ADVERTISEMENT

ಕಾಂಗ್ರೆಸ್‌ ಸೇರಿದ ಗಂಟೆಯಲ್ಲೇ ರದ್ದು!

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 20:03 IST
Last Updated 3 ಏಪ್ರಿಲ್ 2019, 20:03 IST

ಬೆಂಗಳೂರು: ಯಾದಗಿರಿ ಜಿಲ್ಲೆಯ ಕೆಲವು ಬಿಜೆಪಿ ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಂಡ ಕೆಲವೇ ಗಂಟೆಗಳ ಬಳಿಕ ಕಾಂಗ್ರೆಸ್‌ ನಾಯಕರು ರದ್ದುಪಡಿಸಿದ ಪ್ರಹಸನ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆಯಿತು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಸಮ್ಮುಖದಲ್ಲಿ ಯಾದಗಿರಿಯ ಡಾ. ಭೀಮಮೇಟಿ, ದೇವೇಂದ್ರಪ್ಪ ಮುನಮಟ್ಟು, ಸಿದ್ದಪ್ಪ ಗುಂಡಳ್ಳಿ, ಭೀಮರೆಡ್ಡಿ ಜಟ್ನಳ್ಳಿ, ಮಲ್ಲಿಕಾರ್ಜುನ ತಡಿಬಡಿ ಮತ್ತು ಮಹಾಲಿಂಗಮ್ ಖಾನಾಪುರ್ ಕಾಂಗ್ರೆಸ್‌ ಸೇರಿದ್ದರು.

ಅಷ್ಟೇ ಅಲ್ಲ, ಅವರೆಲ್ಲರೂ ಉತ್ಸಾಹದಲ್ಲಿ ಕಾಂಗ್ರೆಸ್ ಧ್ವಜ ಹಿಡಿದು, ಶಾಲು ಹೆಗಲಿಗೇರಿಸಿಕೊಂಡಿದ್ದರು. ಪಕ್ಷದ ಕಚೇರಿ ಮುಂಭಾಗದಲ್ಲಿ ನಿಂತುಕೊಂಡು ಮೊಬೈಲ್‍ನಲ್ಲಿ ಫೋಟೊ ತೆಗೆಸಿಕೊಂಡಿದ್ದರು.

ADVERTISEMENT

ಆದರೆ, ಮಧ್ಯಾಹ್ನದ ವೇಳೆಗೆ ಪಕ್ಷದ ಅಧ್ಯಕ್ಷರ ಸೂಚನೆ ಮೇರೆಗೆ ಕೆಪಿಸಿಸಿ ಚುನಾವಣಾ ನಿರ್ವಹಣಾ ಸಮಿತಿ, ಈ ಎಲ್ಲರ ಪಕ್ಷ ಸೇರ್ಪಡೆಯನ್ನು ರದ್ದುಗೊಳಿಸಿತು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರ ಸೂಚನೆ ಮೇರೆಗೆ ಸೇರ್ಪಡೆ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಮಿತಿ ಅಧ್ಯಕ್ಷ ಪ್ರಕಾಶ್ ರಾಥೋಡ್ ಸ್ಪಷ್ಟಪಡಿಸಿದ್ದಾರೆ.

ಅಲೆಕ್ಸಾಂಡರ್ ರಾಜೀನಾಮೆ: ಹಿರಿಯ ಮುಖಂಡ ಜೆ. ಅಲೆಕ್ಸಾಂಡರ್ ಅವರು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಅವರು, ನಿವೃತ್ತಿಯಾದ ಬಳಿಕ ಕಾಂಗ್ರೆಸ್ ಸೇರಿ ಎಸ್.ಎಂ. ಕೃಷ್ಣ ಸಂಪುಟದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.