ಬೆಂಗಳೂರು: ‘ಸಾಹಿತಿ ಎಸ್. ಎಲ್. ಭೈರಪ್ಪ ಅವರ ಜೀವನ ಮತ್ತು ಸಾಹಿತ್ಯಕ್ಕೆ ಎರಡು ವಿಶ್ಲೇಷಣೆ ಅಗತ್ಯವಿಲ್ಲ. ಎರಡೂ ಒಂದೇ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
‘ಸಾಹಿತಿ ಎಸ್. ಎಲ್ ಭೈರಪ್ಪ ಪ್ರತಿಷ್ಠಾನ’ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಭೈರಪ್ಪನವರ ಕೃತಿಗಳನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ನಾನು ಪರ್ವ ಕಾದಂಬರಿಯನ್ನು ಕಾಲೇಜು ಜೀವನದಲ್ಲಿಯೇ ಓದಲು ಪ್ರಯತ್ನ ಮಾಡಿದ್ದೆ, ಅಷ್ಟು ಸುಲಭವಾಗಿ ಅರ್ಥವಾಗಿರಲಿಲ್ಲ. ಕೆಲವು ವರ್ಷಗಳ ನಂತರ ಮತ್ತೆ ಓದಿದೆ. ಪ್ರತಿ ಸಾರಿ ಓದಿದಾಗ ಹೊಸ ಆಯಾಮ ಸಿಗುತ್ತದೆ. ನನಗೆ ಕಾಡಿರುವ ಎರಡು ಪುಸ್ತಕಗಳು. ಒಂದು ಭೈರಪ್ಪನವರ ಪರ್ವ, ಇನ್ನೊಂದು ಸ್ವಾಮಿ ವಿವೇಕಾನಂದರ ‘ಲೈಫ್ ಆಫ್ಟರ್ ಡೆತ್’ ಎಂದು ಹೇಳಿದರು.
‘ನಮಗೆ ಸಮಾಜ ಏನು ಕೊಟ್ಟಿದೆಯೋ ಅದನ್ನು ನಾವು ಸಮಾಜಕ್ಕೆ ವಾಪಸ್ ಕೊಟ್ಟಾಗ ನಮ್ಮ ಬದುಕಿನ ಬ್ಯಾಲೆನ್ಸ್ ಶೀಟ್ ಪೂರ್ತಿಯಾಗುತ್ತದೆ. ಭೈರಪ್ಪನವರು ಸಮಾಜ ಕೊಟ್ಟಿರುವುದನ್ನು ಸಮಾಜಕ್ಕೆ ವಾಪಸ್ ಕೊಟ್ಟಿದ್ದಾರೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಎಸ್.ಎಲ್. ಭೈರಪ್ಪ, ಶತಾವಧಾನಿ ಆರ್. ಗಣೇಶ್, ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್, ಸಹನಾ ವಿಜಯಕುಮಾರ್, ಅರುಣ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.