ADVERTISEMENT

‘ಮತೀಯ ದ್ವೇಷವಿಲ್ಲದ ಆದಿಲ್‌ಶಾಹಿ ಆಡಳಿತ’- ಪ್ರೊ. ಕೃಷ್ಣ ಕೊಲ್ಹಾರ ಕುಲಕರ್ಣಿ

ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಇತಿಹಾಸ ಸಂಶೋಧಕ ಪ್ರೊ. ಕೃಷ್ಣ ಕೊಲ್ಹಾರ ಕುಲಕರ್ಣಿ

ವಿ.ಎಸ್.ಸುಬ್ರಹ್ಮಣ್ಯ
Published 4 ಡಿಸೆಂಬರ್ 2022, 20:54 IST
Last Updated 4 ಡಿಸೆಂಬರ್ 2022, 20:54 IST
ಪ್ರೊ. ಕೃಷ್ಣ ಕೊಲ್ಹಾರ ಕುಲಕರ್ಣಿ
ಪ್ರೊ. ಕೃಷ್ಣ ಕೊಲ್ಹಾರ ಕುಲಕರ್ಣಿ   

ಬೆಂಗಳೂರು: ವಿಜಯಪುರವನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ಮಹಾರಾಷ್ಟ್ರದ ಮುಂಬೈನಿಂದ ಕೇರಳದ ಕಣ್ಣೂರಿನವರೆಗೆ ಎರಡು ಶತಮಾನಗಳ ಕಾಲ ಆಳ್ವಿಕೆ ನಡೆಸಿದ ಆದಿಲ್‌ಶಾಹಿಗಳ ಆಡಳಿತದ ಅವಧಿಯಲ್ಲಿ ಮತೀಯ ದ್ವೇಷದ ಗಲಭೆಗಳು ನಡೆದ ಕುರುಹುಗಳೇ ಇಲ್ಲ ಎಂದು ಇತಿಹಾಸ ಸಂಶೋಧಕ
ಪ್ರೊ. ಕೃಷ್ಣ ಕೊಲ್ಹಾರ ಕುಲಕರ್ಣಿ ಹೇಳಿದರು.

ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಭಾನುವಾರ ‘ಆದಿಲ್‌ಶಾಹಿಗಳ ಸಾಮ್ರಾಜ್ಯ’ ಕುರಿತು ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಟಿಪ್ಪು ಸುಲ್ತಾನ್‌ ಕುರಿತು ಹೆಚ್ಚು ಚರ್ಚೆ ನಡೆಯುತ್ತದೆ. ಆದರೆ, ಟಿಪ್ಪುವಿನ ಸಾಮ್ರಾಜ್ಯದ ಹಲವು ಪಟ್ಟು ದೊಡ್ಡದಾಗಿದ್ದ ಮತ್ತು ದೀರ್ಘಕಾಲ ಆಳ್ವಿಕೆ ನಡೆಸಿದ್ದ ಆದಿಲ್‌ಶಾಹಿಗಳ ಕುರಿತು ಚರ್ಚೆಯೇ ನಡೆಯುವುದಿಲ್ಲ. ಈ ತಲೆಮಾರಿನ ಕನ್ನಡಿಗರಿಗೆ ಆದಿಲ್‌ಶಾಹಿ ಆಡಳಿತದ ಬಗ್ಗೆ ತಿಳಿದೇ ಇಲ್ಲ’ ಎಂದರು.

ಆದಿಲ್‌ಶಾಹಿ ಸಾಮ್ರಾಜ್ಯದ ಅವಧಿಯಲ್ಲಿ ಹಿಂದೂ– ಮುಸ್ಲಿಮರ ನಡುವೆ ಗಲಭೆಗಳು ನಡೆದೇ ಇರಲಿಲ್ಲ. ಆದರೆ, ಮುಸ್ಲಿಮರಲ್ಲೇ ಶಿಯಾ ಮತ್ತು ಸುನ್ನಿ ಪಂಗಡಗಳ ನಡುವೆ ಸಂಘರ್ಷ ನಡೆದ ಉಲ್ಲೇಖಗಳು ಇತಿಹಾಸದಲ್ಲಿ ಸಿಗುತ್ತವೆ ಎಂದು ಹೇಳಿದರು.

ADVERTISEMENT

‘ನಾನು ಇತಿಹಾಸದಲ್ಲಿ ಆಸಕ್ತಿ ಹೊಂದಿದ್ದ ವ್ಯಕ್ತಿ. ಎರಡನೇ ಮಹಾಯುದ್ಧ, ಬಾಂಗ್ಲಾ‌ದೇಶದ ಇತಿಹಾಸ ಕುರಿತು ಬರೆದಿದ್ದೆ. ನನ್ನ ಮನೆ, ನನ್ನ ಪ್ರದೇಶದ ಇತಿಹಾಸ ತಿಳಿಯದೆ ಜಗತ್ತಿನ ಇತಿಹಾಸ ಅರಿತು ಏನು ಪ್ರಯೋಜನ ಅನಿಸಿತು. ಆ ಬಳಿಕ ಸ್ಥಳೀಯ ಇತಿಹಾಸದ ಕುರಿತು ಅಧ್ಯಯನ ಆರಂಭಿಸಿದೆ. ದಕ್ಷಿಣ ಭಾರತದ ಮೂರನೇ ಎರಡರಷ್ಟು ಭಾಗವನ್ನು ಆಳಿದ್ದ ಆದಿಲ್‌ಶಾಹಿಗಳ ಸಾಮ್ರಾಜ್ಯದ ಕುರಿತು ಅರಿಯಬೇಕೆಂದು ಅನ್ಯ ಭಾಷೆಗಳಲ್ಲಿದ್ದ ದಾಖಲೆಗಳು, ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಯೋಜನೆ ಕೈಗೆತ್ತಿಕೊಂಡಿದ್ದೆ’ ಎಂದು ತಮ್ಮ ಅನುಭವ ಕಥನವನ್ನು ವಿವರಿಸಿದರು.

