ADVERTISEMENT

ಬೆಂಗಳೂರು ಕಾಲ್ತುಳಿತ: ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಸಿ.ಎಂ, ಡಿಸಿಎಂ, ಗೃಹ ಸಚಿವ ರಾಜೀನಾಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 16:13 IST
Last Updated 17 ಜೂನ್ 2025, 16:13 IST
ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಮುಖವಾಡ ಧರಿಸಿ ಪಾಲ್ಗೊಂಡಿದ್ದು ಹೀಗೆ
ಪ್ರಜಾವಾಣಿ ಚಿತ್ರ ಬಿ.ಕೆ.ಜನಾರ್ದನ್  
ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಮುಖವಾಡ ಧರಿಸಿ ಪಾಲ್ಗೊಂಡಿದ್ದು ಹೀಗೆ ಪ್ರಜಾವಾಣಿ ಚಿತ್ರ ಬಿ.ಕೆ.ಜನಾರ್ದನ್      

ಬೆಂಗಳೂರು: ಆರ್​ಸಿಬಿ ತಂಡದ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಲ್ಲಿ ಮೃತಪಟ್ಟ 11 ಜನ ಅಮಾಯಕರ ಸಾವಿಗೆ ರಾಜ್ಯ ಸರ್ಕಾರದ ವೈಫಲ್ಯ ಕಾರಣವಾಗಿದ್ದು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬಿಜೆಪಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿತು.

ರಾಜ್ಯ ಸರ್ಕಾರ ತನ್ನ ಪ್ರಚಾರದ ತೆವಲಿಗೆ ಸರಿಯಾದ ವ್ಯವಸ್ಥೆ ಮಾಡದೇ ಆತುರಾತುರವಾಗಿ ಕಾರ್ಯಕ್ರಮ ಮಾಡಿ ಅಮಾಯಕರ ಬಲಿ ಪಡೆದಿದೆ. ಇದರ ನೈತಿಕ ಹೊಣೆ ಹೊತ್ತು  ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಜಿ.ಪರಮೇಶ್ವರ ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕರು ಒಕ್ಕೊರಲಿನಿಂದ ಆಗ್ರಹಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟರು. ಆದರೆ, ಸ್ವಾತಂತ್ರ್ಯ ಉದ್ಯಾನದಲ್ಲೇ ಬಿಜೆಪಿ ನಾಯಕರನ್ನು ಪೊಲೀಸರು ತಡೆದರು. ಈ ವೇಳೆ ತಳ್ಳಾಟ–ನೂಕಾಟ ನಡೆಯಿತು.

ADVERTISEMENT

ನಂತರ ಪ್ರತಿಭಟನಕಾರರನ್ನು ವಶಕ್ಕೆ ಪಡೆದ ಪೊಲೀಸರು, ಬಿಎಂಟಿಸಿ ಬಸ್​​ಗಳಲ್ಲಿ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದರು. ಬಳಿಕ ಎಲ್ಲರನ್ನೂ ಬಿಡುಗಡೆ ಮಾಡಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ‘ಮುಖ್ಯಮಂತ್ರಿಯವರ ಜನಪ್ರಿಯತೆ ಹೆಚ್ಚಿಸಲು ಆರ್‌ಸಿಬಿ. ವಿಜಯೋತ್ಸವದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮುಖ್ಯಮಂತ್ರಿ- ಉಪ ಮುಖ್ಯಮಂತ್ರಿ ನಡುವಿನ ಪೈಪೋಟಿಯಿಂದ ಅಮಾಯಕರು ಸಾವಿಗೀಡಾದರು’ ಎಂದು ದೂರಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾತನಾಡಿ, ‘ಮೃತರ ಕುಟುಂಬಗಳಿಗೆ ನ್ಯಾಯ ಸಿಗದ ಹೊರತು ಬಿಜೆಪಿ ಹೋರಾಟ ನಿಲ್ಲಿಸುವುದಿಲ್ಲ. ವಿಜಯೋತ್ಸವ ಅಚರಿಸುವುದು ಬೇಡ, ಪೊಲೀಸರು ದಣಿದಿದ್ದಾರೆ ಎಂದು ಡಿಸಿಪಿಯೊಬ್ಬರು ಹೇಳಿದಾಗ, ಸಿದ್ದರಾಮಯ್ಯ ಅವರು ಅಧಿಕಾರಿಯನ್ನು ಗದರಿದ್ದರಂತೆ. ವಿಜಯೋತ್ಸವ ಆಚರಣೆಗೆ ಲಕ್ಷಾಂತರ ಜನರು ಬಂದಿದ್ದರು. ಭದ್ರತೆಗೆ ಎಷ್ಟು ಸಿಬ್ಬಂದಿ ನಿಯೋಜಿಸಬೇಕಿತ್ತು ಎಂಬ ಕನಿಷ್ಠ ಜ್ಞಾನವೂ ಸರ್ಕಾರಕ್ಕೆ ಇಲ್ಲ’ ಎಂದು ಕಿಡಿಕಾರಿದರು.  

