ADVERTISEMENT

ಬ್ಲಾಕ್‌, ಬೀದಿ ಹಂತದಲ್ಲಿ ಬಿಬಿಎಂಪಿಯಿಂದ ಲಸಿಕಾ‌‌‌ ಕೇಂದ್ರ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 19:23 IST
Last Updated 30 ಸೆಪ್ಟೆಂಬರ್ 2021, 19:23 IST
   

ಬೆಂಗಳೂರು: ನಗರದಲ್ಲಿ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ನೀಡುವಿಕೆಯಲ್ಲಿ ಶೇ 100 ಗುರಿ ಸಾಧನೆಗೆ ಮುಂದಾಗಿರುವ ಬಿಬಿಎಂಪಿ ಇದಕ್ಕಾಗಿ ವಿನೂತನ ತಂತ್ರಗಾರಿಕೆಯನ್ನು ಅಳವಡಿಸಿಕೊಂಡಿದೆ. ಕಸ ವಿಲೇವಾರಿಗಾಗಿ ಗುರುತಿಸಿರುವ ಬ್ಲಾಕ್‌ಗಳು ಮತ್ತು ಬೀದಿಗಳಲ್ಲಿ ಲಸಿಕಾ ಕೇಂದ್ರ ತೆರೆಯಲು ಮುಂದಾಗಿದೆ.

ನಗರದಲ್ಲಿ ಎಲ್ಲರಿಗೂ ಲಸಿಕೆ ನೀಡುವ ಸಲುವಾಗಿ 198 ವಾರ್ಡ್‌ಗಳಲ್ಲೂ ಬ್ಲಾಕ್ ಹಾಗೂ ಬೀದಿ ಮಟ್ಟದಲ್ಲಿ ಲಸಿಕಾ ಕೇಂದ್ರ ಸ್ಥಾಪಿಸುವ ಬಗ್ಗೆ ವಾರ್ಡ್ ಆರೋಗ್ಯ ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯಾಧಿಕಾರಿಗಳು, ವೈದ್ಯರು, ಕಿರಿಯ ಅರೋಗ್ಯ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತರಿಗೆ ತರಬೇತಿ ನೀಡಲು ಬಿಬಿಎಂಪಿ ಗುರುವಾರ ಕಾರ್ಯಗಾರ ಹಮ್ಮಿಕೊಂಡಿತ್ತು.

ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್‌, ‘ಕಸ ವಿಲೇವಾರಿಗಾಗಿ 750 ಮನೆಗೊಂದರಂತೆ ಸುಮಾರು 4 ಸಾವಿರ ಬ್ಲಾಕ್‌ಗಳನ್ನು ರಚಿಸಲಾಗಿದೆ.ವಾರ್ಡ್‌ನಲ್ಲಿ 15ರಿಂದ 50 ಬ್ಲಾಕ್‌ಗಳಿವೆ. ಸೋಮವಾರದಿಂದ ಈ ಎಲ್ಲ ಬ್ಲಾಕ್‌ಗಳಲ್ಲಿ ಹಾಗೂ ಬೀದಿಗಳಲ್ಲಿ (ಲೇನ್‌) ಲಸಿಕಾ‌‌‌ ಕೇಂದ್ರಗಳನ್ನು ಸ್ಥಾಪಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರ ತಂಡವು ಬ್ಲಾಕ್‌ಗಳ ಬೀದಿಯಲ್ಲಿರುವ ಪ್ರತಿಯೊಂದು ಮನೆಗೆ ಭೇಟಿ ನೀಡಿ, ಲಸಿಕೆ ಹಾಕಿಸಿಕೊಳ್ಳದವರ ಮಾಹಿತಿ ಪಡೆಯಬೇಕು. ಮನೆಯಲ್ಲಿ ಎಷ್ಟು ಜನ ಇದ್ದಾರೆ, ಯಾರು ಯಾಕಾಗಿ ಲಸಿಕೆ ಪಡೆದಿಲ್ಲ ಎಂಬ ಬಗ್ಗೆ ವಿವರ ಕಲೆಹಾಕಬೇಕು. ಲಸಿಕೆಯ ಮಹತ್ವವನ್ನು ಮನವರಿಕೆ ಮಾಡಿ ಲಸಿಕಾ ಕೇಂದ್ರಕ್ಕೆ ಕರೆದೊಯ್ದು ಲಸಿಕೆ ಕೊಡಿಸಬೇಕು’ ಎಂದು ವಿವರಿಸಿದರು.

‘ಮನೆ ಬಾಗಿಲಿಗೆ ಬರುವ ಪಾಲಿಕೆಯ ಆರೋಗ್ಯ ಸಿಬ್ಬಂದಿ ಜೊತೆ ನಾಗರಿಕರು ಸಹಕರಿಸಬೇಕು. ಲಸಿಕೆ ಪಡೆದ ಬಗ್ಗೆ ನಿಖರವಾದ ಮಾಹಿತಿಯನ್ನು ಒದಗಿಸಬೇಕು. ವಯಸ್ಸಾದವರು, ಅಂಗವಿಕಲರು ಅಥವಾ ಹಾಸಿಗೆ ಹಿಡಿದಿರುವ ನಾಗರಿಕರು ಲಸಿಕೆ ಪಡೆಯಲು ಶುಲ್ಕರಹಿತ ಸಹಾಯವಾಣಿಗೆ (1533 ) ಕರೆ ಮಾಡಿದರೆ ಮನೆಯ ಹತ್ತಿರ ಬಂದು ಲಸಿಕೆ ನೀಡಲು ಕ್ರಮ ವಹಿಸಲಾಗುತ್ತದೆ’ ಎಂದು ತಿಳಿಸಿದರು.

77.20 ಲಕ್ಷ ಮಂದಿಗೆ ಲಸಿಕೆ

ಬಿಬಿಎಂಪಿ ವ್ಯಾಪ್ತಿಯಲ್ಲಿ 77.20 ಲಕ್ಷ (ಶೇ 85ರಷ್ಟು) ಮಂದಿ ಈಗಾಗಲೇ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಪಡೆದಿದ್ದಾರೆ. ಅಕ್ಟೋಬರ್‌ ಅಂತ್ಯದೊಳಗೆ ಶೇ 95ರಷ್ಟು ಮಂದಿಗೆ ಮೊದಲ ಡೊಸ್‌ ನೀಡುವ ಗುರಿಯನ್ನು ಬಿಬಿಎಂಪಿ ನಿಗದಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.