ADVERTISEMENT

ಆಸ್ತಿಗಾಗಿ ತಂದೆಯನ್ನು ಬೀದಿಗೆ ತಳ್ಳಿದ ಮಕ್ಕಳು

ಮಕ್ಕಳ ನಡೆಗೆ ಕಿಡಿ ಕಾರಿದ ನ್ಯಾಯಪೀಠ l ಪೊಲೀಸರ ವಿರುದ್ಧ ಶಿಸ್ತುಕ್ರಮಕ್ಕೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2018, 20:20 IST
Last Updated 9 ನವೆಂಬರ್ 2018, 20:20 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಸ್ಥಿರಾಸ್ತಿ ಕಬಳಿಸಿ ವೃದ್ಧ ತಂದೆಯನ್ನು ಮಕ್ಕಳೇ ಬೀದಿಗೆ ತಳ್ಳಿದ ಆರೋಪ ಹೊತ್ತ ಪ್ರಕರಣವೊಂದರಲ್ಲಿ ಹೈಕೋರ್ಟ್‌, ಮಕ್ಕಳ ನಡೆಗೆ ಕೆಂಡ ಕಾರಿದೆ.

‘ನನ್ನ ಮಕ್ಕಳಿಂದ ನನಗೆ ಅನ್ಯಾಯವಾಗಿದೆ. ನ್ಯಾಯ ಕೊಡಿಸಬೇಕು ಮತ್ತು ರಕ್ಷಣೆ ಒದಗಿಸಬೇಕು’ ಎಂದು ಕೋರಿ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಸಿ.ಎ ಕೆರೆ ಹೋಬಳಿಯ ಅಣ್ಣೂರು ಗ್ರಾಮದ 71 ವರ್ಷದ ಪಟೇಲ್ ಶಿವಲಿಂಗೇಗೌಡ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಬಿ. ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಮಕ್ಕಳ ವಿರುದ್ಧ ಕಿಡಿ ಕಾರಿದ ನ್ಯಾಯಮೂರ್ತಿಗಳು, ಉಪವಿಭಾಗಾಧಿಕಾರಿ ಆದೇಶ ಪಾಲಿಸದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

‘ಈ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ ಕೆ.ಎಂ. ದೊಡ್ಡಿ ಪೊಲೀಸ್ ಠಾಣೆಯ ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು‘ ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

‘ಶಿವಲಿಂಗೇಗೌಡರು ತಮ್ಮ ಸ್ವಯಾರ್ಜಿತ ಆಸ್ತಿ ಅನುಭವಿಸುವುದಕ್ಕೆ ಸಂಬಂಧಿಸಿದಂತೆ ಮಂಡ್ಯ ಉಪವಿಭಾಗಾಧಿಕಾರಿ 2017ರ ನವೆಂಬರ್ 14ರಂದು ನೀಡಿರುವ ಆದೇಶ ಪಾಲನೆ ಮಾಡಬೇಕು. ಅದರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ತಾಕೀತು ಮಾಡಿದರು.

ವಿಚಾರಣೆಯನ್ನು ಇದೇ 19ಕ್ಕೆ ಮುಂದೂಡಲಾಗಿದೆ.

ಏನಿದು ಪ್ರಕರಣ?: ‘ನನ್ನ ಇಬ್ಬರು ಮಕ್ಕಳಾದ ಎಸ್. ರಾಮಕೃಷ್ಣ ಹಾಗೂ ಎಸ್. ಬೋರೇಗೌಡ ಸ್ವಯಾರ್ಜಿತ ಆಸ್ತಿಯನ್ನು ಕಬಳಿಸಿ ನನ್ನನ್ನು ಬೀದಿಗೆ ತಳ್ಳಿದ್ದಾರೆ’ ಎಂದು ಶಿವಲಿಂಗೇಗೌಡರು ಉಪವಿಭಾಗಾಧಿಕಾರಿಗೆ ಈ ಹಿಂದೆ ದೂರು ಕೊಟ್ಟಿದ್ದರು.