ಶಾಸಕ ಗೋಪಾಲಯ್ಯ ಮಾತನಾಡಿ, ‘ಎರಡು ಕಡೆ ಕಾರ್ಯಕ್ರಮ ಆಯೋಜಿಸುವ ಅವಶ್ಯ ಇರಲಿಲ್ಲ. ವಿಧಾನಸೌಧದ ಬಳಿ ಕಾಂಗ್ರೆಸ್ ಕಾರ್ಯಕ್ರಮದಂತೆ ಪ್ರಚಾರದ ದೃಷ್ಟಿಯಿಂದ ಆಟಗಾರರನ್ನು ಸನ್ಮಾನ ಮಾಡಿದ್ದಾರೆ. ಕಾಲ್ತುಳಿತದಲ್ಲಿ ಜನರು ಮೃತಪಟ್ಟಿರುವ ವಿಷಯ ಗೊತ್ತಿದ್ದರೂ ಕಾರ್ಯಕ್ರಮ ಮುಂದುವರಿಸಿದ್ದಾರೆ. ಇದು ಖಂಡನೀಯ’ ಎಂದರು.

ಪ್ರತಿಭಟನೆಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಎಚ್. ಪಾಟೀಲ,  ಸಂಸದರಾದ ಗೋವಿಂದ ಕಾರಜೋಳ, ಪಿ.ಸಿ.ಮೋಹನ್, ಶಾಸಕರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಎಲ್.ಎ. ರವಿಸುಬ್ರಹ್ಮಣ್ಯ, ಉದಯ್ ಗರುಡಾಚಾರ್, ಬೈರತಿ ಬಸವರಾಜ್, ಎಸ್. ಮುನಿರಾಜು, ಎಂ. ಕೃಷ್ಣಪ್ಪ, ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಕೆ. ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾ ಘಟಕದ ಅಧ್ಯಕ್ಷ ಸಪ್ತಗಿರಿ ಗೌಡ ಭಾಗವಹಿಸಿದ್ದರು.

ಹೆಣಗಳ ಮೇಲಿನ ರಾಜಕೀಯ ಬಿಜೆಪಿಗೆ ಹೊಸದೇನಲ್ಲ– ಸಿಎಂ:

‘ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ನಮ್ಮ ರಾಜೀನಾಮೆ ಕೇಳುವ ಮೊದಲು ಇಂತಹದ್ದೇ ಅವಘಡಗಳು ನಡೆದಿದ್ದ ಸಂದರ್ಭದಲ್ಲಿ ರಾಜೀನಾಮೆ ನೀಡಿದ್ದ ಬಿಜೆಪಿ ನಾಯಕರ ಪಟ್ಟಿಯನ್ನು ಬಿಜೆಪಿ ನಾಯಕರು ಬಿಡುಗಡೆ ಮಾಡಲಿ’ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ‘ಕಾಲ್ತುಳಿತ ಘಟನೆಯ ಹೊಣೆಯನ್ನು ನಾವು ಹೊತ್ತಿದ್ದು ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ಇಷ್ಟೆಲ್ಲ ಕ್ರಮಕೈಗೊಂಡ ನಂತರವೂ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿರುವುದು ರಾಜಕೀಯ ದುರುದ್ದೇಶದಿಂದ ಹೊರತು ಜನರ ಬಗೆಗಿನ ಕಾಳಜಿಯಿಂದ ಅಲ್ಲ ಎನ್ನುವುದು ಸ್ಪಷ್ಟ. ಅಪಘಾತ ಹತ್ಯೆ ದೌರ್ಜನ್ಯಗಳು ನಡೆದ ತಕ್ಷಣ ಸತ್ತ ಜೀವಗಳನ್ನು ಹುಡುಕಿಕೊಂಡು ಹೋಗುವ ರಣಹದ್ದುಗಳಂತೆ ಎರಗಿ ಬೀಳುವುದು ಬಿಜೆಪಿಯ ರಕ್ತದಲ್ಲಿಯೇ ಇದೆ. ಹೆಣಗಳ ಮೇಲಿನ ರಾಜಕೀಯ ಬಿಜೆಪಿ ಪಾಲಿಗೆ ಹೊಸದೇನಲ್ಲ’ ಎಂದಿದ್ದಾರೆ. ‘ಗುಜರಾತ್‌ನಲ್ಲಿ 2002ರಲ್ಲಿ ನಡೆದ ಹತ್ಯಾಕಾಂಡದಲ್ಲಿ ಅಂದಾಜು 2 ಸಾವಿರ ಅಮಾಯಕರು ಪ್ರಾಣ ಕಳೆದುಕೊಂಡಿದ್ದರೂ ಅಂದು ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ರಾಜೀನಾಮೆ ನೀಡಿರಲಿಲ್ಲ. ಇಲ್ಲಿಯವರೆಗೆ ಕನಿಷ್ಠ ವಿಷಾದವನ್ನೂ ಸೂಚಿಸಿಲ್ಲ.ಪಹಲ್ಗಾಮ್‌ನಲ್ಲಿ ಪಾಕ್ ಉಗ್ರಗಾಮಿಗಳು ನಡೆಸಿದ್ದ ಹತ್ಯಾಕಾಂಡದಲ್ಲಿ 26 ಅಮಾಯಕರ ಸಾವಿಗೆ ಕಾರಣರಾದ ನಾಲ್ಕು ಮಂದಿ ದುರುಳರು ಯಾರು ಎನ್ನುವುದನ್ನು ಪತ್ತೆ ಹಚ್ಚಲಾಗಿಲ್ಲ. ಇದು ಕೇಂದ್ರ ಸರ್ಕಾರದ ವೈಫಲ್ಯ ಅಲ್ಲವೇ? ಮಣಿಪುರದಲ್ಲಿ ನಡೆಯುತ್ತಿರುವ ಹಿಂಸೆಯ ಹೊಣೆಯನ್ನು ಕೇಂದ್ರ ಸಚಿವರು ಹೊರುವುದು ಬೇಡವೇ? ಗುಜರಾತ್‌ನ ಮೋರ್ಬಿ ಸೇತುವೆ ಕುಸಿದು ಬಿದ್ದು 140 ಮಂದಿ ಮೃತಪಟ್ಟಿದ್ದರು. ಜನವರಿ ತಿಂಗಳಲ್ಲಿ ಮಹಾ ಕುಂಭಮೇಳದಲ್ಲಿ 30 ಯಾತ್ರಿಕರು ಪ್ರಾಣ ಕಳೆದುಕೊಂಡರು. ಆ ರಾಜ್ಯಗಳಲ್ಲಿ ಮುಖ್ಯಮಂತ್ರಿ ಆಗಿರುವವರು ಬಿಜೆಪಿಗೆ ಸೇರಿದವರಲ್ಲವೇ? ಇವರು ರಾಜೀನಾಮೆ ನೀಡುವುದು ಬಿಡಿ ಆ ಘಟನೆಗಳ ಬಗ್ಗೆ ಇಲ್ಲಿಯವರೆಗೆ ಸರಿಯಾದ ತನಿಖೆಯನ್ನೇ ಅಲ್ಲಿನ ಸರ್ಕಾರ ನಡೆಸಿಲ್ಲ. ಹೀಗಿರುವಾಗ ನಮ್ಮ ರಾಜೀನಾಮೆ ಕೇಳಲು ಬಿಜೆಪಿ ನಾಯಕರಿಗೆ ಯಾವ ನೈತಿಕತೆ ಇದೆ’ ಎಂದೂ ಪ್ರಶ್ನಿಸಿದ್ದಾರೆ.

