ADVERTISEMENT

ದೊಡ್ಡಮ್ಮನಿಗೇ ವಂಚನೆ: ಚಿತ್ರ ನಿರ್ದೇಶಕನ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 9:36 IST
Last Updated 17 ಡಿಸೆಂಬರ್ 2019, 9:36 IST

ಬೆಂಗಳೂರು: ಪ್ರಕರಣವೊಂದರಲ್ಲಿ ಸಿಸಿಬಿ ಪೊಲೀಸರು ಬಂಧಿಸಿರುವ ಸಹೋದರ ಸಂಬಂಧಿಯನ್ನು ಬಿಡಿಸಲು ದೊಡ್ಡಮ್ಮನಿಂದ ₹ 10 ಲಕ್ಷ ಪಡೆದ ಆರೋಪದಡಿ ಸಿನಿಮಾ ನಿರ್ದೇಶಕ ಸೇರಿ ಮೂವರ ವಿರುದ್ಧ ಎಚ್‌ಎಎಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಅನ್ನಸಂದ್ರಪಾಳ್ಯ ನಿವಾಸಿ ಗಿರಿಜಮ್ಮ ಎಂಬುವವರು ನೀಡಿದ ದೂರಿನ ಮೇರೆಗೆ ಅವರ ಸಹೋದರಿಯ ಮಕ್ಕಳಾದ ಸಿನಿಮಾ ನಿರ್ದೇಶಕ ಪ್ರಶಾಂತ್‌ ರಾಜ್, ನಿರ್ಮಾಪಕ ನವೀನ್‌ರಾಜ್, ಮತ್ತೊಬ್ಬ ಆರೋಪಿ ನಾಗರಾಜ್ ಎಂಬುವವರ ವಿರುದ್ಧ ಸುಲಿಗೆ ಹಾಗೂ ಪ್ರಾಣ ಬೆದರಿಕೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು. ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಅನ್ನಸಂದ್ರಪಾಳ್ಯದ ಅಭಿಲಾಷ್ ಹಾಗೂ ಮತ್ತೊಬ್ಬ ಆರೋಪಿ, ಉದ್ಯಮಿಯೊಬ್ಬರಿಂದ ಹಣ ಸುಲಿಗೆ ಮಾಡಿದ್ದರು. ಬಿಇ ಪದವೀಧರ ಅಭಿಲಾಷ್‌ ಸುಲಭವಾಗಿ ಹಣ ಮಾಡಲು ಈ ಕೃತ್ಯಕ್ಕೆ ಮುಂದಾಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಅಭಿಲಾಷ್ ಇದೀಗ ವಂಚನೆ ಆರೋಪ ಎದುರಿಸುತ್ತಿರುವ ನಿರ್ದೇಶಕ ಪ್ರಶಾಂತ್ ರಾಜ್ ಅವರ ದೊಡ್ಡಮ್ಮನ ಪುತ್ರ.

ಅಭಿಲಾಷ್‌ನನ್ನು ಬಿಡಿಸುವುದಾಗಿ ಪ್ರಶಾಂತ್‌ರಾಜ್ ಸೇರಿ ಮೂವರು ಆರೋಪಿಗಳು ಆತನ ಪೋಷಕರನ್ನು ಸಂಪರ್ಕಿಸಿದ್ದಾರೆ. ₹ 20 ಲಕ್ಷ ನೀಡಿದರೆ ಬಿಡುಗಡೆ ಮಾಡಿಸುವುದಾಗಿ ಹೇಳಿ ₹10 ಲಕ್ಷ ಹಣ, 542 ಗ್ರಾಂ ಚಿನ್ನಾಭರಣ ಪಡೆದಿದ್ದರು. ಕೆಲವು ದಿನಗಳ ಬಳಿಕ ಕರೆ ಮಾಡಿದ ಪ್ರಶಾಂತ್ ರಾಜ್, ಹೆಚ್ಚುವರಿಯಾಗಿ ಇನ್ನೂ ₹15 ಲಕ್ಷ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಆತಂಕಗೊಂಡ ಗಿರಿಜಮ್ಮ, ‘ಅಭಿಲಾಷ್‌ನನ್ನು ಬಿಡುಗಡೆ ಮಾಡುವುದು ಬೇಡ. ಹಣ ವಾಪಸು ಕೊಡಿ’ ಎಂದಿದ್ದಾರೆ.

ADVERTISEMENT

ಆಗ ಸಿಟ್ಟುಗೊಂಡ ಪ್ರಶಾಂತ್‌ರಾಜ್, ‘ಹಣ ನೀಡದಿದ್ದರೆ ನಿಮ್ಮ ಮನೆ ಮೇಲೆ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸುತ್ತಾರೆ’ ಎಂದು ಹೆದರಿಸಿದ್ದಾರೆ. ಪ್ರಾಣ ಬೆದರಿಕೆ ಕೂಡಾ ಹಾಕಿದ್ದಾರೆ ಎಂದು ಗಿರಿಜಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.