ಈ ದೂರಿನ ವಿಚಾರಣೆ ನಡೆಸಿದ್ದ ಉಪವಿಭಾಗಾಧಿಕಾರಿ, ‘ಶಿವಲಿಂಗೇಗೌಡರ ಶಾಂತಿಯುತ ಜೀವನಕ್ಕೆ ಭಂಗ ಬಾರದಂತೆ ಮಕ್ಕಳು ಹಾಗೂ ಸೊಸೆಯಂದಿರು ಪೋಷಣೆ, ರಕ್ಷಣೆ ಮಾಡಬೇಕು’ ಎಂದು 2017ರ ನವೆಂಬರ್ 14ರಂದು ಆದೇಶಿಸಿದ್ದರು.

ಆದರೆ, ಈ ಆದೇಶ ಪಾಲನೆಯಾಗಿಲ್ಲ ಎಂದು ಆಕ್ಷೇಪಿಸಿ ಶಿವಲಿಂಗೇಗೌಡ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

**

‘ಆತನನ್ನು ಜೈಲಿಗೆ ಕಳಿಸಿ’

ನ್ಯಾಯಮೂರ್ತಿಗಳು ಆದೇಶ ಬರೆಸುತ್ತಿದ್ದ ವೇಳೆ ಶಿವಲಿಂಗೇಗೌಡರ ಹಿರಿಯ ಮಗ ರಾಮಕೃಷ್ಣ, ‘ಸ್ವಾಮಿ ನಮ್ದೂ ಸ್ವಲ್ಪ ಕೇಳಿ, ನಾವೂ ಹೇಳ್ತೀವಿ’ ಎಂದು ಏರಿದ ದನಿಯಲ್ಲಿ ನುಡಿದರು.

ಇದಕ್ಕೆ ಕೆರಳಿದ ನ್ಯಾಯಮೂರ್ತಿಗಳು, ‘ಕೋರ್ಟ್ ಕಲಾಪಕ್ಕೆ ಅಡ್ಡಿಪಡಿಸಿದ, ಅಗೌರವ ತೋರಿದ ಕಾರಣಕ್ಕೆ ಈತನನ್ನು ಬಂಧಿಸಿ ಜೈಲಿಗೆ ಕರೆದುಕೊಂಡು ಹೋಗಿ’ ಎಂದು ಪೊಲೀಸರಿಗೆ ಸೂಚಿಸಿದರು.

**

‘ಮನಸ್ಸಿಗೆ ನೋವಾಗುತ್ತದೆ’

‘ಇದೊಂದು ದುರದೃಷ್ಟಕರ ಹಾಗೂ ಅಪರೂಪದ ಪ್ರಕರಣ. ಸನ್ನಿವೇಶ ಗಮನಿಸಿದರೆ ಮನಸ್ಸಿಗೆ ಬಹಳ ನೋವಾಗುತ್ತದೆ’ ಎಂದು ನ್ಯಾಯಮೂರ್ತಿಗಳು ವ್ಯಥೆ ಹೊರಹಾಕಿದರು.

‘ಮಕ್ಕಳ ದುಂಡಾವರ್ತನೆಯಿಂದ ಒಬ್ಬ ವೃದ್ಧ ತಂದೆ ಇಂದು ಅಸಹಾಯಕನಾಗಿ ನ್ಯಾಯದ ಭಿಕ್ಷೆ ಬೇಡುತ್ತಿದ್ದಾನೆ. ಈ ಮಕ್ಕಳು ಕೊಟ್ಟ ಕಷ್ಟಕ್ಕೆ ತಾಯಿಯೂ ಪ್ರಾಣ ಕಳೆದುಕೊಂಡಿದ್ದಾಳೆ ಎಂಬ ಸಂಗತಿ ಅರಗಿಸಿಕೊಳ್ಳಲಿಕ್ಕೇ ಆಗದು’ ಎಂದರು.

**

ಕರುಣೆ, ದಯೆ, ಮನುಷ್ಯತ್ವ ಇಲ್ಲದ ಇವರನ್ನು ಮಕ್ಕಳೆಂದು ಕರೆಯಬೇಕೆ, ವೃದ್ಧ ತಂದೆಯನ್ನು ಬೀದಿಗೆ ತಳ್ಳಿರುವ ಇವರು ಮಕ್ಕಳಲ್ಲ, ಗೂಂಡಾಗಳು.

–ಬಿ.ವೀರಪ್ಪ, ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.