ಆದಿಲ್‌ಶಾಹಿ ಸಾಮ್ರಾಜ್ಯದ ಕುರಿತು ಕನ್ನಡದಲ್ಲಿ ನಾಲ್ಕರಿಂದ ಆರು ಪುಟಗಳಷ್ಟು ಮಾಹಿತಿ ಮಾತ್ರ ಇತ್ತು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಗೆಳೆಯ ಪ್ರೊ.ಎಂ.ಎಂ. ಕಲಬುರ್ಗಿ ಹಾಗೂ ಆಗ ಸಚಿವರಾಗಿದ್ದ ಎಂ.ಬಿ. ಪಾಟೀಲ ಅವರ ಆಸಕ್ತಿಯ ಕಾರಣದಿಂದ ರಾಜ್ಯ ಸರ್ಕಾರದ ಅನುದಾನದಲ್ಲಿ ಆದಿಲ್‌ಶಾಹಿಗಳ ಸಾಮ್ರಾಜ್ಯದ ಕುರಿತ ಹಲವು ಕೃತಿಗಳನ್ನು ಕನ್ನಡಕ್ಕೆ ತರುವ ಕೆಲಸ ಸಾಕಾರಗೊಂಡಿತು ಎಂದರು.

‘ಇಡೀ ಯೋಜನೆ ಒಂದು ಸವಾಲಿನ ಕೆಲಸವಾಗಿತ್ತು. ದೇಶದ ವಿವಿಧ ರಾಜ್ಯಗಳಲ್ಲಿ 21 ಕೃತಿಗಳು ಸಿಕ್ಕವು. ಇನ್ನೂ ಕೆಲವು ಕೃತಿಗಳು ವಿದೇಶಗಳಲ್ಲಿ ಲಭ್ಯವಾದವು. ಪರ್ಷಿಯನ್‌ ಭಾಷೆಯಲ್ಲಿದ್ದ ಕೆಲ ಕೃತಿಗಳನ್ನು ಉರ್ದು ಭಾಷೆಗೆ ಅನುವಾದಿಸಿ, ನಂತರ ಕನ್ನಡಕ್ಕೆ ತರಲಾಯಿತು’ ಎಂದು ವಿವರಿಸಿದರು.

ಆದಿಲ್‌ಶಾಹಿ ದೊರೆಗಳ ಯೋಚನಾ ಶೈಲಿಯೇ ವಿಭಿನ್ನವಾಗಿತ್ತು. ವಿಜಯಪುರದಲ್ಲಿ ಕುಳಿತು ನೆರೆಯ ರಾಜ್ಯಗಳು, ವಿದೇಶಗಳ ಜತೆ ಸಂಪರ್ಕ ಸಾಧಿಸಿದ್ದರು. ಆ ಕಾಲಕ್ಕೆ 13 ಲಕ್ಷ ಜನಸಂಖ್ಯೆ ಹೊಂದಿದ್ದ ಜನವಸತಿಗಳಿಗೆ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಮಾಡಿದ್ದರು. ದುಡಿಯುವ ಜನರಿಗೆ ಉದ್ಯೋಗದ ವ್ಯವಸ್ಥೆ ಮಾಡಿದ್ದರು ಎಂದರು.

‘ಎಲ್ಲರೂ ಯುದ್ಧದ ಭಾಗವಾಗಿದ್ದರು’

ಗಿರೀಶ್‌ ಕಾರ್ನಾಡರ ‘ರಾಕ್ಷಸ ತಂಗಡಿ’ ನಾಟಕದಲ್ಲಿ ಉತ್ಪ್ರೇಕ್ಷೆಗಳಿವೆಯೆ? ಎಂಬ ಸಭಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಕೃಷ್ಣ ಕೊಲ್ಹಾರ ಕುಲಕರ್ಣಿ, ‘ಗಿರೀಶ್‌ ಅವರು ನಾಟಕ ಬರೆಯುವ ಮುನ್ನ ಸುದೀರ್ಘ ಕಾಲ ನನ್ನೊಂದಿಗೆ ಚರ್ಚಿಸಿದ್ದರು. ಕೃತಿಯಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. ಮುಸ್ಲಿಮರಿಂದಷ್ಟೇ ಯುದ್ಧಗಳಾಗುತ್ತವೆ ಎಂದು ಏಕೆ ಭಾವಿಸಬೇಕು? ಆ ಕಾಲದಲ್ಲಿದ್ದ ಮುಸ್ಲಿಮರು– ಹಿಂದೂಗಳು ಎಲ್ಲರೂ ಯುದ್ಧದ ಭಾಗವಾಗಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.