ADVERTISEMENT

ಕುಸಿದ ರಸ್ತೆ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೊ

ನಮ್ಮ ಮೆಟ್ರೊ: ಶಿವಾಜಿನಗರ ಸುರಂಗ ಮಾರ್ಗ ಕೊರೆಯುವ ವೇಳೆ ಕುಸಿದ ಭೂಮಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 19:45 IST
Last Updated 26 ಡಿಸೆಂಬರ್ 2020, 19:45 IST
ಕಾಂಕ್ರೀಟ್‌ ರಸ್ತೆ ಕುಸಿದಿರುವ ವಿಡಿಯೊದ ಸ್ಕ್ರೀನ್‌ಶಾಟ್‌
ಕಾಂಕ್ರೀಟ್‌ ರಸ್ತೆ ಕುಸಿದಿರುವ ವಿಡಿಯೊದ ಸ್ಕ್ರೀನ್‌ಶಾಟ್‌   

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ನಡೆಯುವ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶಿವಾಜಿನಗರ–ಬಂಬೂ ಬಜಾರ್‌ ಮಾರ್ಗದಲ್ಲಿ ಸುರಂಗ ಕೊರೆಯುವ ವೇಳೆ ಕಾಂಕ್ರೀಟ್‌ ರಸ್ತೆ ಕುಸಿದು, ಆಳವಾದ ಗುಂಡಿ ಬಿದ್ದ ವಿಡಿಯೊ ಇದಾಗಿದೆ.

ಒಂದು ವಾರದ ಹಿಂದೆ ಇದೇ ಕಾಮಗಾರಿಯ ಪರಿಣಾಮ ಈ ಮಾರ್ಗದಲ್ಲಿನ ಮನೆಯೊಂದಕ್ಕೆ ಹಾನಿಯಾಗಿತ್ತು. ತಕ್ಷಣವೇ ಎಚ್ಚೆತ್ತುಕೊಂಡಿದ್ದ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ನಿವಾಸಿಗಳ ಸ್ಥಳಾಂತರಕ್ಕೆ ಸೂಚನೆ ನೀಡಿತ್ತು. ಈಗ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ವಿಡಿಯೊವನ್ನು ಯಾವ ದಿನದಂದು ಸೆರೆ ಹಿಡಿಯಲಾಗಿದೆ ಎಂಬುದು ಗೊತ್ತಿಲ್ಲ. ಆದರೆ, ನೀರಿನ ಪೈಪ್‌ ಕಾಂಕ್ರೀಟ್‌ ರಸ್ತೆ ಕುಸಿಯುತ್ತಿರುವ ದೃಶ್ಯ ಅದರಲ್ಲಿ ಸೆರೆಯಾಗಿದೆ. ಸುಮಾರು ಐದು ಅಡಿಯಷ್ಟು ವಿಸ್ತಾರದ ಗುಂಡಿ ಬಿದ್ದಿದೆ. ಮೆಟ್ರೊ ಕಾಮಗಾರಿ ನಡೆಯುತ್ತಿರುವ ಪ್ರದೇಶದ ಆಸುಪಾಸಿನಲ್ಲಿ ವಾಸಿಸುವ ನಮಗೆ ಭಯವಾಗುತ್ತಿದೆ’ ಎಂದು ಶಿವಾಜಿನಗರ ನಿವಾಸಿ ಸೈಯದ್‌ ಅಹಮ್ಮದ್ ಆತಂಕ ವ್ಯಕ್ತಪಡಿಸಿದರು.

ADVERTISEMENT

48 ಸೆಕೆಂಡ್‌ಗಳಿರುವ ಈ ವಿಡಿಯೊವನ್ನು ಶಿವಾಜಿನಗರ–ಬಂಬೂ ಬಜಾರ್‌ ರಸ್ತೆಯಲ್ಲಿ ಸೆರೆ ಹಿಡಿಯಲಾಗಿದೆ.

ಮನೆಗೆ ಹಾನಿಯಾಗಿತ್ತು:ಕಂಟೋನ್ಮೆಂಟ್‌ ನಿಲ್ದಾಣದಿಂದ ಸುರಂಗ ಕೊರೆಯುತ್ತಿರುವ ಯಂತ್ರಗಳು (ಟಿಬಿಎಂ) 250 ಮೀಟರ್ ದೂರ ಸಾಗುವುದರೊಳಗೆ ಈ ಮಾರ್ಗದ ಮನೆಗಳಲ್ಲಿ ಬಿರುಕು ಕಾಣಿಸಿಕೊಳ್ಳಲು ಶುರುವಾಗಿತ್ತು.

ಕಂಟೋನ್ಮೆಂಟ್ ಮೆಟ್ರೊ ನಿಲ್ದಾಣ-ಶಿವಾಜಿನಗರ ನಡುವೆ ಬರುವ ಬಂಬೂ ಬಜಾರ್ ಸಮೀಪದ ರಸ್ತೆಯಲ್ಲಿ ಅಬ್ದುಲ್ ರಜಾಕ್ ಎಂಬುವರ ಮನೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ಘಟನೆ ನಂತರ, ತಮ್ಮ ಮನೆಗಳಿಗೂ ಹಾನಿಯಾಗಬಹುದು ಎಂದು ಈ ಮಾರ್ಗ ಸಾಗುವ ಪ್ರದೇಶದ ಆಸುಪಾಸಿನ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದರು.

