ADVERTISEMENT

ಜಾಬ್ ಕೋಡ್ ಇಲ್ಲದೆ ₹5 ಸಾವಿರ ಕೋಟಿ ಕಾಮಗಾರಿ ಶುರು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 19:11 IST
Last Updated 14 ಆಗಸ್ಟ್ 2019, 19:11 IST
   

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಜೂರಾತಿ ನೀಡಿದ್ದ ಕಾಮಗಾರಿಗಳ ಸ್ಥಗಿತಗೊಳಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ಕೂಡಲೇ ಆದೇಶಿಸಿದ್ದರು. ಆದರೆ, ಬಿಬಿಎಂಪಿ ಜಾಬ್‌ ಕೋಡ್ ನೀಡುವ ಮುನ್ನವೇ ₹5 ಸಾವಿರ ಕೋಟಿ ಮೊತ್ತದ ಕಾಮಗಾರಿ ಆರಂಭಿಸಿರುವುದು ಈಗ ಬೆಳಕಿಗೆ ಬಂದಿದೆ.

ವೈಟ್‌ ಟಾಪಿಂಗ್, ರಸ್ತೆ ಅಭಿವೃದ್ಧಿ, ರಾಜಕಾಲುವೆ ಅಭಿವೃದ್ಧಿ, ಕೆರೆ ಅಭಿವೃದ್ಧಿ ಸೇರಿ ₹8,015 ಕೋಟಿ ಮೊತ್ತದ ಕಾಮಗಾರಿಗಳ ಕ್ರಿಯಾ ಯೋಜನೆಗೆ ಬಿಬಿಎಂಪಿ ಮಂಜೂರಾತಿ ನೀಡಿದೆ.

ಕಾಮಗಾರಿ ಆರಂಭಿಸುವ ಭರದಲ್ಲಿ ಜಾಬ್‌ ಕೋಡ್ ಕೊಡುವುದನ್ನೇ ಅಧಿಕಾರಿಗಳು ಮರೆತಿದ್ದಾರೆ. ಅದಕ್ಕೂ ಮೊದಲೇ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿ ಟೆಂಡರ್ ಪ್ರಕ್ರಿಯೆ ನಡೆಸಿದ್ದಾರೆ. ಅಲ್ಲದೆ, ಗುತ್ತಿಗೆದಾರರಿಗೆ ಕಾರ್ಯಾದೇಶವನ್ನೂ ನೀಡಿದ್ದಾರೆ.

ADVERTISEMENT

₹1,306 ಕೋಟಿ ಮೊತ್ತದ ವೈಟ್ ಟಾಪಿಂಗ್, 2,331 ಕೋಟಿ ಮೊತ್ತದ ರಸ್ತೆ ಅಭಿವೃದ್ಧಿ, ₹308 ಕೋಟಿ ಅಂದಾಜಿನ ಕೆರೆ ಅಭಿವೃದ್ಧಿ, ₹1,434 ಕೋಟಿ ಮೊತ್ತದಲ್ಲಿ ರಾಜಕಾಲುವೆ ಅಭಿವೃದ್ಧಿ ಸೇರಿ 5,419 ಕೋಟಿ ಮೊತ್ತದ ಕಾಮಗಾರಿಯನ್ನು ಜಾಬ್ ಕೋಡ್ ನೀಡದೆ ಆರಂಭಿಸಲಾಗಿದೆ.

‘ಎಲ್ಲಾ ಕಾಮಗಾರಿಗಳಿಗೂ ಜಾಬ್‌ಕೋಡ್ ನೀಡುವುದು ಕಡ್ಡಾಯ ಎಂಬುದನ್ನು ನಾವು ಬಲವಾಗಿ ಶಿಫಾರಸು ಮಾಡುತ್ತೇವೆ. ಆದರೆ, ನಿಗದಿತ ಯೋಜನೆಗಳಿಗೆ ಸರ್ಕಾರವೇ ನಿಖರವಾಗಿ ಹಣ ಮಂಜೂರು ಮಾಡಿರುವುದರಿಂದ ಜಾಬ್ ಕೋಡ್ ನೀಡದೆ ಕಾಮಗಾರಿ ಆರಂಭಿಸಲಾಗಿದೆ. ಹೀಗಾಗಿ ಜಾಬ್ ಕೋಡ್ ಸಮಸ್ಯೆ ಉದ್ಭವಿಸುವುದಿಲ್ಲ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಯೋಜನೆ) ರವಿಕುಮಾರ್ ಸುರಪುರ ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಮೇಯರ್ ಗಂಗಾಂಬಿಕೆ, ‘ಜಾಬ್ ಕೋಡ್ ಕೊಡದೆ ಟೆಂಡರ್ ಪ್ರಕ್ರಿಯೆ ನಡೆಸಲು ಮತ್ತು ಕಾಮಗಾರಿಯ ಕಾರ್ಯಾದೇಶ ನೀಡಲು ನಾನಂತೂ ಶಿಫಾರಸು ಮಾಡಿಲ್ಲ. ಅಧಿಕಾರಿಗಳು ಏಕೆ ಈ ರೀತಿ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಇದು ಕಾರ್ಯ ವಿಧಾನದ ಉಲ್ಲಂಘನೆ’ ಎಂದರು.

‘ಜಾಬ್ ಕೋಡ್ ನೀಡುವುದು ಕಡ್ಡಾಯ. ಇದನ್ನು ಮಾಡದೆ ಡಿಪಿಆರ್ ಮತ್ತು ಟೆಂಡರ್ ಪ್ರಕ್ರಿಯೆಗಳನ್ನು ನಡೆಸಿರುವುದು ನನಗೆ ಗೊತ್ತಿಲ್ಲ’ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ತಿಳಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.