ADVERTISEMENT

ಕೊರೊನಾ ಸೋಂಕಿನ ಆತಂಕದಲ್ಲಿ ಔಷಧ ಮಳಿಗೆ ಸಿಬ್ಬಂದಿ

ಕೊರೊನಾ ಸೋಂಕಿತರ ನೇರ ಸಂಪರ್ಕ l ಅಭದ್ರತೆಯ ನಡುವೆಯೇ ಕೆಲಸ ನಿರ್ವಹಣೆ

ಮನೋಹರ್ ಎಂ.
Published 1 ಜೂನ್ 2021, 22:04 IST
Last Updated 1 ಜೂನ್ 2021, 22:04 IST
ಲಾಕ್‌ಡೌನ್‌ ವೇಳೆ ಸೇವೆ ನೀಡುತ್ತಿರುವ ಮುನೇಶ್ವರ ನಗರದ ಮೆಡಿಕಲ್ ಸ್ಟೋರ್   –ಪ್ರಜಾವಾಣಿ ಚಿತ್ರ
ಲಾಕ್‌ಡೌನ್‌ ವೇಳೆ ಸೇವೆ ನೀಡುತ್ತಿರುವ ಮುನೇಶ್ವರ ನಗರದ ಮೆಡಿಕಲ್ ಸ್ಟೋರ್   –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಆರೋಗ್ಯದಲ್ಲಿ ಏರು ಪೇರು ಕಂಡುಬಂದತಕ್ಷಣ ಜನರು ಬರುವುದು ಔಷಧ ಮಳಿಗೆಗಳತ್ತ. ಕೊರೊನಾ ಸೋಂಕಿತರೇ ಹೆಚ್ಚಿನ ಸಂಖ್ಯೆಯಲ್ಲಿ ಔಷಧ ಖರೀದಿಗೆ ಬರುತ್ತಾರೆ. ಈ ವೇಳೆಫಾರ್ಮಸಿಸ್ಟ್‌ಗಳು (ಔಷಧ ವಿತರಕರು) ಹಾಗೂ ಅಲ್ಲಿನ ಕೆಲಸಗಾರರುಸೋಂಕಿತರ ನೇರ ಸಂಪರ್ಕಕ್ಕೆ ಸಿಲುಕುತ್ತಾರೆ. ಈ ಕಠಿಣ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುವುದೇ ಸವಾಲಾಗಿದೆ’.

ಲಾಕ್‌ಡೌನ್‌ ಅವಧಿಯಲ್ಲಿ ಅಗತ್ಯ ಸೇವೆಯಡಿ ಕಾರ್ಯನಿರ್ವಹಿಸುತ್ತಿರುವ ಔಷಧ ಮಳಿಗೆಗಳ ಫಾರ್ಮಸಿಸ್ಟ್‌ಗಳು ಹಾಗೂ ಅಲ್ಲಿನ ಕೆಲಸಗಾರರ ಆತಂಕದ ಮಾತುಗಳಿವು.

‘ಈ ವಲಯದಲ್ಲಿ ಕೆಲಸ ಮಾಡುತ್ತಿ ರುವವರನ್ನು ಸರ್ಕಾರ ಗಣನೆಗೆ ತೆಗೆದು ಕೊಂಡಿಲ್ಲ. ನಮ್ಮನ್ನು ಕೊರೊನಾ ಸೇನಾನಿಗಳೆಂದೂ ಪರಿಗಣಿಸಿಲ್ಲ. ಸದಾ ಅಪಾಯದ ನೆರಳಲ್ಲೇ ಕೆಲಸ ಮಾಡು ತ್ತಿರುವ ನಮಗೆ ಆರೋಗ್ಯ ಭದ್ರತೆಯೂ ಇಲ್ಲ’ ಎಂದು ಸಿಬ್ಬಂದಿ ಅಳಲು ತೋಡಿಕೊಂಡರು.

