂ ಬಡಾವಣೆಯಲ್ಲೂ ಅನೇಕರ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಅನೇಕ ಮತದಾರರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ತೋಡಿಕೊಂಡಿದ್ದಾರೆ.

‘ನಾನು ಮತದಾನ ಮಾಡಲು 300 ಕಿ.ಮೀ ದೂರದಿಂದ ಬಂದಿದ್ದೇನೆ. ಆದರು ವೋಟು ಹಾಕಲು ಆಗಿಲ್ಲ. ಚುನಾ
ವಣಾ ಆಯೋಗದವರೇ ಮತದಾನ ಮಾಡಿ ಎಂದು ಜಾಗೃತಿ ಮೂಡಿಸುತ್ತಾರೆ. ಹೇಳದೇ ಕೇಳದೆ ಹೆಸರು ತೆಗೆಯಿಸಿದರೆ ಹಕ್ಕು ಚಲಾಯಿಸುವುದು ಹೇಗೆ’ ಎಂದು ಭುವನೇಶ್ವರಿ ನಗರದ ಮಹಿಳೆಯೊಬ್ಬರು ಪ್ರಶ್ನಿಸಿದ್ದಾರೆ.

ಮತದಾರರ ಪಟ್ಟಿಯಿಂದ ಹೆಸರು ನಾಪತ್ತೆ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಿಂದ 60ಸಾವಿರಕ್ಕೂ ಅಧಿಕ ಮಂದಿಯ ಹೆಸರು ತೆಗೆದು ಹಾಕಲಾಗಿದೆ ಎಂದು ಬಸವನಗುಡಿ ಕ್ಷೇತ್ರದ ಶಾಸಕ ರವಿ ಸುಬ್ರಹ್ಮಣ್ಯ ಆರೋಪ ಮಾಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮತದಾರರ ಹೆಸರನ್ನು ತೆಗೆದು ಹಾಕುವ ಹಕ್ಕು ಯಾರಿಗೂ ಇಲ್ಲ.ಈ ವಿಚಾರದಲ್ಲಿ ಚುನಾವಣಾ ಆಯೋಗವು ಮೌನ ವಹಿಸಿರುವುದು ಅಚ್ಚರಿ ಮೂಡಿಸಿದೆ. ಮುಕ್ತ ಹಾಗೂ ನ್ಯಾಯಯುತ ಚುನಾವಣೆ ನಡೆಯುವಂತೆ ನೋಡಿಕೊಳ್ಳುವುದು ಆಯೋಗದ ಕರ್ತವ್ಯ ಎಂದರು.

ಹೆಸರು ಸೇರ್ಪಡೆಯಲ್ಲೂ ಅಕ್ರಮ: ಆರೋಪ

‘ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರುಗಳನ್ನು ಅಕ್ರಮವಾಗಿ ಸೇರ್ಪಡೆ ಮಾಡಲಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ವೈ.ಎ. ನಾರಾಯಣಸ್ವಾಮಿ ಆರೋಪ ಮಾಡಿದರು. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು.

‘ಹೆಬ್ಬಾಳ ಬಳಿಯ ಕೆಂಪಾಪುರದ ಚಿರಂಜೀವಿ ಬಡಾವಣೆಯಲ್ಲಿ ವಾಸವಾಗಿದ್ದಾರೆ ಎಂದು ಉಲ್ಲೇಖಿಸಿ ಮತದಾರರ ಪಟ್ಟಿಗೆ ಕೆಲವು ಹೆಸರುಗಳನ್ನು ಸೇರ್ಪಡೆ ಮಾಡಿದ್ದಾರೆ. ಆದರೆ, ಮತದಾರರ ಭಾವಚಿತ್ರ ಪಟ್ಟಿಯಲ್ಲಿಲ್ಲ. ಅವರು ತೋರಿಸುವ ವಿಳಾಸದಲ್ಲಿ ಯಾರೂ ವಾಸಿಸುತ್ತಿಲ್ಲ’ ಎಂದು ಸ್ಥಳೀಯ ನಿವಾಸಿಯೊಬ್ಬರು ದೂರಿದರು.

ಹೆಸರು ಸೇರ್ಪಡೆಯಲ್ಲೂ ಅಕ್ರಮ: ಆರೋಪ

‘ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರುಗಳನ್ನು ಅಕ್ರಮವಾಗಿ ಸೇರ್ಪಡೆ ಮಾಡಲಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ವೈ.ಎ. ನಾರಾಯಣಸ್ವಾಮಿ ಆರೋಪ ಮಾಡಿದರು.

ಈ ಬಗ್ಗೆ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು.

‘ಹೆಬ್ಬಾಳ ಬಳಿಯ ಕೆಂಪಾಪುರದ ಚಿರಂಜೀವಿ ಬಡಾವಣೆಯಲ್ಲಿ ವಾಸವಾಗಿದ್ದಾರೆ ಎಂದು ಉಲ್ಲೇಖಿಸಿ ಮತದಾರರ ಪಟ್ಟಿಗೆ ಕೆಲವು ಹೆಸರುಗಳನ್ನು ಸೇರ್ಪಡೆಮಾಡಿದ್ದಾರೆ. ಆದರೆ, ಮತದಾರರ ಭಾವಚಿತ್ರ ಪಟ್ಟಿಯಲ್ಲಿಲ್ಲ. ಅವರು ತೋರಿಸುವ ವಿಳಾಸದಲ್ಲಿ ಯಾರೂ ವಾಸಿಸುತ್ತಿಲ್ಲ’ ಎಂದು ಸ್ಥಳೀಯ ನಿವಾಸಿಯೊಬ್ಬರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.