ADVERTISEMENT

ಮೆರವಣಿಗೆಯಲ್ಲಿ ಸಾಗಿದ ಹಸಿ ಕರಗ

ಇಂದು ತಡರಾತ್ರಿ ಹೂವಿನ ಕರಗ; ಧರ್ಮರಾಯ ಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2023, 21:14 IST
Last Updated 5 ಏಪ್ರಿಲ್ 2023, 21:14 IST
ಸಂಪಂಗಿ ಕೆರೆಯಿಂದ ಹಸಿ ಕರಗದ ಮೆರವಣಿಗೆ ಆರಂಭಗೊಂಡು ತಿಗಳರಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಬುಧವಾರ ಬೆಳಿಗ್ಗೆ ಸಾಗಿತು. ವೀರಕುಮಾರರು, ದ್ರೌಪದಿಯ ಯೋಧ-ಪುತ್ರರಂತೆ ಪಾಲ್ಗೊಂಡಿದ್ದರು. ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ಸಂಪಂಗಿ ಕೆರೆಯಿಂದ ಹಸಿ ಕರಗದ ಮೆರವಣಿಗೆ ಆರಂಭಗೊಂಡು ತಿಗಳರಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಬುಧವಾರ ಬೆಳಿಗ್ಗೆ ಸಾಗಿತು. ವೀರಕುಮಾರರು, ದ್ರೌಪದಿಯ ಯೋಧ-ಪುತ್ರರಂತೆ ಪಾಲ್ಗೊಂಡಿದ್ದರು. ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ಸಂಪಂಗಿ ಕೆರೆಯ ಶಕ್ತಿ ಪೀಠದಲ್ಲಿ ಮಂಗಳವಾರ ತಡರಾತ್ರಿ ಆರಂಭವಾದ ಹಸಿ ಕರಗದ ಸಿದ್ಧತೆ ಹಾಗೂ ಪೂಜೆ ಬುಧವಾರ ಬೆಳಗಿನ ಜಾವ ಪೂರ್ಣಗೊಂಡಿತು. ನಂತರ ಮೆರವಣಿಗೆಯಲ್ಲಿ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಹಸಿ ಕರಗ ಸಾಗಿತು.

ಸಂಪ್ರದಾಯದ ಪ್ರಕಾರ ಧಾರ್ಮಿಕ ಆಚರಣೆಗಳು ಸಂಪಂಗಿ ಕೆರೆಯಲ್ಲಿರುವ ಶಕ್ತಿಪೀಠದಲ್ಲಿ ವಿಜೃಂಭಣೆಯೊಂದಿಗೆ ನಡೆದವು. ಮಂಗಳವಾರ ಬೆಳಿಗ್ಗೆಯಿಂದಲೇ ಸಿದ್ಧತೆಗಳು ನಡೆದು, ಸಂಜೆಯಿಂದಲೇ ವೀರಕುಮಾರರು ಆಗಮಿಸಿದ್ದರು. ತಡರಾತ್ರಿ ಪೂಜೆಗಳು ಆರಂಭವಾಗಿ, ಮುಂಜಾನೆ ಹಸಿ ಕರಗ ಸಿದ್ಧಗೊಂಡಿತು.

ವಿಶೇಷ ಪೂಜೆಯ ನಂತರ, ಹೂವಿನ ವೇಷಭೂಷಣದೊಂದಿಗೆ ಸಿದ್ಧರಾದ ಅರ್ಚಕ ಎ. ಜ್ಞಾನೇಶ್‌ ಒಂದು ಕೈಯಲ್ಲಿ ಕತ್ತಿ ಹಿಡಿದು, ಸೊಂಟದಲ್ಲಿ ಹಸಿ ಕರಗವನ್ನು ಹೊತ್ತು ಸಾಗಿದರು. ಸಂಪಂಗಿ ಕೆರೆಯ ನಂತರ ಹಡ್ಸನ್‌ ವೃತ್ತ,
ಬಿಬಿಎಂಪಿಯಲ್ಲಿರುವ ಆದಿಶಕ್ತಿ ದೇವಸ್ಥಾನಕ್ಕೆ ಸಾಗಿದ ಹಸಿ ಕರಗದ ಮೆರವಣಿಗೆ ಅಲ್ಲಿ ಪೂಜೆ ಸಲ್ಲಿಸಿತು. ನಂತರ, ಧರ್ಮರಾಯಸ್ವಾಮಿ ದೇವಸ್ಥಾನವನ್ನು ತಲುಪಿತು.

ADVERTISEMENT

ಗುರುವಾರ ರಾತ್ರಿ ಹೂವಿನ ಕರಗ: ಪ್ರಸಿದ್ಧ ದ್ರೌಪದಿದೇವಿ ಕರಗ ಶಕ್ತೋತ್ಸವ ಗುರುವಾರ ತಡರಾತ್ರಿ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೊರಡಲಿದೆ. ಹಲಸೂರು ಪೇಟೆಯ ಆಂಜನೇಯಸ್ವಾಮಿ, ರಾಮ ದೇವಾಲಯದಲ್ಲಿ ಪೂಜೆ ಸ್ವೀಕರಿಸಿ, ನಗರ್ತಪೇಟೆ, ಸಿದ್ದಣ್ಣ ಗಲ್ಲಿ, ಕಬ್ಬನ್‌ಪೇಟೆ, ಗಾಣಿಗರ ಪೇಟೆ, ದೊಡ್ಡಪೇಟೆಯಿಂದ ಕೆ.ಆರ್. ಮಾರುಕಟ್ಟೆ ತಲುಪಲಿದೆ. ಮಸ್ತಾನ್ ಸಾಬ್‌ ದರ್ಗಾಕ್ಕೆ ಭೇಟಿ ನೀಡಿ, ಅಲ್ಲಿಂದ ಬಳೇಪೇಟೆ ಹಳೇಗರಡಿ, ಅಣ್ಣಮ್ಮನ ದೇವಾಲಯ, ಕಿಲಾರಿ ರಸ್ತೆ, ಯಲಹಂಕ ಗೇಟ್, ಅವೆನ್ಯೂ ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರ ಪೇಟೆಗಳಲ್ಲಿ ಸಾಗಲಿದೆ. ಸೂರ್ಯೋದಯದ ವೇಳೆ ಧರ್ಮರಾಯಸ್ವಾಮಿ ದೇವಸ್ಥಾನ ತಲುಪಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.