ADVERTISEMENT

ಮೆಟ್ರೊ: ನೈಸ್‌ ಜಾಗಕ್ಕೆ ಮೊರೆ

3839 ಚ.ಮೀ ಜಾಗವನ್ನು ಬಾಡಿಗೆಗೆ ಪಡೆಯಲಿದೆ ಬಿಎಂಆರ್‌ಸಿಎಲ್‌

​ಪ್ರಜಾವಾಣಿ ವಾರ್ತೆ
Published 4 ಮೇ 2022, 19:45 IST
Last Updated 4 ಮೇ 2022, 19:45 IST
.
.   

ಬೆಂಗಳೂರು: ಮೆಟ್ರೊ ಕಾಮಗಾರಿ ಸಲುವಾಗಿ ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ (ನೈಸ್‌) ಸುಪರ್ದಿಯಲ್ಲಿರುವ 3839 ಚ.ಮೀ ಜಾಗವನ್ನು ಬಾಡಿಗೆಗೆ ಪಡೆಯಲು ಬೆಂಗಳೂರು ಮೆಟ್ರೊ ರೈಲು ನಿಮಗವು (ಬಿಎಂಆರ್‌ಸಿಎಲ್‌) ನಿರ್ಧರಿಸಿದೆ.

ಮೆಟ್ರೊ ಮಾರ್ಗ ವಿಸ್ತರಣಾ ಕಾಮಗಾರಿಗಳಿಗೆ ಜಾಗದ ಕೊರತೆ ಇರುವುದರಿಂದ ನೈಸ್‌ ಜಾಗವನ್ನು ಬಾಡಿಗೆಗೆ ಪಡೆದು ಅಲ್ಲಿ ನಿರ್ಮಾಣ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಈ ಜಾಗಕ್ಕಾಗಿ ತಿಂಗಳಿಗೆ ₹ 5.75 ಲಕ್ಷ ರೂಪಾಯಿ ಬಾಡಿಗೆಯನ್ನು ನಿಗದಿಪಡಿಸಲಾಗಿದೆ.

‘ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ (ಬಿಐಇಸಿ) ಬಳಿ ಮೆಟ್ರೊ ನಿಲ್ದಾಣನಿರ್ಮಾಣಗೊಳ್ಳುತ್ತಿದೆ. ಇಲ್ಲಿಗೆ ಸಮೀಪದಲ್ಲಿರುವ ನೈಸ್‌ ಜಾಗಕ್ಕೆ ಸಂಪರ್ಕದ ಕೊರತೆ ಇರುವುದರಿಂದ ತುಮಕೂರು ರಸ್ತೆಯಲ್ಲಿ ಮೆಟ್ರೊ ಎತ್ತರಿಸಿದ ಮಾರ್ಗದ ವಿಸ್ತರಣೆ ಕಾಮಗಾರಿ ವಿಳಂಬವಾಗಿದೆ. ಈ ಸಣ್ಣ ಪ್ರಮಾಣದ ಜಾಗವನ್ನು ಮಾರುಕಟ್ಟೆ ದರವನ್ನು ನೀಡಿ ಕಾಯಂ ಆಗಿ ಸ್ವಾಧೀನಪಡಿಸಿಕೊಳ್ಳುವ ಅಗತ್ಯ ಇಲ್ಲ. ಹಾಗಾಗಿ ನೈಸ್‌ ಸಂಸ್ಥೆಯ ಜಾಗವನ್ನು ಬಾಡಿಗೆಗೆ ಪಡೆಯಲು ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸುವಂತೆ ಕೋರಿದ್ದೇವೆ’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ನಾಲ್ಕು ಎಕರೆಗೆ ₹ 100 ಕೋಟಿ: ಇದಲ್ಲದೇ ಮೆಟ್ರೊ ಕಾಮಗಾರಿಗಾಗಿ ನೈಸ್‌ನ ಸುಮಾರು 4 ಎಕರೆಗಳಷ್ಟು ಜಾಗವನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಬಿಎಂಆರ್‌ಸಿಎಲ್ ಸ್ವಾಧೀನಪಡಿಸಿಕೊಳ್ಳಲಿದೆ. ಈ ಸಲುವಾಗಿ ₹ 100 ಕೋಟಿ ಪರಿಹಾರ ಪ್ಯಾಕೇಜ್‌ ಅನ್ನು ಠೇವಣಿ ಇಟ್ಟಿದೆ. ಕೆಐಎಡಿಬಿಯು ಸರ್ಕಾರದ ಜೊತೆ ಸಮಾಲೋಚನೆ ನಡೆಸಿದ ಬಳಿಕ ಮೊತ್ತವನ್ನು ನೈಸ್‌ಗೆ ಬಿಡುಗಡೆ ಮಾಡಲಿದೆ ಎಂದು ಗೊತ್ತಾಗಿದೆ.

‘ಮೆಟ್ರೊ ಕಾಮಗಾರಿಗಾಗಿ ತುಮಕೂರು ರಸ್ತೆ ಹಾಗೂ ಹೊಸೂರು ರಸ್ತೆಗಳ ಬಳಿ ನೈಸ್‌ಗೆ ಸೇರಿದ ಜಾಗದ ಅಗತ್ಯವಿದೆ. ಈ ಜಾಗವನ್ನು ಕಾಯಂ ಆಗಿ ಬಳಸಿಕೊಳ್ಳಬೇಕಾಗಿರುವುದರಿಂದ ಯಾವ ರೀತಿಯ ಪರಿಹಾರ ನೀಡಬೇಕು ಎಂಬ ಬಗ್ಗೆ ಜಿಜ್ಞಾಸೆ ಇದೆ. ನಾವು ಪರಿಹಾರದ ಪ್ಯಾಕೇಜ್‌ ಅನ್ನು ಠೇವಣಿ ಇಟ್ಟು, ಬಳಿಕ ನೈಸ್‌ನ ಜಾಗದಲ್ಲಿ ನಿರ್ಮಾಣ ಕಾರ್ಯವನ್ನು ಆರಂಭಿಸಿದ್ದೇವೆ. ಈ ಬಗ್ಗೆ ಸರ್ಕಾರದ ಹಂತದಲ್ಲಿ ತೀರ್ಮಾನ ಕೈಗೊಳ್ಳಬೇಕಿದೆ’ ಎಂದು ಬಿಎಂಆರ್‌ಸಿಎಲ್‌ನ ಭೂಸ್ವಾಧೀನ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್‌.ಶಿವಶಂಕರ್‌ ಅವರು ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.