ADVERTISEMENT

ಬಿಡಿಎ ಕಮಿಷನರ್ ಸಾಹೇಬ್ರು ತುಂಬಾ ಬ್ಯುಸಿ!

ಖುದ್ದು ಹಾಜರಿಗೆ ಹೈಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 19:56 IST
Last Updated 3 ಜುಲೈ 2018, 19:56 IST

ಬೆಂಗಳೂರು: ‘ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಮಿಷನರ್ ಹೈಕೋರ್ಟ್‌ಗೆ ಸಲ್ಲಿಸಬೇಕಾದ ಪ್ರತಿ ಪ್ರಮಾಣಪತ್ರಕ್ಕೆ ಸಹಿ ಹಾಕಲಾರದಷ್ಟು ಬ್ಯುಸಿಯಾಗಿದ್ದಾರೆ...!’

ನ್ಯಾಯಾಂಗ ನಿಂದನೆ ಪ್ರಕರಣದ ಆರೋಪಿಯಾಗಿರುವ ಬಿಡಿಎ ಕಮಿಷನರ್ ರಾಕೇಶ್ ಸಿಂಗ್ ಪರ ವಕೀಲ ಸುದೇವ್ ಹೆಗ್ಡೆ ಸಲ್ಲಿಸಿದ ಈ ಹೇಳಿಕೆಯನ್ನು ನ್ಯಾಯಮೂರ್ತಿ ಆರ್.ಎಸ್‌.ಚೌಹಾಣ್ ನೇತೃತ್ವದ ವಿಭಾಗೀಯ ನ್ಯಾಯಪೀಠ ತನ್ನ ಆದೇಶದಲ್ಲಿ ದಾಖಲಿಸಿಕೊಂಡಿದೆ. ಅಂತೆಯೇ ‘ಕಮಿಷನರ್‌ ಬುಧವಾರ ಬೆಳಗ್ಗೆ 10.30ಕ್ಕೆ ಕೋರ್ಟ್‌ಗೆ ಖುದ್ದು ಹಾಜರಾಗಬೇಕು’ ಎಂದು ನಿರ್ದೇಶಿಸಿದೆ.

’ಹೈಕೋರ್ಟ್‌ನ ಮಧ್ಯಂತರ ಆದೇಶ ಇದ್ದರೂ ಬಿಡಿಎ ನಮ್ಮ ಕಟ್ಟಡ ಕೆಡವಿದೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೆ.ಆರ್.ಪುರದ ಡಿ.ಲಾಲಿ ವರ್ಗೀಸ್ ರಾಕೇಶ್ ಸಿಂಗ್ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ADVERTISEMENT

ಕೋರ್ಟ್ ಆದೇಶ ನೀಡಿದ್ದರೂ ರಾಕೇಶ್ ಸಿಂಗ್ ನಿಗದಿತ ಸಮಯದಲ್ಲಿ ಪ್ರಮಾಣ ಪತ್ರ ಸಲ್ಲಿಸಿರಲಿಲ್ಲ. ಈ ಕುರಿತಂತೆ ರಾಕೇಶ್ ಸಿಂಗ್ ಪರ ವಕೀಲರನ್ನು ನ್ಯಾಯಪೀಠ, ‘ಇನ್ನೂ ಯಾಕೆ ನೀವು ಪ್ರತಿ ಪ್ರಮಾಣ ಪತ್ರ ಸಲ್ಲಿಸಿಲ್ಲ’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸುದೇವ್‌ ಹೆಗ್ಡೆ, ‘ರಾಕೇಶ್ ಸಿಂಗ್‌ ದೆಹಲಿಯಿಂದ ನಿನ್ನೆ ತಾನೇ ಬೆಂಗಳೂರಿಗೆ ಬಂದಿದ್ದಾರೆ. ಹಾಗಾಗಿ ಅವರ ಸಹಿ ಪಡೆಯಲು ಆಗಿಲ್ಲ. ಅವರು ತುಂಬಾ ಬ್ಯುಸಿಯಾಗಿದ್ದಾರೆ. ಹಾಗಾಗಿ ಪ್ರಮಾಣ ಪತ್ರಕ್ಕೆ ಇನ್ನೂ ಸಹಿ ಮಾಡಲು ಆಗಿಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ‘ಸಹಿ ಹಾಕಲೂ ಅವರಿಗೆ ಪುರುಸೊತ್ತು ಇಲ್ಲವೇ’ ಎಂದು ಪ್ರಶ್ನಿಸಿ ಸುದೇವ್‌ ಹೆಗ್ಡೆ ಅವರ ಹೇಳಿಕೆಯನ್ನು ಯಥಾವತ್‌ ದಾಖಲಿಸಿಕೊಂಡಿತು. ಆರೋಪಿಯ ಖುದ್ದು ಹಾಜರಿಗೆ ನಿರ್ದೇಶಿಸಿ ವಿಚಾರಣೆಯನ್ನು ಬುಧವಾರಕ್ಕೆ (ಜು.4) ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.