‘ನಾವು ಮನೆ ಕಟ್ಟಿದ ಜಾಗದಲ್ಲಿ ಹಿಂದೆ ತೆರೆದ ಬಾವಿ ಇತ್ತು. ಅದನ್ನು ಮುಚ್ಚಿ, ಆ ಜಾಗದಲ್ಲಿ ಮನೆ ನಿರ್ಮಿಸಲಾಗಿತ್ತು. ಎರಡು ವರ್ಷದ ಹಿಂದೆ ಒಂದು ಮಹಡಿಯ ಕಾಂಕ್ರೀಟ್ ಮನೆ ಮಾಡಿಕೊಂಡಿದ್ದೆವು. ನೆರೆಯ ಮನೆಗಳಲ್ಲೂ ಇದೇ ರೀತಿ, ಮೆಟ್ರೊ ಕಾಮಗಾರಿಯಿಂದ ನೀರು ನುಗ್ಗುವುದರ ಜತೆಗೆ ಬಿರುಕುಗಳು ಕಾಣಿಸಿಕೊಂಡಿವೆ’ ಎಂದೂ ಅಬ್ದುಲ್‌ ರಜಾಕ್‌ ಹೇಳಿದ್ದರು. ಸ್ಥಳಾಂತರಗೊಳ್ಳಲು ಹೇಳಿದ್ದ ಬಿಎಂಆರ್‌ಸಿಎಲ್‌, ಇದಕ್ಕೆ ಪರಿಹಾರವನ್ನು ನೀಡುವುದಾಗಿ ಹೇಳಿತ್ತು. ಆದರೆ, ಪರಿಹಾರ ಸಿಕ್ಕಿಲ್ಲ ಎಂದು ಅವರು ದೂರಿದ್ದರು.

‘ಎರಡೂವರೆ ತಿಂಗಳು ಹಳೆಯ ವಿಡಿಯೊ’
‘ಈಗ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿರುವ ವಿಡಿಯೊವನ್ನು ಅ.16ರಂದು ಮಾಡಲಾಗಿದೆ. ಆಗ ಟಿಬಿಎಂಗಳು 50 ಮೀಟರ್‌ ಅಷ್ಟೇ ಮುಂದೆ ಸಾಗಿದ್ದವು. ಅಂದರೆ, 50 ಮೀಟರ್‌ನಷ್ಟು ಮಾತ್ರ ಸುರಂಗ ಕೊರೆಯಲಾಗಿತ್ತು. ಆ ಪ್ರದೇಶದಲ್ಲಿ ವಾಸಿಸುತ್ತಿದ್ದವರನ್ನು ಅವರ ಒಪ್ಪಿಗೆ ಮೇರೆಗೆ ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ. ಈ ತಾತ್ಕಾಲಿಕ ಸ್ಥಳಾಂತರ ಅವಧಿಗೆ ನಿವಾಸಿಗಳಿಗೆ ಪರಿಹಾರವನ್ನೂ ನೀಡಲಾಗುತ್ತಿದೆ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸುರಂಗ ಕೊರೆಯುವ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ಈ ಮಾರ್ಗದಲ್ಲಿನ ಕಟ್ಟಡಗಳ ಸ್ಥಿತಿ–ಗತಿಯ ಸಮೀಕ್ಷೆ ನಡೆಸಲಾಗಿದೆ. ಯಾವ ಕಟ್ಟಡದ ಪರಿಸ್ಥಿತಿ ಹೇಗಿದೆ ಎಂಬುದು ತಿಳಿದಿದೆ. ಅಲ್ಲದೆ, ಈಗಾಗಲೇ ಸ್ಥಳದಲ್ಲಿ ಸುರಂಗ ಮಾರ್ಗ ಕೊರೆಯುವ ಕಾರ್ಯಾಚರಣೆಯ ನಿರ್ವಹಣೆಗೆ ಉಪಕರಣಗಳನ್ನು ಅಳವಡಿಸಲಾಗಿದೆ. ಯಾವುದೇ ಕಟ್ಟಡಕ್ಕೆ ಹಾನಿಯಾಗುವಂತಿದ್ದರೆ ಇಂತಹ ಉಪಕರಣಗಳು ಮೊದಲೇ ಮಾಹಿತಿ ರವಾನಿಸುತ್ತವೆ' ಎಂದರು.

‘ಎಲ್ಲ ಮನೆಗಳನ್ನು ಸ್ಥಳಾಂತರಿಸಲಾಗುತ್ತದೆ ಎಂಬುದು ಸರಿಯಲ್ಲ. ಯಾವ ಕಟ್ಟಡಗಳು ಸದೃಢವಾಗಿಲ್ಲವೋ ಅಂತಹ ಕಟ್ಟಡಗಳ ನಿವಾಸಿಗಳ ಸ್ಥಳಾಂತರಕ್ಕೆ ಮಾತ್ರ ಕ್ರಮ ಕೈಗೊಳ್ಳಲಾಗುತ್ತದೆ’ ಎಂದೂ ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.