ಉ.ಪ್ರಮಹಾರಾಷ್ಟ್ರ ಕಾಲ್ತುಳಿತಕ್ಕೆ ಯಾರು ಹೊಣೆ: ಡಿಕೆಶಿ

‘ಉತ್ತರಪ್ರದೇಶ ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಕಾಲ್ತುಳಿತ ಆಗಿದೆ. ಇದಕ್ಕೆ ಯಾರು ಹೊಣೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದರು. ಬಿಜೆಪಿಯ ಟೀಕೆಗೆ ಪ್ರತಿಕ್ರಿಯಿಸಿದ ಅವರು‘ಕಾಲ್ತುಳಿತ ಪ್ರಕರಣದಲ್ಲಿ ನಮ್ಮನ್ನು ಟೀಕೆ ಮಾಡುತ್ತಿರುವ ಬಿಜೆಪಿಯವರನ್ನು ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡೋಣ’ ಎಂದು ವ್ಯಂಗ್ಯವಾಡಿದರು. ‘ಎರಡು ದಿನಗಳ ಹಿಂದೆ ನಾನು ಅಹಮದಾಬಾದ್‌ಗೆ ಹೋಗಿದ್ದೆ. ನಾನೇನಾದರೂ ಆ ಘಟನೆಯ (ವಿಮಾನ ಪತನ) ಬಗ್ಗೆ ಕೇಂದ್ರ ಸರ್ಕಾರವನ್ನು ಗುರಿ ಮಾಡಿ ಮಾತನಾಡಿದ್ದೇನೆಯೇ’ ಎಂದು ಅವರು ಪ್ರಶ್ನಿಸಿದರು. ‘ಯಾರು ಹೆಚ್ಚು ಬಲವುಳ್ಳವರೋ ಅವರಿಗೆ ಶತ್ರುಗಳು ಜಾಸ್ತಿ. ಕಡಿಮೆ ಬಲ ಇದ್ದರೆ ಶತ್ರುಗಳೂ ಕಡಿಮೆ. ಬಲವೇ ಇಲ್ಲದಿದ್ದರೆ ಶತ್ರುಗಳೇ ಇಲ್ಲ. ಅವರಿಗೆ ನಮ್ಮನ್ನು ಕಂಡರೆ ಭಯ. ನೀವು (ಮಾಧ್ಯಮ) ನಮ್ಮ ಜತೆ ಇದ್ದರೆ 2028 ರಲ್ಲಿ ಮತ್ತೆ ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.