ADVERTISEMENT

‘ಕೊರೊನಾ ನಿಯಂತ್ರಣದಲ್ಲಿ ವೈದ್ಯ ರಿಗೆ ಸಮಾನವಾಗಿ ಫಾರ್ಮಸಿ ಕ್ಷೇತ್ರವೂ ಕೆಲಸ ಮಾಡುತ್ತಿದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಯ ಜೊತೆಗೆ ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದವರೂ ಔಷಧ ಖರೀದಿಗೆ ಮಳಿಗೆಗಳತ್ತ ಮೊದಲು ಧಾವಿಸುತ್ತಾರೆ. ಔಷಧ ಮಾರಾಟದ ವೇಳೆ ಅಂಗಡಿ ಯಲ್ಲಿರುವವರಿಗೂ ಸೋಂಕು ಹರಡಬಹುದು. ಈ ಸ್ಥಿತಿಯಲ್ಲೇ ನಾವು ಕೆಲಸ ಮಾಡುವುದು ಅನಿವಾರ್ಯ’ ಎಂದು ಅವೆನ್ಯೂ ರಸ್ತೆಯ ಔಷಧ ಮಳಿಗೆಯೊಂದರ ಫಾರ್ಮಸಿಸ್ಟ್‌ ವಿವೇಕ್‌ ಕಳವಳ ವ್ಯಕ್ತಪಡಿಸಿದರು.

‘ಸರ್ಕಾರ ನಮ್ಮನ್ನು ವಿಶೇಷವಾಗಿ ಪರಿಗಣನೆಗೆ ತೆಗೆದುಕೊಂಡಿಲ್ಲ. ಯಾವುದೇ ಭದ್ರತೆಯೂ ಒದಗಿಸಿಲ್ಲ. ಮಳಿಗೆಗಳಲ್ಲಿ ಮಹಿಳೆಯರು ಹಾಗೂ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಾರೆ. ಬಾಡಿಗೆ ಕಟ್ಟಡದಲ್ಲಿ ಶೌಚಾಲಯದ ವ್ಯವಸ್ಥೆ ಗಳಿಲ್ಲ. ನೆರೆಯ ಸಂಕೀರ್ಣದಲ್ಲಿರುವ ಶೌಚಾಲಯ ಬಳಕೆಗೆ ಬಾಡಿಗೆ ಪಾವತಿಸಬೇಕಿದೆ. ಕೆಲಸಕ್ಕೆ ಬರುವ ಸಿಬ್ಬಂದಿ ಆರೋಗ್ಯ ರಕ್ಷಣೆಯ ಹೊಣೆಯನ್ನು ನಾವೇ ಹೊತ್ತಿದ್ದೇವೆ. ಮಳಿಗೆಯಲ್ಲಿ ಕೆಲಸ ಮಾಡುತ್ತಿರುವ ಏಳು ಮಂದಿಗೂ ಆರೋಗ್ಯ ವಿಮೆ ಮಾಡಿಸಲಾಗಿದೆ’ ಎಂದು ಅವರು ವಿವರಿಸಿದರು.

‘ಜೀವನ ನಿರ್ವಹಣೆಗಾಗಿ ಕೆಲಸ ಅನಿವಾರ್ಯ. ಬರುವ ಸಂಬಳ ಕಡಿಮೆಯೇ ಆದರೂ ಬದುಕು ಸಾಗುತ್ತಿದೆ. ಲಾಕ್‌ಡೌನ್‌ ವೇಳೆ ಕೆಲಸಕ್ಕೆ ಅಡ್ಡಿಯಾಗದಿದ್ದರೂ ಆತಂಕವೇ ಹೆಚ್ಚು’ ಎನ್ನುತ್ತಾರೆ ರಾಜಾಜಿನಗರದ ಔಷಧ ಮಳಿಗೆಯೊಂದರಲ್ಲಿ ಸಹಾಯಕಿಯಾಗಿರುವ ಎಸ್‌.ಗೀತಾ.

‘ಮನೆಯಲ್ಲೇ ಪ್ರತ್ಯೇಕ ಆರೈಕೆಯಲ್ಲಿ ರುವವರು ತಾವೇ ಬಂದು ಔಷಧ ಖರೀದಿಸುತ್ತಾರೆ. ಒಂದು ವೇಳೆ ಅವರಿಂದ ಸೋಂಕು ತಗುಲಿದರೆ, ಕುಟುಂಬದ ಗತಿಯೇನು ಎಂಬ ಭಯ ಸದಾ ಕಾಡುತ್ತದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.