ADVERTISEMENT

ಸೈಬರ್ ಕ್ರೈಂ ಇನ್‌ಸ್ಪೆಕ್ಟರ್‌ ಹೆಸರಿನಲ್ಲಿ ವಂಚನೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 17:46 IST
Last Updated 10 ಡಿಸೆಂಬರ್ 2021, 17:46 IST

ಬೆಂಗಳೂರು: ಸೈಬರ್ ಕ್ರೈಂ ಠಾಣೆ ಇನ್‌ಸ್ಪೆಕ್ಟರ್ ಎಂಬುದಾಗಿ ಹೇಳಿಕೊಂಡು ಯುವಕರೊಬ್ಬರನ್ನು ಬೆದರಿಸಿ ಹಣ ಪಡೆದು ವಂಚಿಸಲಾಗಿದ್ದು, ಈ ಬಗ್ಗೆ ಎಫ್‌ಐಆರ್ ದಾಖಲಾಗಿದೆ.

‘ಜಕ್ಕೂರಿನ ನಿವಾಸಿಯಾಗಿರುವ 28 ವರ್ಷದ ಯುವಕ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸ್ ಮೂಲಗಳು ಹೇಳಿವೆ.

‘ದೂರುದಾರರ ವಾಟ್ಸ್‌ಆ್ಯಪ್‌ಗೆ ನ. 29ರಂದು ವಿಡಿಯೊ ಕರೆ ಮಾಡಿದ್ದ ಅಪರಿಚಿತ, ಆ ದೃಶ್ಯವನ್ನು ಚಿತ್ರೀಕರಿಸಿಕೊಂಡಿದ್ದ. ನಂತರ, ಕರೆ ಕಡಿತಗೊಳಿಸಿದ್ದ. ದೂರುದಾರರ ವಿಡಿಯೊವನ್ನು ಮಾರ್ಫಿಂಗ್ ಮಾಡಿದ್ದ ಆತ, ಅಶ್ಲೀಲವಾಗಿ ಬಿಂಬಿಸಿ ಬೇರೊಂದು ವಿಡಿಯೊ ಸೃಷ್ಟಿಸಿದ್ದ.’

ADVERTISEMENT

‘ಡಿ. 6ರಂದು ವಾಟ್ಸ್‌ಆ್ಯಪ್‌ಗೆ ಅಶ್ಲೀಲ ವಿಡಿಯೊ ಕಳುಹಿಸಿದ್ದ ಆರೋಪಿ, ತಾನೊಬ್ಬ ಸೈಬರ್‌ ಕ್ರೈಂ ಠಾಣೆ ಇನ್‌ಸ್ಪೆಕ್ಟರ್ ಎಂಬುದಾಗಿ ಪರಿಚಯಿಸಿಕೊಂಡಿದ್ದ. ‘ಅಶ್ಲೀಲ ವಿಡಿಯೊ ಚಿತ್ರೀಕರಿಸುತ್ತಿರುವ ಹಾಗೂ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೊ ಹರಿಬಿಡುತ್ತಿರುವ ಆರೋಪದಡಿ ನಿಮ್ಮ ವಿರುದ್ಧ ದೂರು ದಾಖಲಾಗಿದೆ’ ಎಂಬುದಾಗಿ ದೂರುದಾರರನ್ನು ಬೆದರಿಸಿದ್ದ’ ಎಂದೂ ಮೂಲಗಳು ತಿಳಿಸಿವೆ.

‘ಪ್ರಕರಣ ಮುಕ್ತಾಯಗೊಳಿಸಬೇಕಾದರೆ ಹಣ ನೀಡಬೇಕೆಂದು ಆರೋಪಿ ಬೇಡಿಕೆ ಇರಿಸಿದ್ದ. ಹೆದರಿದ್ದ ದೂರುದಾರ, ಆರೋಪಿಯ ಬ್ಯಾಂಕ್‌ ಖಾತೆಗೆ ₹ 7 ಸಾವಿರ ಹಾಕಿದ್ದರು. ಅದಾದ ನಂತರವೂ ಆರೋಪಿ ಹಣಕ್ಕಾಗಿ ಪೀಡಿಸಲಾರಂಭಿಸಿದ್ದ. ನೊಂದ ಯುವಕ, ಠಾಣೆಗೆ ಬಂದು ವಿಚಾರಿಸಿದ್ದರು. ಅಂಥ ಇನ್‌ಸ್ಪೆಕ್ಟರ್‌ ಯಾರೂ ಇಲ್ಲವೆಂಬುದು ಗೊತ್ತಾಗಿತ್ತು. ಬಳಿಕವೇ ದೂರು ನೀಡಿದ್ದಾರೆ’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.